ಭಾನುವಾರ, ಜೂನ್ 26, 2022
22 °C

ತೆಲಂಗಾಣ: ಜೋಗುಳಾಂಬ ದೇಗುಲದ ಆವರಣದಲ್ಲಿರುವ ದರ್ಗಾ ತೆರವು ಮಾಡಿ– ಬಿಜೆಪಿ ನಾಯಕ

ಪ್ರಸಾದ್‌ ನಿಚ್ಚೆನಮೆಟ್ಲ Updated:

ಅಕ್ಷರ ಗಾತ್ರ : | |

ಹೈದರಾಬಾದ್: ಜ್ಞಾನವಾಪಿ, ಮಥುರಾ ಮಸೀದಿಗಳ ವಿವಾದದ ಬೆನ್ನಲ್ಲೇ ದಕ್ಷಿಣ ತೆಲಂಗಾಣದ ಅಲಂಪುರದಲ್ಲಿರುವ ಪ್ರಸಿದ್ಧ ಜೋಗುಳಾಂಬ ದೇಗುಲದ ಆವರಣದಲ್ಲಿರುವ ದರ್ಗಾ ಬಗ್ಗೆ ಸ್ಥಳೀಯ ಬಿಜೆಪಿ ನಾಯಕರೊಬ್ಬರು ಆಕ್ಷೇಪ ಎತ್ತಿದ್ದಾರೆ.

ಪ್ರಾಚೀನ ದೇಗುಲದ ಆವರಣದಲ್ಲಿರುವ ಹಿಂದೂಯೇತರ ಧರ್ಮದ ರಚನೆಯನ್ನು ತೆರವು ಮಾಡುವಂತೆ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರನ್ನು ಒತ್ತಾಯಿಸಿರುವ ಬಿಜೆಪಿ ಮುಖಂಡ ರಾಜಾ ಸಿಂಗ್, ನೀವು ಮಾಡದಿದ್ದರೆ 2023ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಾವು ಅದನ್ನು ಮಾಡುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

ದೇಶದ 18 ಶಕ್ತಿಪೀಠಗಳಲ್ಲಿ ಒಂದು ಎಂದು ಪರಿಗಣಿಸಲಾದ ಈ ಜೋಗುಳಾಂಬ ದೇವಿಯ ದೇಗುಲವು, ಹಿಂದೂಗಳ ಅತ್ಯಂತ ಪುರಾತನ ಧಾರ್ಮಿಕ ಕೇಂದ್ರ ಎಂದು ನಂಬಲಾಗಿದೆ. ಚಾಲುಕ್ಯರ ವಾಸ್ತುಶಿಲ್ಪ ಹೊಂದಿರುವ ಈ ದೇಗುಲ, ಆಂಧ್ರಪ್ರದೇಶ-ತೆಲಂಗಾಣ ಗಡಿಯ ಕೃಷ್ಣಾ ಮತ್ತು ತುಂಗಭದ್ರಾ ನದಿಗಳ ಸಂಗಮದ ಬಳಿ ಇದೆ.

ಈ ದೇಗುಲಕ್ಕೆ ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕದಿಂದ ಲಕ್ಷಾಂತರ ಭಕ್ತರು ಪ್ರತೀ ವರ್ಷ ಭೇಟಿ ನೀಡುತ್ತಾರೆ.

ಈ ಬಗ್ಗೆ ಭಾರತೀಯ ಪುರಾತತ್ವ ಇಲಾಖೆಗೆ ಪತ್ರ ಬರೆದಿರುವ ತೆಲಂಗಾಣ ವಿಧಾನಸಭೆಯ ಬಿಜೆಪಿ ನಾಯಕ ರಾಜಾ ಸಿಂಗ್, ಕೆಲ ವರ್ಷಗಳ ಹಿಂದೆ ದೇವಾಲಯದ ಆವರಣದಲ್ಲಿ ಇದ್ದಕ್ಕಿದ್ದಂತೆ ದರ್ಗಾ ಕಾಣಿಸಿಕೊಂಡಿತ್ತು. ರಾತ್ರೋರಾತ್ರಿ ಕಮಾನು ನಿರ್ಮಿಸಲಾಗಿತ್ತು ಎಂದು ತಿಳಿಸಿದ್ದಾರೆ.

‘ಆದರೆ, ಹಿಂದೂ ದೇಗುಲದ ಜಾಗ ಅತಿಕ್ರಮಣದ ವಿರುದ್ಧ ಸರ್ಕಾರದ ಇಲಾಖೆಗಳು ಯಾವುದೇ ಕ್ರಮ ಜರುಗಿಸಲಿಲ್ಲ’ ಎಂದು ಗೋಶಮಹಲ್ ಕ್ಷೇತ್ರದ ಶಾಸಕರು ಮೇ, 17, 2022ರ ದಿನಾಂಕವಿರುವ ಪತ್ರದಲ್ಲಿ ಆರೋಪಿಸಿದ್ದಾರೆ.

‘ಈ ಹಿನ್ನೆಲೆಯಲ್ಲಿ ಪುರಾತತ್ವ ಇಲಾಖೆಯು ಈ ಬಗ್ಗೆ ಗಮನ ಹರಿಸಿ, ಈ ಜಾತ್ಯತೀತ ದೇಶದ ಹಿಂದೂಗಳ ಗೌರವದ ಸಂಕೇತವಾಗಿ ಪ್ರಾಚೀನ ಜೋಗುಳಾಂಬ ಶಕ್ತಿ ಪೀಠದ ಆವರಣದಲ್ಲಿರುವ ಹಿಂದೂಯೇತರ ರಚನೆಯನ್ನು ತೆಗೆದು ಹಾಕಬೇಕೆಂದು ಮನವಿ ಮಾಡುತ್ತೇನೆ’ ಎಂದು ಹೈದರಾಬಾದ್‌ನ ಪುರಾತತ್ವ ಇಲಾಖೆಯ ಕಚೇರಿಗೆ ಬರೆದಿರುವ ಪತ್ರದಲ್ಲಿ ಅವರು ತಿಳಿಸಿದ್ದಾರೆ.

ಟ್ವಿಟರ್‌ನಲ್ಲಿ ಈ ಪತ್ರದ ಜೊತೆ ದೇಗುಲ ಆವರಣದ ವಿಡಿಯೊ ತುಣುಕನ್ನೂ ಸಹ ಸಿಂಗ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ.. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು