ಶನಿವಾರ, ಮಾರ್ಚ್ 25, 2023
26 °C

10 ವರ್ಷಗಳಲ್ಲಿ ಅರೆ ಸೇನಾಪಡೆಗಳ 81 ಸಾವಿರ ಸಿಬ್ಬಂದಿ ಸ್ವಯಂನಿವೃತ್ತಿ

ಪಿಟಿಐ Updated:

ಅಕ್ಷರ ಗಾತ್ರ : | |

ಅರೆ ಸೇನಾಪಡೆ ಅಧಿಕಾರಿಗಳು–ಸಾಂದರ್ಭಿಕ ಚಿತ್ರ

ನವದೆಹಲಿ: ಸಿಆರ್‌ಪಿಎಫ್‌, ಬಿಎಸ್‌ಎಫ್‌ ಸೇರಿಕೊಂಡಂತೆ 6 ಅರೆ ಸೇನಾಪಡೆಗಳ 81 ಸಾವಿರಕ್ಕೂ ಅಧಿಕ ಸಿಬ್ಬಂದಿ 2011–20ರ ಅವಧಿಯಲ್ಲಿ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದಾರೆ. ಈ ಪೈಕಿ 2017ನೇ ವರ್ಷದಲ್ಲಿ ಗರಿಷ್ಠ ಅಂದರೆ 11 ಸಾವಿರ ಸಿಬ್ಬಂದಿ ನಿವೃತ್ತಿ ಪಡೆದಿದ್ದಾರೆ ಎಂದು ಗೃಹ ಸಚಿವಾಲಯವು ತಿಳಿಸಿದೆ.

ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ಈ ಅವಧಿಯಲ್ಲಿ ಒಟ್ಟು 15,904 ಸಿಬ್ಬಂದಿ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಗರಿಷ್ಠ ಅಂದರೆ 2,332 ಮಂದಿ 2013ನೇ ಸಾಲಿನಲ್ಲಿಯೇ ಹುದ್ದೆ ತ್ಯಜಿಸಿದ್ದಾರೆ.

ಸ್ವಯಂ ನಿವೃತ್ತಿ ಅಥವಾ ಹುದ್ದೆಗೆ ರಾಜೀನಾಮೆ ಸಲ್ಲಿಸಲು ನಿಖರ ಕಾರಣಗಳನ್ನು ತಿಳಿಯಲು ಈ ಅವಧಿಯಲ್ಲಿ ನಿರ್ದಿಷ್ಟವಾಗಿ ಯಾವುದೇ ಅಧ್ಯಯನ ನಡೆದಿಲ್ಲ. ಅರೆಸೇನಾಪಡೆಗಳ ವಿಶ್ಲೇಷಣೆಯಂತೆ ವೈಯಕ್ತಿಕ, ಕೌಟುಂಬಿಕ, ಆರೋಗ್ಯ ಸಂಬಂಧಿ ಕಾರಣಗಳು, ಉತ್ತಮ ಹುದ್ದೆ ಅರಸುವ ಧೋರಣೆಗಳೇ ಹುದ್ದೆ ತ್ಯಜಿಸಲು ಕಾರಣವಾಗಿವೆ.

ಸಿಆರ್‌ಪಿಎಫ್‌, ಬಿಎಸ್‌ಎಫ್‌, ಐಟಿಬಿಪಿ (ಇಂಡೊ ಟಿಬೆಟನ್‌ ಬಾರ್ಡರ್ ಪೊಲೀಸ್‌), ಎಸ್‌ಎಸ್‌ಬಿ (ಸಶಸ್ತ್ರ ಸೀಮಾಬಲ), ಸಿಐಎಸ್ಎಫ್‌ ಮತ್ತು ಅಸ್ಸಾಂ ರೈಫಲ್‌ಗೆ ಈ ಎಲ್ಲ ಅಂಕಿ ಅಂಶಗಳು ಸಂಬಂಧಿಸಿದ್ದಾಗಿವೆ. ಈ ಎಲ್ಲ ಅರೆಸೇನಾಪಡೆಗಳ ಒಟ್ಟು ಸಿಬ್ಬಂದಿ ಬಲ ಸುಮಾರು 10 ಲಕ್ಷ ಇದೆ.

2011ರಿಂದ ಇಲ್ಲಿಯವರೆಗೂ ಈ ಎಲ್ಲ ಪಡೆಗಳಿಂದ ಒಟ್ಟು 81,007 ಮಂದಿ ಸ್ವಯಂ ನಿವೃತ್ತಿ ಪಡೆದಿದ್ದಾರೆ ಹಾಗೂ ಒಟ್ಟು 15,904 ಮಂದಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಸಚಿವಾಲಯದ ಮಾಹಿತಿ ತಿಳಿಸಿದೆ.

ಈ ಪೈಕಿ ಗರಿಷ್ಠ ಸಂಖ್ಯೆಯಲ್ಲಿ 36,768 ಮಂದಿ ಬಿಎಸ್‌ಎಫ್‌ನಿಂದ ನಿವೃತ್ತಿ ಪಡೆದಿದ್ದಾರೆ. ಉಳಿದಂತೆ ಸಿಆರ್‌ಪಿಎಫ್‌ (26,164), ಸಿಐಎಸ್‌ಎಫ್‌ (6,705), ಅಸ್ಸಾಂ ರೈಫ್‌ (4,947), ಎಸ್ಎಸ್‌ಬಿ (3,230) ಮತ್ತು ಐಟಿಬಿಪಿಯಿಂದ (3,193) ಮಂದಿ ನಿವೃತ್ತರಾಗಿದ್ದಾರೆ ಎಂದು ಸಚಿವಾಲಯವು ವಿವರಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು