ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತಬ್ಧಚಿತ್ರ ಕೈಬಿಟ್ಟ ನಿರ್ಧಾರ ಮರುಪರಿಶೀಲನೆ ಇಲ್ಲ: ರಕ್ಷಣಾ ಸಚಿವಾಲಯ

ಗಣರಾಜ್ಯೋತ್ಸವ: ಕೇರಳ, ಪ.ಬಂಗಾಳ ಹಾಗೂ ತಮಿಳುನಾಡು ರಾಜ್ಯಗಳಿಗೆ ಸಿಗದ ಅವಕಾಶ
Last Updated 18 ಜನವರಿ 2022, 14:07 IST
ಅಕ್ಷರ ಗಾತ್ರ

ನವದೆಹಲಿ: ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕೇರಳ, ಪಶ್ಚಿಮ ಬಂಗಾಳ ಹಾಗೂ ತಮಿಳುನಾಡು ರಾಜ್ಯಗಳ ಸ್ತಬ್ಧಚಿತ್ರಗಳನ್ನು ಸೇರಿಸದಿರಲು ಕೈಗೊಂಡಿರುವ ನಿರ್ಧಾರದ ಮರುಪರಿಶೀಲನೆ ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವಾಲಯದ ಹಿರಿಯ ಅಧಿಕಾರಿಗಳು ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ಗಣರಾಜ್ಯೋತ್ಸವ ದಿನ ನಡೆಯುವ ಪರೇಡ್‌ನಲ್ಲಿಸ್ತಬ್ಧಚಿತ್ರಗಳ ಪ್ರದರ್ಶನಕ್ಕಾಗಿ 12 ರಾಜ್ಯಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.

ತಮ್ಮ ರಾಜ್ಯಗಳ ಸ್ತಬ್ಧಚಿತ್ರಗಳಿಗೆ ಅವಕಾಶ ನೀಡದಿರುವ ಕುರಿತು ಈ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಆಕ್ಷೇಪಿಸಿರುವುದು ಹಾಗೂ ಈ ವಿಷಯ ಕುರಿತು ಸೃಷ್ಟಿಯಾಗಿರುವ ವಿವಾದದ ಹಿನ್ನೆಲೆಯಲ್ಲಿ ಸಚಿವಾಲಯದ ಅಧಿಕಾರಿಗಳಿಂದ ಈ ಸ್ಪಷ್ಟನೆ ಹೊರಬಿದ್ದಿದೆ.

ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರುಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಮುಖ್ಯಮಂತ್ರಿಗಳಾದ ಮಮತಾ ಬ್ಯಾನರ್ಜಿ ಹಾಗೂ ಎಂ.ಕೆ.ಸ್ಟಾಲಿನ್‌ ಒತ್ತಾಯಿಸಿದ್ದರು.

ಈ ಮೂರು ರಾಜ್ಯಗಳ ಸ್ತಬ್ಧಚಿತ್ರಗಳನ್ನು ಗಣರಾಜ್ಯೋತ್ಸವ ಪರೇಡ್‌ಗೆ ಪರಿಗಣಿಸದಿರುವುದು ಕೇಂದ್ರ ಸರ್ಕಾರ ಮಾಡಿರುವ ‘ಅವಮಾನ’ ಎಂದು ಕೆಲ ಬಿಜೆಪಿಯೇತರ ಪಕ್ಷಗಳ ಆಡಳಿತ ಇರುವ ರಾಜ್ಯಗಳು ಆರೋಪಿಸಿವೆ.

‘ಈ ಮೂರು ರಾಜ್ಯಗಳ ಮನವಿಗಳನ್ನು ಪರಿಗಣಿಸಲು ಸಾಧ್ಯವಿಲ್ಲ. ಸ್ತಬ್ಧಚಿತ್ರಗಳ ಆಯ್ಕೆಗೆ ಸಂಬಂಧಿಸಿ ಅನುಸರಿಸುವ ಸುದೀರ್ಘ ಪ್ರಕ್ರಿಯೆ ಕುರಿತ ವಿವರಣೆಯೊಂದಿಗೆ ಈ ಮೂರು ರಾಜ್ಯಗಳ ಮುಖ್ಯಮಂತ್ರಿಗಳಿಗೆ ಉತ್ತರವನ್ನೂ ನೀಡಲಾಗಿದೆ’ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದರು.

‘ಸ್ತಬ್ಧಚಿತ್ರಗಳ ಆಯ್ಕೆಗೆ ಸಂಬಂಧಿಸಿ ತಜ್ಞರನ್ನು ಒಳಗೊಂಡ ಸಮಿತಿ ಬಹಳ ಮುಂಚಿತವಾಗಿಯೇ ನಿರ್ಧಾರ ಕೈಗೊಂಡಿರುತ್ತದೆ. ಅಲ್ಲದೇ, ಸ್ತಬ್ಧಚಿತ್ರಗಳನ್ನು ಸಿದ್ಧಪಡಿಸಲು ಸಹ ಸಾಕಷ್ಟು ಸಮಯ ಬೇಕು. ಹೀಗಾಗಿ, ಈ ಕುರಿತ ನಿರ್ಧಾರವನ್ನು ಪರಿಷ್ಕರಿಸಲು ಸಾಧ್ಯವಿಲ್ಲ’ ಎಂದೂ ಹೇಳಿದರು.

12 ರಾಜ್ಯಗಳ ಮಾದರಿಗಳ ಜೊತೆಗೆ, ಸಚಿವಾಲಯಗಳು ಹಾಗೂ ಕೇಂದ್ರ ಸರ್ಕಾರದ ಇಲಾಖೆಗಳ ಒಟ್ಟು 9 ಸ್ತಬ್ಧಚಿತ್ರಗಳನ್ನು ಸಹ ಈ ಬಾರಿ ಪರೇಡ್‌ನಲ್ಲಿ ಪ್ರದರ್ಶಿಸಲಾಗುವುದು ಎಂದರು.

ಮಾರ್ಗಸೂಚಿಗಳ ಅನುಸಾರ ಆಯ್ಕೆ: ರಾಜನಾಥ್‌ ಸಿಂಗ್

ನವದೆಹಲಿ/ಕೋಲ್ಕತ್ತ: ‘ನಿಗದಿ ಮಾಡಿದ ಮಾರ್ಗಸೂಚಿಗಳ ಅನುಸಾರವೇ ಈ ವರ್ಷದ ಗಣರಾಜ್ಯೋತ್ಸವ ಪರೇಡ್‌ಗೆ ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡಲಾಗಿದೆ. ತಮಿಳುನಾಡಿನ ಪ್ರಸ್ತಾವನೆ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯಲಿಲ್ಲ’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಮಂಗಳವಾರ ಹೇಳಿದ್ದಾರೆ.

ಈ ಕುರಿತು ಸ್ಟಾಲಿನ್‌ ಅವರಿಗೆ ಪತ್ರ ಬರೆದಿರುವ ಅವರು, ‘ಮೊದಲ ಮೂರು ಸುತ್ತುಗಳಲ್ಲಿ ರಾಜ್ಯದ ಪ್ರಸ್ತಾವನೆಯನ್ನು ಪರಿಗಣಿಸಲಾಗಿತ್ತು’ ಎಂದು ವಿವರಿಸಿದ್ದಾರೆ.

‘ಆಯಾ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವವರನ್ನು ಒಳಗೊಂಡ ಸಮಿತಿ ಸರಣಿ ಸಭೆಗಳನ್ನು ನಡೆಸುತ್ತದೆ. ಸ್ತಬ್ಧಚಿತ್ರದ ಪರಿಕಲ್ಪನೆ, ವಿನ್ಯಾಸ ಮತ್ತಿತರ ಅಂಶಗಳ ಆಧಾರದ ಮೇಲೆ ಸಮಿತಿಯು ರಾಜ್ಯಗಳು ಸಲ್ಲಿಸುವ ಪ್ರಸ್ತಾವನೆಗಳನ್ನು ಪರಿಶೀಲಿಸಿ, ಶಿಫಾರಸು ಮಾಡುತ್ತದೆ’ ಎಂದೂ ಅವರು ಪತ್ರದಲ್ಲಿ ವಿವರಿಸಿದ್ದಾರೆ.

ಇದೇ ವಿಷಯವಾಗಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೂ ಸಚಿವ ರಾಜನಾಥ್‌ ಸಿಂಗ್‌ ಪತ್ರ ಬರೆದು, ಆ ರಾಜ್ಯದ ಸ್ತಬ್ಧಚಿತ್ರ ಆಯ್ಕೆಯಾಗದಿರುವ ಕುರಿತು ವಿವರಿಸಿದ್ದಾರೆ.

‘ನೇತಾಜಿ ಸುಭಾಶ್ಚಂದ್ರ ಬೋಸ್‌ ಕುರಿತ ಸ್ತಬ್ಧಚಿತ್ರವನ್ನು ಕೇಂದ್ರೀಯ ಲೋಕೋಪಯೋಗಿ ಇಲಾಖೆ ಸಲ್ಲಿಸಿತ್ತು. ಹೀಗಾಗಿ ನೇತಾಜಿ ಅವರಿಗೆ ಸಂಬಂಧಿಸಿದ್ದ ಸ್ತಬ್ಧಚಿತ್ರ ಒಳಗೊಂಡಿದ್ದ ಪಶ್ಚಿಮ ಬಂಗಾಳದ ಪ್ರಸ್ತಾವನೆಯನ್ನು ಪರೇಡ್‌ಗೆ ಪರಿಗಣಿಸಲಿಲ್ಲ’ ಎಂದು ಪತ್ರದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT