ಬುಧವಾರ, ಆಗಸ್ಟ್ 10, 2022
19 °C
ದೃಢವಾದ ಸಾಕ್ಷ್ಯಾಧಾರಗಳು ಇಲ್ಲ: ಲ್ಯಾನ್ಸೆಟ್‌ ವರದಿ

ಮೂರನೇ ಅಲೆ: ಮಕ್ಕಳ ಮೇಲೆ ತೀವ್ರ ಪರಿಣಾಮದ ಸಾಧ್ಯತೆ ಕಡಿಮೆ-ಲ್ಯಾನ್ಸೆಟ್‌ ವರದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್‌–19 ಮೂರನೇ ಅಲೆ ಸಂದರ್ಭದಲ್ಲಿ ಮಕ್ಕಳ ಮೇಲೆ ತೀವ್ರ ತರವಾದ ಪರಿಣಾಮ ಬೀರಲಿದೆ ಎನ್ನುವುದಕ್ಕೆ ದೃಢವಾದ ಸಾಕ್ಷ್ಯಾಧಾರಗಳು ಇಲ್ಲ ಎಂದು ಹೊಸ ಅಧ್ಯಯನ ವರದಿ ತಿಳಿಸಿದೆ.

ಖ್ಯಾತ ಮಕ್ಕಳ ವೈದ್ಯರು ಸೇರಿದಂತೆ ತಜ್ಞರನ್ನು ಒಳಗೊಂಡ ಸಮಿತಿ ಜತೆ ಸಮಾಲೋಚನೆ ನಡೆಸಿದ ಬಳಿಕ ಲ್ಯಾನ್ಸೆಟ್‌ ಕೋವಿಡ್‌–19 ಆಯೋಗದ ಭಾರತೀಯ ಕಾರ್ಯಪಡೆ ಈ ಬಗ್ಗೆ ವರದಿ ಸಿದ್ಧಪಡಿಸಿದೆ.

ಕೋವಿಡ್‌–19 ಕಾಣಿಸಿಕೊಳ್ಳುವ ಬಹುತೇಕ ಮಕ್ಕಳಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಜ್ವರ ಮತ್ತು ಉಸಿರಾಟದ ತೊಂದರೆ ಸೋಂಕಿಗೆ ಒಳಗಾಗುವ ಮಕ್ಕಳಲ್ಲಿ ಕಾಣಬಹುದಾಗಿದೆ. ಜತೆಗೆ, ವಾಂತಿ, ಹೊಟ್ಟೆಯಲ್ಲಿ ನೋವು ಸಹ ಉಂಟಾಗಬಹುದು ಎಂದು ವರದಿಯಲ್ಲಿ ವಿವರಿಸಲಾಗಿದೆ.

ಕೋವಿಡ್‌–19 ಎರಡೂ ಅಲೆಯ ಸಂದರ್ಭದಲ್ಲಿ ಸೋಂಕಿಗೆ ಒಳಗಾದ ಒಟ್ಟು ಮಕ್ಕಳ ಬಗ್ಗೆ ಖಚಿತವಾದ ರಾಷ್ಟ್ರಮಟ್ಟದ ಮಾಹಿತಿ ಮತ್ತು ಕ್ಲಿನಿಕಲ್‌ ವಿಶ್ಲೇಷಣೆ ಲಭ್ಯವಾಗದ ಕಾರಣ ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿನ 10 ಆಸ್ಪತ್ರೆಗಳಲ್ಲಿ ದಾಖಲಾಗಿದ್ದ ಸುಮಾರು 2600 ಮಕ್ಕಳ ಬಗ್ಗೆ ಅಧ್ಯಯನ ಕೈಗೊಳ್ಳಲಾಗಿತ್ತು. ಇವರೆಲ್ಲರೂ 10 ವರ್ಷದ ಒಳಗಿನವರು. ನವಜಾತ ಶಿಶುಗಳನ್ನು ಅಧ್ಯಯನಕ್ಕೆ ಪರಿಗಣಿಸಿಲ್ಲ ಎಂದು ತಿಳಿಸಿದೆ.

ಅಧ್ಯಯನಕ್ಕೆ ಗುರುತಿಸಲಾಗಿದ್ದ 10 ವರ್ಷದ ಮಕ್ಕಳಲ್ಲಿನ ಮರಣ ಪ್ರಮಾಣವು ಶೇಕಡ 2.4ರಷ್ಟು ಇತ್ತು. ಈ ಸಾವಿಗೀಡಾದ ಮಕ್ಕಳು ವಿವಿಧ ಕಾಯಿಲೆಗಳಿಗೂ ತುತ್ತಾಗಿದ್ದರು. ಸೋಂಕಿಗೆ ಒಳಗಾಗಿದ್ದ ಶೇಕಡ 9ರಷ್ಟು ಮಕ್ಕಳು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಎರನೇ ಅಲೆಯ ಸಂದರ್ಭದಲ್ಲಿ ಇದೇ ರೀತಿಯ ಲಕ್ಷಣಗಳು ಕಂಡು ಬಂದಿವೆ ಎಂದು ತಿಳಿಸಿದೆ.

ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ  (ಏಮ್ಸ್‌) ಶೇಫಾಲಿ ಗುಲಾಟಿ, ಸುಶೀಲ್‌ ಕೆ. ಕಬ್ರಾ ಮತ್ತು ರಾಕೇಶ್‌ ಲೋಧಾ ಅವರು ಈ ಅಧ್ಯಯನದಲ್ಲಿ ಪಾಲ್ಗೊಂಡಿದ್ದರು.

‘ಕೋವಿಡ್‌–19 ಒಳಗಾದವರಲ್ಲಿ ಶೇಕಡ 5ಕ್ಕೂ ಕಡಿಮೆ ಮಕ್ಕಳು ಆಸ್ಪತ್ರೆಗೆ ದಾಖಲಾಗುವುದು ಅಗತ್ಯವಾಗುತ್ತದೆ. ಅಂದರೆ 1 ಲಕ್ಷ ಮಕ್ಕಳಲ್ಲಿ 500 ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸುವುದು ಅನಿವಾರ್ಯವಾಗುತ್ತದೆ ಮತ್ತು ಶೇಕಡ 2ರಷ್ಟು ಮಾತ್ರ ಮಕ್ಕಳಲ್ಲಿ ಮರಣ ಪ್ರಮಾಣ ಕಂಡು ಬಂದಿದೆ. ಡಯಾಬಿಟಿಸ್‌, ಕ್ಯಾನ್ಸರ್‌, ಅನಿಮಿಯಾ, ಅಪೌಷ್ಟಿಕತೆ ಇರುವ ಮಕ್ಕಳು ಸೋಂಕಿಗೆ ಒಳಗಾದರೆ ಸಾವಿಗೀಡಾಗುವ ಸಾಧ್ಯತೆ ಹೆಚ್ಚಾಗಿರುವುದು ಕಂಡು ಬಂದಿದೆ. ಉಳಿದಂತೆ, ಸಾಮಾನ್ಯ ಮಕ್ಕಳಲ್ಲಿ ಈ ಕಾಯಿಲೆ ಕಡಿಮೆ ತೀವ್ರತೆ ಇರುವುದು ಕಂಡು ಬಂದಿದೆ’ ಎಂದು ಕಬ್ರಾ ವಿವರಿಸಿದ್ದಾರೆ.

‘ಲಸಿಕೆ ಹಾಕುವುದು, ಪೌಷ್ಟಿಕ ಆಹಾರ ಒದಗಿಸುವುದು, ತೀ‌ವ್ರ ಅಪಾಯಕ್ಕೆ ಒಳಗಾಗುವ ರೋಗಿಗಳನ್ನು ಗುರುತಿಸಿ ಚಿಕಿತ್ಸೆ ನೀಡುವುದು ಸೇರಿದಂತೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು