ಮಂಗಳವಾರ, ಮಾರ್ಚ್ 28, 2023
25 °C
ಕೆ.ಸಿ.ಆರ್‌ ನೇತೃತ್ವದ ವಿಪಕ್ಷಗಳ ಒಗ್ಗಟ್ಟಿಗೆ ನಿತೀಶ್‌ ಪ್ರತಿಕ್ರಿಯಿಸಿದ್ದು ಹೀಗೆ

ನನಗೊಂದು ಆಸೆ ಇದೆ..: ವಿಪಕ್ಷಗಳ ಒಗ್ಗಟ್ಟಿನ ಕುರಿತು ನಿತೀಶ್‌ ಹೇಳಿದ್ದೇನು?

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಪಟ್ನಾ: ‘ವಿರೋಧ ಪಕ್ಷಗಳೆಲ್ಲಾ ಒಟ್ಟಾಗಿ ಮುಂದೆ ಸಾಗುವುದೇ ನನ್ನ ಕನಸು‘ 

– ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ಅವರ ನೇತೃತ್ವದಲ್ಲಿ ನಡೆದ ವಿರೋಧ ‍ಪಕ್ಷಗಳ ಕಾರ್ಯಕ್ರಮದ ಬಗ್ಗೆ, ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹೇಳಿದ ಮಾತಿದು.

‘ನಾನು ಹೇಳುತ್ತಲೇ ಬಂದಿದ್ದೇನೆ. ವೈಯಕ್ತಿಕವಾಗಿ ನನಗೆ ಏನೂ ಬೇಡ.  ವಿಪಕ್ಷಗಳೆಲ್ಲಾ ಒಂದಾಗಿ, ಮುಂದೆ ಸಾಗುವುದೇ ನನ್ನ ಕನಸು. ಅದರಿಂದ ದೇಶಕ್ಕೆ ಒಳಿತಾಗಲಿದೆ‘ ಎಂದು ಅವರು ಹೇಳಿದ್ದಾರೆ.

ಇನ್ನು ಕೆ.ಸಿ.ಆರ್‌ ನೇತೃತ್ವದ ವಿಪಕ್ಷಗಳ ಸಭೆಗೆ ಗೈರು ಹಾಜರಾಗಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ನಿತೀಶ್, ‘ಕೆ.ಸಿ.ಆರ್‌ ಅವರ ನೇತೃತ್ವದ ರ‍್ಯಾಲಿ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಬೇರೆ ಕೆಲಸದಲ್ಲಿ ನಿರತನಾಗಿದ್ದೆ. ಯಾರಿಗೆಲ್ಲಾ ಅಹ್ವಾನ ಇತ್ತೋ, ಅವರೆಲ್ಲಾ ಅಲ್ಲಿಗೆ ಹೋಗಿದ್ದಿರಬಹುದು‘ ಎಂದು ಹೇಳಿದ್ದಾರೆ.

2024ರ ಲೋಕಸಭೆ ಚುನಾವಣೆಗೂ ಮುನ್ನ ವಿಪಕ್ಷಗಳನ್ನು ಒಟ್ಟು ಮಾಡಲು ಶ್ರಮಿಸುತ್ತಿರುವ ಕೆ.ಸಿ.ಆರ್‌. ಬುಧವಾರ ತೆಲಂಗಾಣದಲ್ಲಿ ವಿಪಕ್ಷಗಳ ಬೃಹತ್‌ ಸಮಾವೇಶ ಆಯೋಜಿಸಿದ್ದರು. 

ಈ ಸಮಾವೇಶದಲ್ಲಿ ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌, ಆಮ್‌ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್‌, ಭಗವಂತ್ ಮಾನ್‌, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಸಿಪಿಐನ ಡಿ. ರಾಜಾ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.

ಈ ಸಭೆಯಲ್ಲಿ ಪ್ರಧಾನಿ ಮೋದಿಯವರನ್ನು ಗುರಿಯಾಗಿಸಿಕೊಂಡು ಕೆ.ಸಿ.ಆರ್ ವಾಗ್ದಾಳಿ ನಡೆಸಿದ್ದರು. ‘2024ರ ಚುನಾವಣೆ ಬಳಿಕ ಪ್ರಧಾನಿ ಮೋದಿ ಮನೆಗೆ ಹೋಗಲಿದ್ದಾರೆ. ನಿಮ್ಮದು ಖಾಸಗೀಕರಣವಾದರೆ ನಮ್ಮದು ರಾಷ್ಟ್ರೀಕರಣ‘ ಎಂದು ಗುಡುಗಿದ್ದರು.

ಇದಕ್ಕೂ ಕೆಲ ದಿನಗಳ ಮುನ್ನ ತಮ್ಮ ಪಕ್ಷ ಟಿ.ಆರ್‌.ಎಸ್ (ತೆಲಂಗಾಣ ರಾಷ್ಟ್ರ ಸಮಿತಿ) ಹೆಸರನ್ನು ಬಿ.ಆರ್‌.ಎಸ್‌ (ಭಾರತ್‌ ರಾಷ್ಟ್ರ ಸಮಿತಿ) ಎಂದು ಮರುನಾಮಕರಣ ಮಾಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು