ಶನಿವಾರ, ಅಕ್ಟೋಬರ್ 16, 2021
29 °C

ದೆಹಲಿಯಲ್ಲಿ ಪಾಕ್ ಉಗ್ರನ ಬಂಧನ: ಇಲ್ಲೇ ಮದುವೆ, ವಿಧ್ವಂಸಕ ಕೃತ್ಯಗಳಲ್ಲಿ ಭಾಗಿ

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬಂಧಿತ ಪಾಕಿಸ್ತಾನದ ಉಗ್ರ ಮೊಹಮ್ಮದ್‌ ಅಶ್ರಫ್‌

ನವದೆಹಲಿ: ದೆಹಲಿ ಪೊಲೀಸ್‌ ವಿಶೇಷ ದಳವು ಪಾಕಿಸ್ತಾನದ ಉಗ್ರನೊಬ್ಬನನ್ನು ಸೋಮವಾರ ಬಂಧಿಸಿದೆ. ನಕಲಿ ಗುರುತಿನ ಚೀಟಿಯನ್ನು ಬಳಸಿಕೊಂಡು ಆತ ದೆಹಲಿಯಲ್ಲಿ ವಾಸಿವಾಗಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮೊಹಮ್ಮದ್‌ ಅಶ್ರಫ್‌ ಹೆಸರಿನ ಶಂಕಿತ ಉಗ್ರನು ಅಹಮದ್‌ ನೂರಿ ಹೆಸರಿನಲ್ಲಿ ನಕಲಿ ಗುರುತಿನ ಚೀಟಿ ಸೃಷ್ಟಿಸಿಕೊಂಡು ದೆಹಲಿಯ ಶಾಸ್ತ್ರಿ ನಗರದಲ್ಲಿ ವಾಸಿಸುತ್ತಿದ್ದ ಎಂದು ದೆಹಲಿ ಪೊಲೀಸ್‌ ವಿಶೇಷ ದಳದ ಮೂಲಗಳಿಂದ ತಿಳಿದು ಬಂದಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ಇಲ್ಲಿನ ಲಕ್ಷ್ಮಿ ನಗರದ ರಮೇಶ್‌ ಪಾರ್ಕ್ ವಲಯದಲ್ಲಿ ಉಗ್ರ ಅಶ್ರಫ್‌ನನ್ನು ಬಂಧಿಸಲಾಗಿದೆ. ಆತ ವಾಸಿಸುತ್ತಿದ್ದ ಸ್ಥಳದಿಂದ ಒಂದು ಎಕೆ–47 ರೈಫಲ್‌, ಒಂದು ಹೆಚ್ಚುವರಿ ಮ್ಯಾಗಜೀನ್‌ ಹಾಗೂ 60 ಸುತ್ತು ಗುಂಡುಗಳು, ಇತರೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ಟ್ವೀಟಿಸಿದೆ.

ಬಂಧಿತ ಉಗ್ರನನ್ನು 14 ದಿನಗಳು ಪೊಲೀಸ್‌ ವಶಕ್ಕೆ ನೀಡಿ ದೆಹಲಿ ಕೋರ್ಟ್‌ ಆದೇಶಿಸಿದೆ.

'ಭಾರತದ ಗುರುತಿನ ಚೀಟಿ ಬಳಸಿಕೊಂಡು ಹತ್ತು ವರ್ಷಗಳಿಗೂ ಹೆಚ್ಚು ಸಮಯದಿಂದ ಆತ ದೇಶದಲ್ಲಿ ವಾಸಿಸುತ್ತಿದ್ದಾನೆ. ಸ್ಲೀಪರ್‌ ಸೆಲ್‌ ಆಗಿ ಹಾಗೂ ವಿಧ್ವಂಸಕ ಚಟುವಟಿಕೆಗಳನ್ನು ನಡೆಸುವ ಕಾರ್ಯಗಳಲ್ಲಿ ಭಾಗಿಯಾಗಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ' ಎಂದು ದೆಹಲಿ ಪೊಲೀಸ್ ವಿಶೇಷ ದಳದ ಡಿಸಿಪಿ ಪ್ರಮೋದ್‌ ಕುಶ್ವಾಹಾ ಹೇಳಿದ್ದಾರೆ.

'ಜಮ್ಮು ಮತ್ತು ಕಾಶ್ಮೀರ ಹಾಗೂ ದೇಶದ ಹಲವು ಕಡೆ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದಾಗಿ ಆತ ಬಹಿರಂಗ ಪಡಿಸಿದ್ದಾನೆ. ಪಾಕಿಸ್ತಾನದ ಐಎಸ್‌ಐನಿಂದ ಆತ ತರಬೇತಿ ಪಡೆದಿದ್ದು, ಆತನಿಗೆ ಭಯೋತ್ಪಾದನಾ ಕೃತ್ಯಗಳನ್ನು ನಡೆಸುವ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಆತನ ಇತರೆ ಸಹಚರರನ್ನು ಗುರುತಿಸುವ ಪ್ರಯತ್ನ ನಡೆಸಲಾಗಿದೆ. ಪಾಕಿಸ್ತಾನ ಐಎಸ್‌ಐನಿಂದ ನಾಸಿರ್‌ ಎಂಬ ಸಾಂಕೇತಿಕ ಹೆಸರಿನ ವ್ಯಕ್ತಿ ಉಗ್ರ ಅಶ್ರಫ್‌ಗೆ ಸೂಚನೆಗಳನ್ನು ನೀಡುತ್ತಿದ್ದ. ನಾವು ಬಹಳ ದೊಡ್ಡ ಭಯೋತ್ಪಾದನಾ ಕೃತ್ಯವನ್ನು ತಡೆದಿದ್ದೇವೆ' ಎಂದಿದ್ದಾರೆ.

'ಆತ ಹಲವು ನಕಲಿ ಗುರುತಿನ ಚೀಟಿಗಳನ್ನು ಹೊಂದಿದ್ದ. ಅದರಲ್ಲಿ ಒಂದು ಅಹಮದ್ ನೂರಿ ಹೆಸರಿನದು. ಆತ ಭಾರತೀಯ ಪಾಸ್‌ಪೋರ್ಟ್‌ ಸಹ ಪಡೆದು ಥಾಯ್ಲೆಂಡ್‌ ಹಾಗೂ ಸೌದಿ ಅರೇಬಿಯಾಗೆ ಪ್ರಯಾಣಿಸಿದ್ದನು. ಆತ ದಾಖಲೆಗಳಿಗಾಗಿ ಗಾಜಿಯಾಬಾದ್‌ನಲ್ಲಿ ಭಾರತೀಯ ಮಹಿಳೆಯೊಬ್ಬರನ್ನು ವಿವಾಹವಾಗಿದ್ದ; ಹಾಗೇ ಬಿಹಾರದಿಂದ ಭಾರತೀಯ ಗುರುತಿನ ಚೀಟಿ ಪಡೆದಿದ್ದ' ಎಂದು ಡಿಸಿಪಿ ಪ್ರಮೋದ್‌ ತಿಳಿಸಿದ್ದಾರೆ.

ಇದನ್ನೂ ಓದಿ: 

ಬಾಂಗ್ಲಾದೇಶದ ಮೂಲಕ ಸಿಲಿಗುರಿ ಗಡಿ ಭಾಗದ ಮೂಲಕ ಭಾರತ ಪ್ರವೇಶಿಸಿದ್ದ...ದೆಹಲಿಯಲ್ಲಿ ಗುರುತು ಮರೆಮಾಡಿಕೊಂಡು 'ಪೀರ್‌ ಮೌಲಾನಾ' ಆಗಿ ಓಡಾಡಿದ್ದ ಎಂದು ಹೇಳಿದ್ದಾರೆ.

ಉಗ್ರ ಮೊಹಮ್ಮದ್‌ ಅಶ್ರಫ್‌ ವಾಸಿಸುತ್ತಿದ್ದ ಮನೆಯ ಮಾಲೀಕ ಉಜೈಬ್‌ ಪ್ರತಿಕ್ರಿಯಿಸಿದ್ದು, 'ಮೊಹಮ್ಮದ್‌ ಅಶ್ರಫ್‌ ಇಲ್ಲಿ 6 ತಿಂಗಳು ಇದ್ದರು. ದಾಖಲೆಯ ಸಲುವಾಗಿ ನನ್ನ ತಂದೆ ಅಶ್ರಫ್‌ನ ಆಧಾರ್‌ ಕಾರ್ಡ್‌ ಪಡೆದಿದ್ದರು....ಆತ ಇಲ್ಲಿಂದ ಹೊರಟ ನಂತರ ನಾವು ಸಂಪರ್ಕದಲ್ಲಿಲ್ಲ... ಅಗತ್ಯವಾದಲ್ಲಿ ನಾವು ಪೊಲೀಸರಿಗೆ ಸಹಕರಿಸುತ್ತೇವೆ' ಎಂದಿದ್ದಾರೆ.

'ಮನೆಯಲ್ಲಿ ಬಾಡಿಗೆಗೆ ಇದ್ದಾಗ ಉಗ್ರ ಅಶ್ರಫ್‌, ನನ್ನ ತಂದೆ ನಸೀಮ್‌ ಅಹಮದ್‌ ಜೊತೆಗೆ ಗೆಳೆತನ ಬೆಳೆಸಿದ್ದ ಹಾಗೂ ಅವರ ವಿಳಾಸದಲ್ಲಿ ಪಡಿತರ ಚೀಟಿ ಪಡೆಯಲು ಸಹಾಯ ಪಡೆದಿದ್ದ' ಎಂದು ಉಜೈಬ್‌ ಹೇಳಿದ್ದಾರೆ.

ಈ ಎಲ್ಲ ದಾಖಲೆಗಳನ್ನು ಬಳಸಿಕೊಂಡು ಆತ ನಕಲಿ ಗುರುತಿನ ಚೀಟಿ ಸೃಷ್ಟಿಸಿಕೊಂಡಿರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು