ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ 33.23 ಲಕ್ಷ ಮಕ್ಕಳಲ್ಲಿ ಅಪೌಷ್ಟಿಕತೆ

Last Updated 7 ನವೆಂಬರ್ 2021, 15:54 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ 33.23 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಆರ್‌ಟಿಐ ಅರ್ಜಿಗೆ ಪ್ರತಿಕ್ರಿಯಿಸಿದೆ.

ಅಪೌಷ್ಟಿಕತೆಗೆ ತುತ್ತಾಗಿರುವ ಮಕ್ಕಳನ್ನು ಹೆಚ್ಚಾಗಿ ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ, ಬಿಹಾರ ಮತ್ತು ಗುಜರಾತ್‌ ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿವೆ.

2021ರ ಅಕ್ಟೋಬರ್‌ 14ರವರೆಗಿನ ಅಂಕಿ ಅಂಶಗಳ ಪ್ರಕಾರ ದೇಶದಲ್ಲಿ 17.76 ಲಕ್ಷ ಮಕ್ಕಳು ತೀವ್ರ ಅಪೌಷ್ಟಿಕತೆ (ಎಸ್‌ಎಎಂ) ಹಾಗೂ 15.46 ಲಕ್ಷ ಮಕ್ಕಳು ಮಧ್ಯಮ ತೀವ್ರ ಅಪೌಷ್ಟಿಕತೆಯಿಂದ (ಎಂಎಎಂ) ಬಳಲುತ್ತಿದ್ದಾರೆ ಎಂದು ಸಚಿವಾಲಯ ಅಂಕಿ ಅಂಶದ ಮಾಹಿತಿ ನೀಡಿದೆ.

ಕಳೆದ ವರ್ಷ ಕೇಂದ್ರ ಸರ್ಕಾರ ಆರಂಭಿಸಿದ ಪೋಷಣ್‌ ಟ್ರ್ಯಾಕರ್‌ ಅಪ್ಲಿಕೇಷನ್‌ನಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುದಾಖಲಿಸಿರುವ ದತ್ತಾಂಶಗಳನ್ನು ಆಧರಿಸಿ ಸಚಿವಾಲಯವು, ಪಿಟಿಐ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಉತ್ತರ ನೀಡಿದೆ.

ಮಹಾರಾಷ್ಟ್ರದಲ್ಲಿ ಅತ್ಯಧಿಕ ಅಂದರೆ 6.16 ಲಕ್ಷ ಅಪೌಷ್ಟಿಕ ಮಕ್ಕಳಿದ್ದಾರೆ. ಇದರಲ್ಲಿ 1.57 ಲಕ್ಷ ಮಕ್ಕಳು ಎಂಎಎಂ ಮತ್ತು 4.58 ಲಕ್ಷ ಮಕ್ಕಳು ಎಸ್‌ಎಎಂನಿಂದ ಬಳಲುತ್ತಿದ್ದಾರೆ. ನಂತರದ ಸ್ಥಾನದಲ್ಲಿರುವ ಬಿಹಾರದಲ್ಲಿ 4.75 ಲಕ್ಷ ಮಕ್ಕಳು ಅಪೌಷ್ಟಿಕತೆಗೆ ತುತ್ತಾಗಿದ್ದು, 3.23 ಲಕ್ಷ ಮಕ್ಕಳು ಎಂಎಎಂ ಮತ್ತು 1.52 ಲಕ್ಷ ಮಕ್ಕಳು ಎಸ್‌ಎಎಂನಿಂದ ನರಳುತ್ತಿದ್ದಾರೆ.

ಮೂರನೇ ಸ್ಥಾನದಲ್ಲಿರುವ ಗುಜರಾತ್‌ನಲ್ಲಿ 3.20 ಲಕ್ಷ ಮಕ್ಕಳು ಅಪೌಷ್ಟಿತೆಗೆ ಒಳಗಾಗಿದ್ದಾರೆ. ಈ ಪೈಕಿ 1.55 ಲಕ್ಷ ಮಕ್ಕಳು ಎಂಎಎಂ ಮತ್ತು 1.65 ಲಕ್ಷ ಮಕ್ಕಳು ಎಸ್‌ಎಎಂಗೆ ತುತ್ತಾಗಿದ್ದಾರೆ ಎಂದು ಸಚಿವಾಲಯ ತಿಳಿಸಿದೆ.

ಕರ್ನಾಟಕದಲ್ಲಿ 2.49 ಲಕ್ಷ ಅಪೌಷ್ಟಿಕ ಮಕ್ಕಳಿದ್ದಾರೆ. ಇದರಲ್ಲಿ 1.82 ಲಕ್ಷ ಮಕ್ಕಳು ಎಂಎಎಂ ಮತ್ತು 67,285 ಮಕ್ಕಳು ಎಸ್‌ಎಎಂನಿಂದ ಬಳಲುತ್ತಿದ್ದಾರೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT