ಸೋಮವಾರ, ಮೇ 23, 2022
30 °C

ಪ್ರತಿಭಟನಾಕಾರರ ಮೇಲೆ ಲಾಠಿ ಪ್ರಹಾರ, ಯೋಗಿ ಸರ್ಕಾರದ ವಿರುದ್ಧ ಪ್ರತಿಪಕ್ಷ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಖನೌ: ಉತ್ತರ ಪ್ರದೇಶದಲ್ಲಿ ಶಿಕ್ಷಕರ ನೇಮಕಾತಿಯಲ್ಲಿನ ಅಕ್ರಮಗಳ ವಿರುದ್ಧ ಲಖನೌದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಉದ್ಯೋಗಾಕಾಂಕ್ಷಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದನ್ನು ವಿರೋಧಿಸಿ ಪ್ರತಿಪಕ್ಷಗಳ ಮುಖಂಡರು ಅಲ್ಲದೆ ಬಿಜೆಪಿ ಲೋಕಸಭಾ ಸದಸ್ಯ ವರುಣ್ ಗಾಂಧಿ ಹೇಳಿಕೆ ನೀಡಿದ್ದಾರೆ.

ಶನಿವಾರ ಸಂಜೆ ಮೊಂಬತ್ತಿ ಹಿಡಿದು ಪ್ರತಿಭಟಿಸುತ್ತಿದ್ದ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಪ್ರತಿಭಟನಾಕಾರರನ್ನು ಪೊಲೀಸರು ಲಾಠಿ ಪ್ರಹಾರದ ಮೂಲಕ ಚದುರಿಸಿದರು. ರಾಜ್ಯ ಸರ್ಕಾರವು ಎಸ್‌ಸಿ ಎಸ್‌ಟಿ ಆಕಾಂಕ್ಷಿಗಳ ಕೋಟಾವನ್ನು ಭರ್ತಿ ಮಾಡಲು ಉದ್ಯೋಗದ ಸಂಖ್ಯೆಯನ್ನು ಹೆಚ್ಚಿಸಬೇಕು ಮತ್ತು ರಾಜ್ಯದಲ್ಲಿ 69 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳ ಕುರಿತು ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. 

ಬಿಜೆಪಿ ಲೋಕಸಭಾ ಸದಸ್ಯ ವರುಣ್ ಗಾಂಧಿ ಮತ್ತು ವಿರೋಧ ಪಕ್ಷಗಳ ನಾಯಕರಾದ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಪ್ರತಿಭಟನೆ ಕುರಿತ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೊಗಳಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ಬೆನ್ನಟ್ಟುವುದು, ಲಾಠಿ ಮತ್ತು ಬೂಟಿನಿಂದ ಹೊಡೆಯುವ ದೃಶ್ಯಾವಳಿಗಳಿವೆ.

’ಬಿಜೆಪಿ ಸರಕಾರದಲ್ಲಿ ಉದ್ಯೋಗ ಬೇಡುವವರಿಗೆ ಲಾಠಿ ಏಟು ಸಿಗುತ್ತದೆ. ಬಿಜೆಪಿ ನಾಯಕರು ನಿಮ್ಮಿಂದ ಮತ ಕೇಳುವಾಗ ಇದನ್ನು ನೆನಪಿಸಿಕೊಳ್ಳಿ‘ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

‘ಭಾರತವನ್ನು ವಿಶ್ವಗುರುವನ್ನಾಗಿ ಮಾಡಬೇಕೆಂದು ಹೇಳುತ್ತಿರುವ ಬಿಜೆಪಿ ಆಡಳಿತದಲ್ಲಿ ಭವಿಷ್ಯದ ಶಿಕ್ಷಕರ ಮೇಲೆ ಲಾಠಿ ಚಾರ್ಜ್ ಮಾಡಲಾಗುತ್ತಿದೆ.‌ ಇಂದಿನ ಯುವಕರು ಬಿಜೆಪಿ ಬೇಡ ಎಂದು ಹೇಳುತ್ತಿದ್ದಾರೆ' ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದಾರೆ.

ಬಿಜೆಪಿ ಸಂಸದ ವರುಣ್ ಗಾಂಧಿ ಅವರು, ‘ಅವರೂ ಭಾರತದ ಪುತ್ರರೇ. ಅವರ ಬೇಡಿಕೆಗಳನ್ನು ಮರೆತರೆ ಯಾರೂ ಅವರ ಮಾತನ್ನು ಕೇಳಲು ಸಿದ್ಧರಿಲ್ಲ. ಆಮೇಲೆ ಇಂತಹ ಕ್ರೂರ ವರ್ತನೆ. ನಿಮ್ಮ ಸ್ವಂತ ಮಕ್ಕಳಾಗಿದ್ದರೆ ನೀವು ಇದೇ ರೀತಿ ನಡೆದುಕೊಳ್ಳುತ್ತಿದ್ದಿರಾ?’  ಎಂದು ಅವರು ಟ್ವೀಟ್ ಮಾಡಿದ್ದಾರೆ.

ಈ ಘಟನೆಯಿಂದ ಬಿಜಿಪಿಗೆ ಮುಖಭಂಗ ಉಂಟಾಗಿದ್ದು, ಬಿಜೆಪಿ ನಾಯಕರ ಪ್ರತಿಕ್ರಿಯೆ ಕೇಳಿದಾಗ ನುಣುಚಿಕೊಂಡಿದ್ದಾರೆ.  ರಾಜ್ಯದ ಬಿಜೆಪಿ ನಾಯಕರೊಬ್ಬರಿಗೆ ಲಾಠಿಪ್ರಹಾರದ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ, ‘ಘಟನೆಯ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ‘ ಎಂದು ಉತ್ತರಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು