ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಿಂದ ನಮ್ಮ ಶಾಸಕರಿಗೆ ₹ 5 ಕೋಟಿ ಆಮಿಷ: 'ಆಪರೇಷನ್ ಕಮಲ' ಆರೋಪ ಮಾಡಿದ ಎಎಪಿ

Last Updated 23 ಆಗಸ್ಟ್ 2022, 10:13 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿಯು ದೆಹಲಿ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದೆ ಎಂದು ಆಮ್‌ ಆದ್ಮಿ ಪಕ್ಷ (ಎಎಪಿ) ಮಂಗಳವಾರ ಮತ್ತೊಮ್ಮೆ ಗಂಭೀರ ಆರೋಪ ಮಾಡಿದೆ.ಎಎಪಿಯ ವಕ್ತಾರ ಸೌರಭ್‌ ಭಾರದ್ವಾಜ್‌ ಅವರು, ಪಕ್ಷ ತೊರೆದು ಬಿಜೆಪಿ ಸೇರಿದರೆ ₹ 5 ಕೋಟಿ ನೀಡಲಾಗುವುದು ಎಂದುಎಎಪಿ ಶಾಸಕರಿಗೆ ಆಮಿಷ ಒಡ್ಡಲಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿಯು ಜನಾದೇಶಕ್ಕೆ ವಿಶ್ವಾಸದ್ರೋಹವೆಸಗಿ, ರಾಜ್ಯ ಸರ್ಕಾರಗಳು ಮತ್ತು ಮೈತ್ರಿಕೂಟಗಳನ್ನು ಉರುಳಿಸುವ ಮೂಲಕ 'ಆಪರೇಷನ್‌ ಕಮಲ' ಸ್ಥಾಪಿಸುತ್ತಿದೆ ಎಂದು ಭಾರದ್ವಾಜ್‌ ಕಿಡಿಕಾರಿದ್ದಾರೆ.

ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಅವರು ಸೋಮವಾರ ಇದೇ ರೀತಿಯ ಆರೋಪ ಮಾಡಿದ್ದರು.

‘ಎಎಪಿ ತೊರೆದು ಬಿಜೆಪಿ ಸೇರಿ. ನಿಮ್ಮ ವಿರುದ್ಧ ಸಿಬಿಐ ಹಾಗೂ ಇ.ಡಿ ದಾಖಲಿಸಿಕೊಂಡಿರುವ ಎಲ್ಲ ಪ್ರಕರಣಗಳನ್ನು ಮುಚ್ಚಿಹಾಕುವ ಬಗ್ಗೆ ನಾವು ಭರವಸೆ ನೀಡುತ್ತೇವೆ ಎಂದು ಬಿಜೆಪಿಯಿಂದ ಸಂದೇಶ ಬಂದಿತ್ತು. ನಾನು ಮಹಾರಾಣಾ ಪ್ರತಾಪ್‌ ಅವರ ವಂಶಸ್ಥ. ನಾನು ರಜಪೂತ. ತಲೆಯನ್ನು ಕತ್ತರಿಸಿ ಹಾಕಿದರೂ ಭ್ರಷ್ಟರು ಮತ್ತು ಪಿತೂರಿಗಾರರ ಜತೆ ಸೇರುವುದಿಲ್ಲ. ನನ್ನ ವಿರುದ್ಧದ ಪ್ರಕರಣಗಳೆಲ್ಲವೂ ಸುಳ್ಳು. ಏನು ಬೇಕಾದರೂ ಮಾಡಿಕೊಳ್ಳಿ ಎಂಬುದಾಗಿ ಬಿಜೆಪಿ ಸಂದೇಶಕ್ಕೆ ಉತ್ತರಿಸಿದ್ದೇನೆ’ ಎಂದು ಟ್ವೀಟ್ ಮಾಡಿದ್ದರು.

ಇದನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ದೆಹಲಿಯಲ್ಲಿ ಆಪರೇಷನ್ ಕಮಲ ವಿಫಲವಾಗಿದೆ ಎಂದು ಕುಟುಕಿದ್ದರು.

ಸಿಸೋಡಿಯಾ ಅವರ ಟ್ವೀಟ್ ಹಂಚಿಕೊಂಡಿದ್ದ ಕೇಜ್ರಿವಾಲ್‌, 'ಅಂದರೆ ಸಿಬಿಐ-ಇ.ಡಿ ದಾಳಿಗೂ ಅಬಕಾರಿ ನೀತಿ ಹಾಗೂ ಭ್ರಷ್ಟಾಚಾರಕ್ಕೂ ಯಾವುದೇ ಸಂಬಂಧವಿಲ್ಲವೇ? ಬೇರೆ ರಾಜ್ಯಗಳಲ್ಲಿ ಮಾಡಿದಂತೆ ದೆಹಲಿಯಲ್ಲಿ ಎಎಪಿ ಸರ್ಕಾರವನ್ನು ಉರುಳಿಸಲು ದಾಳಿ ನಡೆಸಲಾಗಿದೆಯೇ?' ಎಂದು ಪ್ರಶ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT