ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ದಿನ 9 ಲಕ್ಷ ಜನರಿಗೆ ಕೋವಿಡ್‌ ಲಸಿಕೆಯ 3ನೇ ಡೋಸ್‌

Last Updated 11 ಜನವರಿ 2022, 2:01 IST
ಅಕ್ಷರ ಗಾತ್ರ

ನವದೆಹಲಿ: ದೇಶದಾದ್ಯಂತ ಅರ್ಹ ಫಲಾನುಭವಿಗಳಿಗೆ ಕೋವಿಡ್‌–19 ಮೂರನೇ ಡೋಸ್‌ ಹಾಕುವ ಪ್ರಕ್ರಿಯೆಗೆ ಸೋಮವಾರದಿಂದ ಶುರುವಾಗಿದ್ದು, ಮೊದಲ ದಿನ ಸುಮಾರು ಒಂಬತ್ತು ಲಕ್ಷ ಮುಂಚೂಣಿ ಕಾರ್ಯಕರ್ತರು 'ಮುನ್ನೆಚ್ಚರಿಕೆ ಡೋಸ್‌' ಲಸಿಕೆ ಹಾಕಿಸಿಕೊಂಡಿದ್ದಾರೆ.

ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಹಾಗೂ ಅರವತ್ತು ವರ್ಷ ವಯಸ್ಸಿಗೂ ಮೇಲ್ಪಟ್ಟ ನಾಗರಿಕರ ಪೈಕಿ ಮೊದಲ ದಿನ 9 ಲಕ್ಷಕ್ಕೂ ಹೆಚ್ಚು ಜನರು ಕೋವಿಡ್‌ ಲಸಿಕೆಯ ಮುನ್ನೆಚ್ಚರಿಕೆಯ ಡೋಸ್ ಹಾಕಿಸಿಕೊಂಡಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಮುನ್ನೆಚ್ಚರಿಕೆಯ ಡೋಸ್‌ ಹಾಕಿಸಿಕೊಳ್ಳುವಂತೆ ಕೋವಿನ್‌ ಪೋರ್ಟಲ್‌ ಸುಮಾರು ಒಂದು ಕೋಟಿ ಸಂದೇಶಗಳನ್ನು ಫಲಾನುಭವಿಗಳಿಗೆ ರವಾನಿಸಿದೆ. ಶನಿವಾರದಿಂದಲೇ ಲಸಿಕೆಯ ಮೂರನೇ ಡೋಸ್‌ ಪಡೆಯಲು ಶನಿವಾರದಿಂದಲೇ ಕೋವಿನ್‌ ಪೋರ್ಟಲ್‌ ಮೂಲಕ ತಮ್ಮ ಸಮಯವನ್ನು ಕಾಯ್ದಿರಿಸುವ ಅವಕಾಶ ಕಲ್ಪಿಸಲಾಗಿದೆ. ನೇರವಾಗಿ ಕೇಂದ್ರಗಳಿಗೆ ತೆರಳಿಯೂ ಲಸಿಕೆ ಪಡೆದುಕೊಳ್ಳಬಹುದು. ಮುನ್ನೆಚ್ಚರಿಕೆಯ ಡೋಸ್‌ ಹಾಕಿಸಿಕೊಳ್ಳಲು ಹೊಸದಾಗಿ ನೋಂದಾಣಿ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಈಗಾಗಲೇ ಸ್ಪಷ್ಟಪಡಿಸಿದೆ.

ಸೋಮವಾರ ದೇಶದಲ್ಲಿ ಒಟ್ಟು 82 ಲಕ್ಷ ಡೋಸ್‌ ಲಸಿಕೆ ವಿತರಿಸಲಾಗಿದ್ದು, ಈವರೆಗೂ ಕೋವಿಡ್‌–19 ಲಸಿಕೆಯ 152.78 ಕೋಟಿ ಡೋಸ್‌ಗಳನ್ನು ಜನರಿಗೆ ಹಾಕಲಾಗಿದೆ.

ಕರ್ನಾಟಕದಲ್ಲಿ 21 ಲಕ್ಷ ಮಂದಿ 3ನೇ ಡೋಸ್‌ಗೆ ಅರ್ಹರು

ಸದ್ಯ ರಾಜ್ಯದಲ್ಲಿ ಆರೋಗ್ಯ ಕಾರ್ಯಕರ್ತರು ಸೇರಿದಂತೆ 21 ಲಕ್ಷ ಮಂದಿ ಮತ್ತೊಂದು ಡೋಸ್ ಲಸಿಕೆ ಪಡೆಯಲು ಅರ್ಹರಾಗಿದ್ದಾರೆ.

ರಾಜ್ಯದಲ್ಲಿ 2021ರ ಜ.16 ರಿಂದ ಲಸಿಕೆ ವಿತರಿಸಲಾಗುತ್ತಿದೆ. 18 ವರ್ಷಗಳು ಮೇಲ್ಪಟ್ಟ 4.89 ಕೋಟಿ ಮಂದಿಗೆ ಲಸಿಕೆ ವಿತರಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಅವರಲ್ಲಿ 4.8 ಕೋಟಿ (ಶೇ 99) ಮಂದಿಗೆ ಮೊದಲ ಡೋಸ್ ಮತ್ತು 3.9 ಕೋಟಿ ಮಂದಿಗೆ (ಶೇ 81) ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಇದೇ ಜ.3 ರಿಂದ 15ರಿಂದ 18 ವರ್ಷದವರಿಗೆ ಲಸಿಕೆ ವಿತರಣೆ ಪ್ರಾರಂಭಿಸಲಾಗಿದ್ದು, 31.75 ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ. ಅವರಲ್ಲಿ 15.5 ಲಕ್ಷ (ಶೇ 49) ಮಂದಿಗೆ ಮೊದಲನೇ ಡೋಸ್ ಲಸಿಕೆ ನೀಡಲಾಗಿದೆ.

6 ಲಕ್ಷ ಆರೋಗ್ಯ ಕಾರ್ಯಕರ್ತರು, 7 ಲಕ್ಷ ಮುಂಚೂಣಿ ಕಾರ್ಯಕರ್ತರು ಮತ್ತು 8 ಲಕ್ಷ 60 ವರ್ಷಗಳು ಮೇಲ್ಪಟ್ಟ ಅಸ್ವಸ್ಥರು ರಾಜ್ಯದಲ್ಲಿ ಎರಡೂ ಡೋಸ್ ಲಸಿಕೆ ಪಡೆದು 9 ತಿಂಗಳು ಕಳೆದಿವೆ. ಇವರು ಮೂರನೇ ಡೋಸ್ ಪಡೆಯಲು ಅರ್ಹರಾಗಿದ್ದಾರೆ. ‘ಕೋವ್ಯಾಕ್ಸಿನ್’ ಮತ್ತು ‘ಕೋವಿಶೀಲ್ಡ್’ ಲಸಿಕೆಯ ಮೊದಲ ಮತ್ತು ಎರಡನೇ ಡೋಸ್ ಪಡೆದವರು ಮಾತ್ರ ಮುನ್ನೆಚ್ಚರಿಕೆ ಡೋಸ್ ಪಡೆಯಲು ಅರ್ಹರಾಗಿರುತ್ತಾರೆ. ಸ್ಪುಟ್ನಿಕ್ ಲಸಿಕೆ ಪಡೆದವರು ಮೂರನೇ ಡೋಸ್ ಪಡೆಯುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT