ಸ್ಟ್ಯಾನ್ ಸ್ವಾಮಿ ಇರುವ ಜೈಲಿಗೆ ಸ್ಟ್ರಾ, ಸಿಪ್ಪರ್ ಕಳುಹಿಸಲು ಮುಂದಾದ ಸಂಸ್ಥೆ

ನವದೆಹಲಿ: ಸದ್ಯ ಜೈಲಿನಲ್ಲಿ ಇರುವ ಬುಡಕಟ್ಟು ಸಮುದಾಯದ ಹೋರಾಟಗಾರ, ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿರುವ ಸ್ಟ್ಯಾನ್ ಸ್ವಾಮಿ ಅವರಿಗೆ ನೀರು ಕುಡಿಯುವ ಪರಿಕರ (ಸಿಪ್ಪರ್ ಮತ್ತು ಸ್ಟ್ರಾ) ಪೂರೈಸಲು ಅಂಗವಿಕಲರ ಪರ ಹೋರಾಟ ಸಂಸ್ಥೆ ಎನ್ಪಿಆರ್ಡಿ ನಿರ್ಧರಿಸಿದೆ. ಇತರೆ ಸಂಘಟನೆಗಳೂ ಇಂಥ ಕಾರ್ಯಕ್ಕೆ ಮುಂದಾಗುವಂತೆ ಕೋರಿದೆ.
83 ವರ್ಷದ ಸ್ಟ್ಯಾನ್ ಸ್ವಾಮಿ ಅವರನ್ನು ಅಕ್ಟೋಬರ್ 8ರಂದು ರಾಂಚಿಯ ಅವರ ನಿವಾಸದಿಂದ ಎಲ್ಗಾರ್ ಪರಿಷತ್ ಪ್ರಕರಣದ ಸಂಬಂಧ ಬಂಧಿಸಲಾಗಿದ್ದು, ಮುಂಬೈನ ತಲೋಜಾ ಜೈಲಿನಲ್ಲಿ ಇಡಲಾಗಿದೆ.
ಇದನ್ನೂ ಓದಿ: ಭೀಮಾ ಕೊರೆಗಾಂವ್ ಹಿಂಸಾಚಾರ ಪ್ರಕರಣ : ಸ್ಟ್ಯಾನ್ ಸ್ವಾಮಿ ಬಂಧನ
ಮುಂಬೈನ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಅವರು ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿರುವ ತಮಗೆ ಲೋಟ ಹಿಡಿಯಲಾಗದು. ಹೀಗಾಗಿ, ಸ್ಟ್ರಾ ಅಥವಾ ಸಿಪ್ಪರ್ ಒದಗಿಸಬೇಕು ಎಂದು ಕೋರಿದ್ದರು. ಈ ಕೋರಿಕೆಯನ್ನು ತಿರಸ್ಕರಿಸಿದ್ದ ನ್ಯಾಯಾಲಯ, ಪ್ರತಿಕ್ರಿಯೆ ದಾಖಲಿಸಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಗೆ ಸೂಚಿಸಿತ್ತು. ಅರ್ಜಿಯು ವಿಚಾರಣೆ ಡಿ.4ರಂದು ನಡೆಯಲಿದೆ.
ಈ ಮೊದಲು ತನಿಖಾ ಸಂಸ್ಥೆಯು ಅರ್ಜಿದಾರರ ಮನವಿ ಕುರಿತು ಪ್ರತಿಕ್ರಿಯಿಸಲು 20 ದಿನದ ಅವಧಿ ಕೋರಿತ್ತು. ಬಳಿಕ ಕಾರ್ಯಕರ್ತ ತನ್ನ ಅರ್ಜಿಯಲ್ಲಿ ತಿಳಿಸಿರುವಂತೆ, ಅವರನ್ನು ಬಂಧಿಸುವ ಸಂದರ್ಭದಲ್ಲಿ ಇವುಗಳನ್ನು ವಶಕ್ಕೆ ಪಡೆದಿಲ್ಲ ಎಂದು ತಿಳಿಸಿತ್ತು.
ಇದನ್ನೂ ಓದಿ: ಫಾದರ್ ಸ್ಟ್ಯಾನ್ ಸ್ವಾಮಿ ಬಿಡುಗಡೆಗೆ ಆಗ್ರಹ
ಇದರ ಬೆನ್ನಲ್ಲೇ ಜೈಲಿಗೆ ಸಿಪ್ಪರ್ ಮತ್ತು ಸ್ಟ್ರಾ ಕಳುಹಿಸಲು ಮುಂದಾಗಿರುವ ಸೇವಾ ಸಂಸ್ಥೆ ಎನ್ಪಿಆರ್ಡಿ, ಇನ್ನಷ್ಟು ದಿನ ಸ್ವಾಮಿ ಅವರು ಈ ನೋವನ್ನು ಸಹಿಸಿಕೊಳ್ಳಲಾಗದು. ದೀರ್ಘ ಕಾಲ ಅವರು ದ್ರವ ಪದಾರ್ಥ ಸೇವಿಸದಂತೆ ನಿರಾಕರಿಸಲೂ ಆಗದು. ಹೀಗಾಗಿ, ಜೈಲಿಗೆ ಇವುಗಳನ್ನು ಕಳುಹಿಸುತ್ತಿದ್ದೇವೆ ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.