ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿ 20 ರಾಷ್ಟ್ರಗಳ ಹಣಕಾಸು ಪ್ರಮುಖರ ಸಭೆಗೆ ಸಜ್ಜು

ಫೆ. 24ರಂದು ಬೆಂಗಳೂರಿನಲ್ಲಿ ಆರಂಭ* ಜಾಗತಿಕ ಆರ್ಥಿಕತೆಯ ಸವಾಲುಗಳ ಬಗ್ಗೆ ಚರ್ಚೆ
Last Updated 21 ಫೆಬ್ರುವರಿ 2023, 22:00 IST
ಅಕ್ಷರ ಗಾತ್ರ

ನವದೆಹಲಿ: ಭಾರತವು ಜಿ 20 ಶೃಂಗಸಭೆ ಅಧ್ಯಕ್ಷತೆಯನ್ನು ವಹಿಸಿಕೊಂಡ ಬಳಿಕ ಜಿ 20 ಶೃಂಗದ ಸದಸ್ಯ ರಾಷ್ಟ್ರಗಳ ಮೊದಲ ಪ್ರಮುಖ ಸಭೆ ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಸಿದ್ಧತೆಗಳು ನಡೆದಿವೆ.

ಫೆ. 24, 25ರಂದು ನಡೆಯುವ ಸಭೆಯಲ್ಲಿ ಸದಸ್ಯ ರಾಷ್ಟ್ರಗಳ ಹಣಕಾಸು ಸಚಿವರು ಭಾಗವಹಿಸುತ್ತಿದ್ದಾರೆ. ಉಕ್ರೇನ್‌ –ರಷ್ಯಾ ಯುದ್ಧ ಆರಂಭವಾಗಿ ವರ್ಷವಾಗುತ್ತಿರುವ ಹೊತ್ತಿನಲ್ಲಿಯೇ ಈ ಸಭೆ ನಡೆಯುತ್ತಿದೆ.

ಮಹತ್ವದ ಈ ಸಭೆಗೆ ರಷ್ಯಾ ತನ್ನ ಹಣಕಾಸು ಸಚಿವರನ್ನು ಕಳುಹಿಸುವುದನ್ನು ದೃಢಪಡಿಸಿಲ್ಲ. ಮೂಲಗಳ ಪ್ರಕಾರ, ರಷ್ಯಾ ಸರ್ಕಾರ ಬಹುತೇಕ ಕೆಳಹಂತದ ಅಧಿಕಾರಿಯೊಬ್ಬರನ್ನು ಕಳುಹಿಸುವ ಸಾಧ್ಯತೆಗಳಿವೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮತ್ತು ರಿಸರ್ವ್‌ ಬ್ಯಾಂಕ್‌ನ ಗವರ್ನರ್ ಶಕ್ತಿಕಾಂತ ದಾಸ್‌ ಸದಸ್ಯ ರಾಷ್ಟ್ರಗಳ ಅತಿಥಿಗಳನ್ನು ಬರಮಾಡಿಕೊಳ್ಳುವರು.

ಉಕ್ರೇನ್ ಮೇಲಿನ ರಷ್ಯಾದ ಸೇನಾ ಅತಿಕ್ರಮಣ, ಜಾಗತಿಕ ಆರ್ಥಿಕತೆಯ ಮೇಲೆ ಇದರ ಪರಿಣಾಮ ಕುರಿತು ಚರ್ಚಿಸಲು ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ವೇದಿಕೆಯಾಗಿ ಬಳಸಿಕೊಳ್ಳುವ ಸಂಭವವಿದೆ.

ಆತಿಥ್ಯ ವಹಿಸಿರುವ ಭಾರತವು ರಷ್ಯಾ ಜೊತೆಗಿನ ದಶಕಗಳಷ್ಟು ಹಳೆಯ ಬಾಂಧವ್ಯ ಮುಂದುವರಿಸುವುದರ ಜೊತೆಗೆ, ಇತರೆ ರಾಷ್ಟ್ರಗಳ ಜೊತೆಗಿನ ಬಾಂಧವ್ಯ ವೃದ್ಧಿಗೂ ಒತ್ತು ನೀಡುವ ಕಾರ್ಯತಂತ್ರ ಅನುಸರಿಸಲಿದೆ. ಅಲ್ಲದೆ, ರಷ್ಯಾದ ವಿರುದ್ಧ ಟೀಕೆಗಷ್ಟೇ ಸಭೆಯು ಬಳಕೆಯಾಗಬಾರದು ಎಂದು ಬಯಸಿದೆ.

ಅಮೆರಿಕದ ಆರ್ಥಿಕ ಇಲಾಖೆ ಕಾರ್ಯದರ್ಶಿ ಜನೆಟ್‌ ಎಲ್ ಯೆಲ್ಲೆನ್‌ ಅವರು ಭಾಗವಹಿಸಲಿದ್ದಾರೆ. ದೃಢ ಮತ್ತು ಪರಿಣಾಮಕಾರಿಯಾದ ಜಾಗತಿಕ ಆರ್ಥಿಕತೆ ರೂಪಿಸಲು ಇರುವ ಸವಾಲುಗಳನ್ನು ಎದುರಿಸಬೇಕಾದ ಅಗತ್ಯ ಕುರಿತು ಅವರು ಮಾತನಾಡುವ ಸಾಧ್ಯತೆಗಳಿವೆ.

ಈ ಸಭೆ ಹಿಂದೆಯೇ ಮಾರ್ಚ್‌ ಮೊದಲ ವಾರ ಜಿ 20 ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆ ನವದೆಹಲಿಯಲ್ಲಿ ನಡೆಯಲಿದೆ. ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕನ್, ರಷ್ಯಾದ ವಿದೇಶಾಂಗ ಸಚಿವ ಸರ್ಗಿ ಲಾವ್ರೊವ್ ಭಾಗವಹಿಸುವರು.

ಭಾರತದ ಆತಿಥ್ಯದಲ್ಲಿ ಜಿ 20 ಶೃಂಗಸಭೆಯು ಸೆಪ್ಟೆಂಬರ್ 9 ಮತ್ತು 10ರಂದು ನಡೆಯಲಿದ್ದು, ಪ್ರಧಾನಮಂತ್ರಿ ನೇತೃತ್ವ ವಹಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT