ಶುಕ್ರವಾರ, ಮೇ 27, 2022
21 °C

ಬಿಜೆಪಿಯೇತರ ಮುಖ್ಯಮಂತ್ರಿಗಳಿಂದ ಮುಂಬೈಯಲ್ಲಿ ಸಭೆ ಸಾಧ್ಯತೆ: ಸಂಜಯ್ ರಾವುತ್

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ದೇಶದ ಸದ್ಯದ ರಾಜಕೀಯದ ಬಗ್ಗೆ ಚರ್ಚಿಸಲು ಬಿಜೆಪಿಯೇತರ ಸರ್ಕಾರಗಳು ಅಸ್ತಿತ್ವದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮುಂಬೈಯಲ್ಲಿ ಸಭೆ ಸೇರುವ ಸಾಧ್ಯತೆ ಇದೆ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಹೇಳಿದ್ದಾರೆ.

ದೇಶದ ಸದ್ಯದ ಸ್ಥಿತಿಯ ಬಗ್ಗೆ ಚರ್ಚಿಸಬೇಕಾದ ಅಗತ್ಯವಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಿಜೆಪಿಯೇತರ ಸರ್ಕಾರಗಳಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

‘ಈ ವಿಚಾರವಾಗಿ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮಾತುಕತೆ ನಡೆಸಿದ್ದಾರೆ. ಅಂಥ ಸಭೆಯನ್ನು ಮುಂಬೈಯಲ್ಲಿ ಆಯೋಜಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ರಾವುತ್ ಹೇಳಿದ್ದಾರೆ.

ನಿರುದ್ಯೋಗ, ಹಣದುಬ್ಬರ, ಕೇಂದ್ರೀಯ ತನಿಖಾ ಸಂಸ್ಥೆಗಳ ದುರುಪಯೋಗ, ಕೋಮು ದ್ವೇಷ ಸೃಷ್ಟಿಸಲು ನಡೆಯುತ್ತಿರುವ ಯತ್ನ ಸೇರಿದಂತೆ ಅನೇಕ ವಿಚಾರಗಳು ಸಭೆಯಲ್ಲಿ ಚರ್ಚೆಗೆ ಬರಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ದೇಶದ ಹಲವೆಡೆ ಇತ್ತೀಚಿನ ದ್ವೇಷ ಭಾಷಣ ಮತ್ತು ಕೋಮು ಗಲಭೆ ಪ್ರಕರಣಗಳ ಕುರಿತು ತೀವ್ರವಾಗಿ ಕಳವಳ ವ್ಯಕ್ತಪಡಿಸಿರುವ 13 ವಿರೋಧ ಪಕ್ಷಗಳು ಶನಿವಾರ ಜಂಟಿ ಹೇಳಿಕೆ ಹೊರಡಿಸಿದ್ದವು. ಇದರ ಬೆನ್ನಲ್ಲೇ ಪ್ರತಿಪಕ್ಷಗಳ ಸಭೆ ಆಯೋಜನೆ ಬಗ್ಗೆ ರಾವುತ್ ಅವರ ಹೇಳಿಕೆ ಮೂಡಿಬಂದಿದೆ.

ಆಹಾರ, ವಸ್ತ್ರ, ನಂಬಿಕೆ, ಹಬ್ಬ ಮತ್ತು ಭಾಷೆ ಮುಂತಾದ ವಿಚಾರಗಳನ್ನು ಸಮಾಜವನ್ನು ದ್ರುವೀಕರಿಸಲು ಸರ್ಕಾರಗಳು ಬಳಸುತ್ತಿರುವುದರ ಕುರಿತು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಮತ್ತು ಜಾರ್ಖಂಡ್‌ ಮುಖ್ಯಮಂತ್ರಿ ಹೇಮಂತ್‌ ಸೊರೇನ್‌ ಅವರು ಜಂಟಿ ಹೇಳಿಕೆಯಲ್ಲಿ ಆತಂಕ ವ್ಯಕ್ತಪಡಿಸಿದ್ದರು. ಜೊತೆಗೆ, ಕೋಮು ಗಲಭೆ ಹುಟ್ಟುಹಾಕುವವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು