ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೆಗಾಸಸ್: ಕೇಂದ್ರ ಸರ್ಕಾರಕ್ಕೆ ಪ್ರತಿಪಕ್ಷಗಳ ತರಾಟೆ

ಸಂಸತ್ತಿನ ಉಭಯ ಸದನಗಳ ಕಲಾಪಕ್ಕೆ ಅಡ್ಡಿ; ಜಂಟಿ ಸದನ ಸಮಿತಿ ತನಿಖೆಗೆ ಪಟ್ಟು
Last Updated 20 ಜುಲೈ 2021, 17:08 IST
ಅಕ್ಷರ ಗಾತ್ರ

ನವದೆಹಲಿ: ಇಸ್ರೇಲ್‌ನ ಕಣ್ಗಾವಲು ತಂತ್ರಾಂಶ ‘ಪೆಗಾಸಸ್’ ಬಳಸಿ ಪ್ರತಿಪಕ್ಷ ಮುಖಂಡರಾದ ರಾಹುಲ್ ಗಾಂಧಿ ಹಾಗೂ ಅಭಿಷೇಕ್ ಬ್ಯಾನರ್ಜಿ ಅವರ ಮೇಲೆ ಗೂಢಚರ್ಯೆ ನಡೆಸಲಾಗಿದೆ ಎಂಬ ವಿಷಯವು ಸಂಸತ್ತಿನಲ್ಲಿ ಮಂಗಳ ವಾರ ಕೋಲಾಹಲಕ್ಕೆ ಕಾರಣವಾಯಿತು. ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರಿಂದ ಕಲಾ‍ಪಕ್ಕೆ ಅಡ್ಡಿಯಾಯಿತು.

ಕೋವಿಡ್ ವಿಚಾರವಾಗಿ ಚರ್ಚೆ ನಡೆಸಲು ಒಪ್ಪಿಕೊಂಡಿದ್ದರಿಂದ ರಾಜ್ಯ ಸಭೆ ಕಲಾಪವು ಮಧ್ಯಾಹ್ನದ ಬಳಿಕ ಹಳಿಗೆ ಮರಳಿತು.

ಆದರೆ ಲೋಕಸಭೆಯಲ್ಲಿ ಇಡೀ ದಿನ ಯಾವುದೇ ಚರ್ಚೆ ಆಗಲಿಲ್ಲ. ಗದ್ದಲದ ನಡುವೆಯೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021–22ನೇ ಸಾಲಿನ ಅನುದಾನಕ್ಕಾಗಿ ಪೂರಕ ಬೇಡಿಕೆಗಳನ್ನು ಮಂಡಿಸಿದರು.

ಉಭಯ ಸದನಗಳ ಕಲಾಪವನ್ನು ಬದಿಗಿರಿಸಿ, ಪೆಗಾಸಸ್ ಬಗ್ಗೆ ಚರ್ಚೆ ನಡೆಸಲು ಹಲವು ಸಂಸದರು ನೋಟಿಸ್ ನೀಡಿದ್ದರು. ಎರಡೂ ಸದನಗಳಲ್ಲಿ ಪೀಠದ ಮುಂದೆ ಸಂಸದರು ಪ್ರತಿ ಭಟನೆ ನಡೆಸಿದರು.

ಕೋವಿಡ್ ಬಗ್ಗೆ ಚರ್ಚಿಸಲು ಒತ್ತಾಯಿಸಿದ್ದರಿಂದ ರಾಜ್ಯ ಸಭೆ ಕಲಾಪವನ್ನು ಮೂರು ಬಾರಿ ಮುಂದೂಡಲಾಯಿತು.

ಗೂಢಚರ್ಯೆ ವಿಚಾರವನ್ನು ಒಗ್ಗಟ್ಟಿ ನಿಂದ ಪ್ರಸ್ತಾಪ ಮಾಡಲು ರಾಜ್ಯಸಭೆ ಯಲ್ಲಿ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆಯಲ್ಲಿ ನಡೆದ ನಾಯಕರ ಸಭೆಯಲ್ಲಿ ಕಾರ್ಯತಂತ್ರವನ್ನು ನಿರ್ಧರಿಸಲಾಗಿತ್ತು. ಸಭಾಪತಿ ವೆಂಕಯ್ಯ ನಾಯ್ಡು ಅವರು ಪ್ರತಿಪಕ್ಷಗಳು ಹಾಗೂ ಆಡಳಿತ ಪಕ್ಷದವರ ಮನವೊಲಿಸುವಲ್ಲಿ ಯಶಸ್ವಿಯಾದರು. ಪ್ರತಿಪಕ್ಷ ಮುಖಂಡರ ಜೊತೆ ರಾಜ್ಯಸಭೆ ನಾಯಕ ಪೀಯೂಷ್ ಗೋಯಲ್ ಅವರು ಅನೌಪಚಾರಿಕ ವಾಗಿ ನಡೆಸಿದ ಮಾತುಕತೆ ಫಲ ನೀಡಿತು. ನಾಲ್ಕು ಗಂಟೆಗಳ ಕಾಲ ಕೋವಿಡ್ ನಿರ್ವಹಣೆ ಕುರಿತು ಚರ್ಚೆಗೆ ಸಮಯ ನಿಗದಿಪಡಿಸಲಾಯಿತು.

‘ಜನರು ಉದ್ಯೋಗ ಸಿಗದೇ ಒದ್ದಾಡುತ್ತಿದ್ದರೆ, ಸರ್ಕಾರವು ಗೂಢಚರ್ಯೆಯಲ್ಲಿ ತೊಡಗಿದೆ’ ಎಂಬ ಫಲಕವನ್ನು ಲೋಕಸಭೆಯಲ್ಲಿ ಸಂಸದರು ಪ್ರದರ್ಶಿಸಿದರು. ರಾಜ್ಯಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಸದಸ್ಯರು ಗೂಢಚರ್ಯೆಯನ್ನು ವಿರೋಧಿಸುವ ಸಲುವಾಗಿ ಆಟಿಕೆ ಮೊಬೈಲ್‌ಗಳನ್ನು ಪ್ರದರ್ಶಿಸಿದರು. ತಮ್ಮ ಪಕ್ಷದ ನಾಯಕರೇ ಕಣ್ಗಾವಲು ಪ್ರಕರಣದ ಗುರಿ ಆಗಿದ್ದರಿಂದ ಕಾಂಗ್ರೆಸ್ ಹಾಗೂ ತೃಣಮೂಲ ಕಾಂಗ್ರೆಸ್ ಸಂಸದರು ಪ್ರತಿಭಟನೆಯ ಮುಂಚೂಣಿಯಲ್ಲಿ ಕಂಡುಬಂದರು.

ಪೆಗಾಸಸ್ ತಂತ್ರಾಂಶವನ್ನು ಖರೀದಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸರ್ಕಾರ ಸ್ಪಷ್ಟವಾಗಿ ತಿಳಿಸಬೇಕು ಹಾಗೂ ಈ ಬಗ್ಗೆ ಜಂಟಿ ಸಂಸದೀಯ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ವಕ್ತಾರ ಶಕ್ತಿಸಿಂಹ ಗೋಹಿಲ್ ಆಗ್ರಹಿಸಿದರು.

ದೂರವಾಣಿ ಕದ್ದಾಲಿಕೆ ವಿಷಯ ದಲ್ಲಿ ರಾಷ್ಟ್ರೀಯ ಭದ್ರತೆ ಉಲ್ಲಂಘನೆಯಾಗಿದ್ದು, ಸಂವಿಧಾನದ ಅಡಿಯಲ್ಲಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಯೂ ಆಗಿದೆ. ಈ ಕುರಿತು ಚರ್ಚಿಸಲು ತಮ್ಮ ಪಕ್ಷದ ಸಂಸದರು ಉಭಯ ಸದನಗಳಲ್ಲಿ ಗೊತ್ತವಳಿ ನೋಟಿಸ್ ನೀಡಿದ್ದಾರೆ ಎಂದು ಅವರು ಹೇಳಿದರು.

‘ಪೆಗಾಸಸ್ ಖರೀದಿ ಕುರಿತಂತೆ ಸಚಿವರು ಗೊಂದಲಕಾರಿ ಹೇಳಿಕೆ ನೀಡು ತ್ತಿದ್ದಾರೆ. ಖರೀದಿಸಿದ್ದೇ ಆದಲ್ಲಿ, ಜಂಟಿ ಸಂಸದೀಯ ತನಿಖೆ ನಡೆಯಬೇಕು’ ಎಂದು ಅವರು ಹೇಳಿದರು. ತಮ್ಮ ಪಕ್ಷವು ಸದನದಲ್ಲಿ ನಿತ್ಯವೂ ಪ್ರತಿಭಟನೆ ನಡೆಸಲಿದೆ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಶಂತನು ಸೇನ್ ರಾಜ್ಯಸಭೆಯಲ್ಲಿ ಹೇಳಿದರು.ಆದಾಗ್ಯೂ, ಕೋವಿಡ್ ಪರಿಸ್ಥಿತಿ ಅಥವಾ ಅದಕ್ಕೆ ಸಂಬಂಧಿಸಿದ ಅಂಶಗಳ ಕುರಿತ ಯಾವುದೇ ಚರ್ಚೆಗಳಿಗೆ ತಡೆ ಒಡ್ಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

‘ಇದು ಗಂಭೀರ ವಿಷಯ. ಟಿಎಂಸಿ ಇದರ ಬಗ್ಗೆ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಕಣ್ಗಾವಲು ಆರೋಪದಿಂದ ಸರ್ಕಾರ ಹೊರಬರುವವವರೆಗೆ ನಾವು ಸದನ ನಡೆಸಲು ಬಿಡುವುದಿಲ್ಲ. ದೂರವಾಣಿಗಳನ್ನು ಕದ್ದಾಲಿಸಲು ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿದೆ. ದೇಶವು ಸಾಂಕ್ರಾಮಿಕ ರೋಗವನ್ನು ಎದುರಿಸುತ್ತಿದ್ದ ಸಮಯದಲ್ಲಿ ಸರ್ಕಾರ ಈ ಕೆಲಸದಲ್ಲಿ ತೊಡಗಿತ್ತು’ ಎಂದು ಟಿಎಂಸಿ ರಾಜ್ಯಸಭಾ ಸಂಸದ ಡೆರೆಕ್ ಒಬ್ರಿಯಾನ್ ಹೇಳಿದ್ದಾರೆ.

ಈದ್ ರಜೆಯ ನಂತರ ಲೋಕಸಭೆ ಕಲಾಪಗುರುವಾರ ನಡೆಸಲಿದೆ.

ಅಮಿತ್ ಶಾ ವಜಾಕ್ಕೆ ಆಗ್ರಹ

(ಜೈಪುರ, ನವದೆಹಲಿ, ಲಖನೌ ವರದಿ): ಪೆಗಾಸಸ್ ಪ್ರಕರಣದಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರನ್ನು ವಜಾ ಮಾಡಬೇಕು ಎಂದು ರಾಜಸ್ಥಾನ ಕಾಂಗ್ರೆಸ್ ಘಟಕ ಮಂಗಳವಾರ ಆಗ್ರಹಿಸಿದೆ. ಪ್ರಕರಣ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಚಾರಣೆಗೆ ಒಳ ಪಡಿಸಬೇಕು ಎಂದು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಗೋವಿಂದ ಸಿಂಗ್ ದೋತಸ್ರಾ ಅವರು
ಒತ್ತಾಯಿಸಿದ್ದಾರೆ.

ಪಕ್ಷದ ಕಾರ್ಯಕರ್ತರು ರಾಜ ಸ್ಥಾನದ ರಾಜಭವನಕ್ಕೆ ಗುರುವಾರ ಮುತ್ತಿಗೆ ಹಾಕಲಿದ್ದಾರೆ ಎಂದು ಹೇಳಿರುವ ಅವರು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.

ರಾಜಸ್ಥಾನದ ಮಾಜಿ ಮುಖ್ಯ ಮಂತ್ರಿ ವಸುಂಧರಾ ರಾಜೆ ಸೇರಿದಂತೆ ಹಲವಾರು ನಾಯಕರ ಫೋನ್‌ಗಳನ್ನು ಕದ್ದಾಲಿಕೆ ಮಾಡಲಾ ಗಿದ್ದು, ಇದನ್ನು ಗೃಹ ಸಚಿವರ ಮಟ್ಟದಲ್ಲಿ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿ ದರು.

ಸರ್ಕಾರದ ವಿರುದ್ಧ ಬೀದಿಗಿಳಿದ ಕಾಂಗ್ರೆಸ್: ಹಲವು ಪತ್ರಕರ್ತರು ಮತ್ತು ರಾಜಕಾರಣಿಗಳ ವಿರುದ್ಧ ಪೆಗಾಸಸ್ ತಂತ್ರಾಂಶ ಬಳಸಿ ಕಣ್ಗಾವಲು ಇರಿಸಲಾಗಿದೆ ಎಂಬ ವಿಚಾರವನ್ನು ಖಂಡಿಸಿರುವ ದೆಹಲಿ ಕಾಂಗ್ರೆಸ್ ಘಟಕವು, ಮಂಗಳವಾರ ಬಿಜೆಪಿ ಕೇಂದ್ರ ಕಚೇರಿ ಬಳಿ ಪ್ರತಿಭಟನೆ ನಡೆಸಿತು.

ದೆಹಲಿ ಕಾಂಗ್ರೆಸ್ ಘಟಕದ ಅಧ್ಯಕ್ಷ ಅನಿಲ್ ಕುಮಾರ್ ನೇತೃತ್ವದ ಪ್ರತಿಭಟನಕಾರರು ಘೋಷಣೆಗಳನ್ನು ಕೂಗಿದರು. ತಮ್ಮ ಕಚೇರಿಯಿಂದ ಬಿಜೆಪಿ ಕೇಂದ್ರ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಅಲ್ಲಿ ಅವರನ್ನು ಪೊಲೀಸರು ತಡೆದರು.

ಕಲಾಪ ಅಡ್ಡಿಗೆ ಯೋಗಿ ಆಕ್ಷೇಪ: ಪೆಗಾಸಸ್ ವಿಚಾರದಲ್ಲಿ ಸಂಸತ್ ಕಲಾಪವನ್ನು ಹಾಳು ಮಾಡುತ್ತಿರುವ ಪ್ರತಿಪಕ್ಷಗಳನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ನಕಾರಾತ್ಮಕ ವಾತಾವರಣವನ್ನು ಸೃಷ್ಟಿಸುತ್ತಿರುವ ಪಕ್ಷಗಳು ಕ್ಷಮೆ ಕೇಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸಾಮಾನ್ಯ ಜನರಿಗೆ ಸಂಸತ್ತಿನಲ್ಲಿ ದನಿಯಾಗಬೇಕಿದ್ದ ಸಂಸದರು
ತಮ್ಮ ನಕಾರಾತ್ಮಕ ವರ್ತನೆಯಿಂದ ಕಲಾಪ ನಡೆಸಲು ಅವಕಾಶ ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು.

***

ಐ.ಟಿ ಸಚಿವರು ಸದನದಲ್ಲಿ ಸುಳ್ಳು ಹೇಳಿದ್ದಾರೆ. ಪೆಗಾಸಸ್ ಅನ್ನು ಸರ್ಕಾರ ಖರೀದಿಸಿದೆಯೇ ಎಂಬುದನ್ನು ಪ್ರಧಾನಿ, ಗೃಹಸಚಿವ, ಐ.ಟಿ ಸಚಿವರು ಸ್ಪಷ್ಟಪಡಿಸಬೇಕು.

- ಮಹುವಾ ಮೊಯಿತ್ರಾ, ಟಿಎಂಸಿ ಸಂಸದೆ

ಕೇಂದ್ರ ಸರ್ಕಾರವು ಇಸ್ರೇಲ್ ಜತೆ ಉತ್ತಮ ಸಂಬಂಧ ಹೊಂದಿದೆ. ಭಾರತದ ಅರಿವೆಗೆ ಬಾರದೇ ಇಂತಹ ಕಣ್ಗಾವಲು ಹೇಗೆ ಸಾಧ್ಯ ಎಂದು ಜನ ಪ್ರಶ್ನಿಸುತ್ತಿದ್ದಾರೆ

- ಸಿಪಿಎಂ

ಗೂಢಚರ್ಯೆ ಮತ್ತು ಬ್ಲಾಕ್‌ ಮೇಲ್‌ನ ಕೊಳಕು ಆಟ ಹೊಸ ವಿಷಯವಲ್ಲ, ಆದರೆ ದುಬಾರಿ ಸಲ ಕರಣೆಗಳ ಸಹಾಯದಿಂದ ಗೋಪ್ಯತೆ ಉಲ್ಲಂಘಿಸುವುದು ಗಂಭೀರ ವಿಷಯ

- ಮಾಯಾವತಿ, ಬಿಎಸ್‌ಪಿ ನಾಯಕಿ

ಗೂಢಚಾರಿಕೆ ಶಿಕ್ಷಾರ್ಹ ಅಪರಾಧ. ಈ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಮಾಹಿತಿ ಇಲ್ಲ ಎಂದಾದಲ್ಲಿ, ಇದು ರಾಷ್ಟ್ರೀಯ ಭದ್ರತಾ ವೈಫಲ್ಯ

- ಅಖಿಲೇಶ್ ಯಾದವ್, ಎಸ್‌ಪಿ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT