ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಮ್ಲಜನಕ ಸಂಕಷ್ಟ: ನೋಯ್ಡಾ ನಿವಾಸಿಗಳೇ ರೂಪಿಸಿದರು ಕೋವಿಡ್ ಆರೈಕೆ ಕೇಂದ್ರ

Last Updated 16 ಮೇ 2021, 15:38 IST
ಅಕ್ಷರ ಗಾತ್ರ

ನವದೆಹಲಿ: ಆಸ್ಪತ್ರೆಯ ಹುಡುಕಾಟದಲ್ಲಿಯೇ ಮಹಿಳೆಯೊಬ್ಬರು ಪ್ರಾಣಬಿಟ್ಟ ಘಟನೆಯ ನಂತರ ಎಚ್ಚೆತ್ತುಕೊಂಡ ಕೆಲ ನಿವಾಸಿಗಳು ಒಟ್ಟಾಗಿ ನೋಯ್ಡಾದಲ್ಲಿ ಆಮ್ಲಜನಕ ಸೌಲಭ್ಯವುಳ್ಳ ಕೋವಿಡ್‌ ಆರೈಕೆ ಕೇಂದ್ರ ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆಮ್ಲಜನಕ ಸೌಲಭ್ಯಯುಕ್ತ ಒಂದು ಹಾಸಿಗೆಯೊಂದಿಗೆ ನೋಯ್ಡಾದ ಸೆಕ್ಟರ್‌ 50ರಲ್ಲಿ ಮೇ 1ರಂದು ಆರಂಭವಾದ ಕೇಂದ್ರದಲ್ಲಿ ಈಗ ಇಂತಹ 14 ಹಾಸಿಗೆಗಳಿವೆ. ಕೋವಿಡ್ ಪೀಡಿತರ ಜೀವ ರಕ್ಷಣೆಗೆ ಕೇಂದ್ರ ನೆರವಾಗುತ್ತಿದೆ.

‘ಆಮ್ಲಜನಕ ಮಟ್ಟ 35ಕ್ಕೆ ಇಳಿದಿದ್ದ ಒಬ್ಬರಿಗೆ ಕೇಂದ್ರದ ನರ್ಸ್ ಕೂಡಲೇ ಆಮ್ಲಜನಕ ಸೇವೆ ಒದಗಿಸಿದ್ದು, ಜೀವ ಉಳಿಸಲು ಶಕ್ತರಾಗಿದ್ದೇವೆ’ ಎಂದು ನಿವಾಸಿಗಳ ಕಲ್ಯಾಣ ಸಂಘದ ಸದಸ್ಯರಾದ ಅಂಚಲ್‌ ಬೋಹ್ರಾ ಅವರು ತಿಳಿಸಿದರು.

ಜಿಲ್ಲಾ ಅಧಿಕಾರಿಗಳ ಜೊತೆ ಸಂಪರ್ಕ ಸಾಧಿಸಿ ರೋಗಿಗೆ ಐಸಿಯು ಬೆಡ್ ಒದಗಿಸಲಾಗಿದೆ. ವೆಂಟಿಲೇಟರ್‌ ನೆರವಿನಲ್ಲಿ ಇದ್ದರೂ ಸದ್ಯ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದರು.

ಸಂಘದ ಅಧ್ಯಕ್ಷ ವಿಮಲ್‌ ಶರ್ಮಾ ಅವರು, ‘ಆದರೆ, ಏಪ್ರಿಲ್‌ 28ರಂದು ಒಬ್ಬರಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಸೌಲಭ್ಯ ಸಿಗಲಿಲ್ಲ. ಕಾರಿನಲ್ಲಿ ತಿರುಗಾಡಿದರೂ ಪ್ರಯೋಜನವಾಗಲಿಲ್ಲ. ಮಹಿಳೆ ಕಾರಿನಲ್ಲಿಯೇ ಪ್ರಾಣ ತ್ಯಜಿಸಿದ್ದರು’ ಎಂದು ಸ್ಮರಿಸಿದರು.

ಆ ಘಟನೆಯ ನಂತರ ನಾವು ಆಮ್ಲಜನಕ ಸಿಲಿಂಡರ್ ವ್ಯವಸ್ಥೆಯನ್ನು ಮಾಡಿಕೊಂಡಿದ್ದು ಐಸೊಲೇಷನ್‌ ಸೌಲಭ್ಯ ಸ್ಥಾಪಿಸಿಕೊಂಡೆವು ಎಂದು ಶರ್ಮಾ ಸ್ಮರಿಸಿದರು.

ಸದ್ಯ, ಈ ಸೌಲಭ್ಯವು ದಿನದ 24 ಗಂಟೆ ಕಾರ್ಯನಿರ್ವಹಿಸುತ್ತಿದೆ. ಆನ್‌ಲೈನ್‌ ಮೂಲಕವು ವೈದ್ಯರ ಸಮಾಲೋಚನೆಗೆ ವ್ಯವಸ್ಥೆ ಮಾಡಿದೆ. ಹೆಲ್ಪ್‌ಡೆಸ್ಕ್‌ ರಚಿಸಲಾಗಿದೆ ಎಂದು ತಿಳಿಸಿದರು.

ಸದ್ಯ, ಕೇಂದ್ರದಲ್ಲಿ ಗರಿಷ್ಠ 9 ರೋಗಿಗಳು ಸೇವೆ ಪಡೆದಿದ್ದು, ಸಿಬ್ಬಂದಿ ಅಗತ್ಯ ಆರೈಕೆಯನ್ನು ಮಾಡಿದ್ದಾರೆ. ಭಾನುವಾರ ಒಬ್ಬ ರೋಗಿಯೂ ಇರಲಿಲ್ಲ. ಬಹುಶಃ ಪ್ರಕರಣ ಸಂಖ್ಯೆ ಕಡಿಮೆ ಆಗಿರುವುದು ಕಾರಣ ಇರಬಹುದು ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT