ಶನಿವಾರ, ಆಗಸ್ಟ್ 13, 2022
26 °C
ಪೊದ್ದಟೂರು: ವೈಎಸ್‌ಆರ್‌ ಕಾಂಗ್ರೆಸ್‌ ನಡೆ ವಿರುದ್ಧ ಬಿಜೆಪಿ ಆಕ್ರೋಶ

ಈಗ ಆಂಧ್ರದಲ್ಲೂ ಟಿಪ್ಪು ಸುಲ್ತಾನ್‌ ವಿವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್‌: ಆಂಧ್ರಪ್ರದೇಶದ ಕಡಪ ಜಿಲ್ಲೆಯ ಪ್ರೊದ್ದಟೂರು ಪಟ್ಟಣದಲ್ಲಿ ಟಿಪ್ಪು ಸುಲ್ತಾನ್‌ ಪ್ರತಿಮೆ ಪ್ರತಿಷ್ಠಾಪನೆ ವಿಷಯ ಈಗ ವಿವಾದಕ್ಕೆ ಕಾರಣವಾಗಿದೆ.

ಪಟ್ಟಣದ ಮುಸ್ಲಿಂ ಸಮುದಾಯದ ಬೇಡಿಕೆಗೆ ಸ್ಪಂದಿಸಿ, ಟಿಪ್ಪು ಸುಲ್ತಾನ್‌ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ವೈಎಸ್‌ಆರ್‌ ಕಾಂಗ್ರೆಸ್‌ ಶಾಸಕ ರಾಚಮಲ್ಲು ಶಿವಪ್ರಸಾದ್ ರೆಡ್ಡಿ ಮುಂದಾಗಿದ್ದಾರೆ. ಈ ಸಂಬಂಧ ಶಂಕುಸ್ಥಾಪನೆಯನ್ನು ಸಹ ನೆರವೇರಿಸಲಾಗಿದೆ. ಆದರೆ, ಇದಕ್ಕೆ ಸ್ಥಳೀಯರು ಹಾಗೂ ಬಿಜೆಪಿ ಮುಖಂಡರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

'ಟಿಪ್ಪು ಸುಲ್ತಾನ್‌ ಹಿಂದೂ ಪೀಡಕ’ ಎಂದು ಟೀಕಿಸಿರುವ ಬಿಜೆಪಿ ಮುಖಂಡರು, ಯಾವುದೇ ಕಾರಣಕ್ಕೂ ಪ್ರತಿಮೆ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ. ಈ ನಡೆಯನ್ನು ವಿರೋಧಿಸಿ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು. ಒಂದು ವೇಳೆ ಪ್ರತಿಮೆಯನ್ನು ಸ್ಥಾಪಿಸಿದ್ದೇ ಆದಲ್ಲಿ, ಅದನ್ನು ಧ್ವಂಸಗೊಳಿಸಲಾಗುವುದು ಎಂದೂ ಎಚ್ಚರಿಕೆ ನೀಡಿದ್ದಾರೆ.

ಪ್ರೊದ್ದಟೂರಿನ ಜಿನ್ನಾ ರೋಡ್‌ ವೃತ್ತದಲ್ಲಿ ಟಿಪ್ಪು ಸುಲ್ತಾನ್‌ ಪ್ರತಿಮೆಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಬಿಜೆಪಿಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವಿಷ್ಣುವರ್ಧನ್ ರೆಡ್ಡಿ ಹಾಗೂ ಇತರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು, ನಂತರ ಬಿಡುಗಡೆ ಮಾಡಿದರು.

‘ವೈಎಸ್‌ಆರ್‌ ಕಾಂಗ್ರೆಸ್‌ ಓಲೈಕೆ ರಾಜಕಾರಣ ಮಾಡುತ್ತಿದೆ’ ಎಂದು ವಿಷ್ಣುವರ್ಧನ್‌ ರೆಡ್ಡಿ ಟೀಕಿಸಿದರು.

‘ಟಿಪ್ಪು ಸುಲ್ತಾನ್‌ ಕುರಿತಾದ ವಿವಾದದ ಬಗ್ಗೆ ನನಗೆ ಅರಿವಿಲ್ಲ. ಒಂದು ವೇಳೆ  ಹಿಂದೂಗಳ ಮೇಲೆ ಟಿಪ್ಪು ಸುಲ್ತಾನ್‌ ದೌರ್ಜನ್ಯ ನಡೆಸಿದ್ದು ನಿಜವೇ ಆಗಿದ್ದಲ್ಲಿ, ಬೆಂಗಳೂರು ಹಾಗೂ ಇತರ ಪ್ರದೇಶಗಳಲ್ಲಿರುವ ಟಿಪ್ಪು ಪ್ರತಿಮೆಗಳು ಹಾಗೂ ಇತರ ಸ್ಮಾರಕಗಳನ್ನು ಕರ್ನಾಟಕ ಸರ್ಕಾರ ಏಕೆ ತೆರವುಗೊಳಿಸಿಲ್ಲ’ ಎಂದು ಶಾಸಕ ರಾಚಮಲ್ಲು ಶಿವಪ್ರಸಾದ್‌ ರೆಡ್ಡಿ ಪ್ರಶ್ನಿಸಿದ್ದಾರೆ.

ಟಿಪ್ಪು ಸುಲ್ತಾನ್, ಕಡಪ ನವಾಬರ ಮಗಳನ್ನು ವಿವಾಹವಾಗಿದ್ದ ಎಂದು ಇತಿಹಾಸ ಹೇಳುತ್ತದೆ. ಅಲ್ಲದೇ, ಕರ್ನೂಲು, ಅನಂತಪುರ, ಚಿತ್ತೂರು ಜಿಲ್ಲೆಗಳಲ್ಲಿ ಮುಸ್ಲಿಮರ ಸಂಖ್ಯೆಯೂ ಅಧಿಕ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು