ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಚುನಾವಣೆ: ಪಾಲಕ್ಕಾಡ್‌ನಲ್ಲಿ ಹಳೆ ಬೇರು– ಹೊಸ ಚಿಗುರು ಹಣಾಹಣಿ

ಗಮನ ಸೆಳೆದ ಕ್ಷೇತ್ರ
Last Updated 25 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಪಾಲಕ್ಕಾಡ್‌: ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಯಾದ ‘ಮೆಟ್ರೋಮ್ಯಾನ್‌’ ಇ. ಶ್ರೀಧರನ್ ಸ್ಪರ್ಧೆಯಿಂದಾಗಿ ಪಾಲಕ್ಕಾಡ್‌ ಕ್ಷೇತ್ರವು ಪ್ರತಿಷ್ಠಿತ ಎನಿಸಿಕೊಂಡಿದೆ. ಹೊಸ ಚಿಗುರು–ಹಳೆ ಬೇರಿನ ನಡುವೆ ಹಣಾಹಣಿಈ ಪ್ರತಿಷ್ಠಿತ ಕ್ಷೇತ್ರದ ಇನ್ನೊಂದು ವಿಶೇಷ. ಮೂರನೇ ಅವಧಿಗೆ ಮರು ಆಯ್ಕೆ ಬಯಸಿರುವ ಕಾಂಗ್ರೆಸ್‌ನ ಶಫಿ ಪರಂಬಿಲ್‌ಗೆ ಈಗ ವಯಸ್ಸು 38 ವರ್ಷವಾದರೆ, ಶ್ರೀಧರನ್‌ಗೆ 88 ವರ್ಷ.

2011ರಿಂದಲೂ ಈ ಕ್ಷೇತ್ರವು ಕಾಂಗ್ರೆಸ್‌ ವಶದಲ್ಲಿದೆ. ಎಲ್‌ಡಿಎಫ್‌ ಇಲ್ಲಿ ಹೊಸ ಮುಖವೊಂದನ್ನು ಕಣಕ್ಕಿಳಿಸಿದೆ. ತೀವ್ರವಾದ ತ್ರಿಕೋನ ಸ್ಪರ್ಧೆಗೆ ಈ ಬಾರಿ ಕ್ಷೇತ್ರವು ಸಾಕ್ಷಿಯಾಗಬಹುದು.

ಯುವ ಮುಖಂಡ ಶಫಿ ಅವರು ಕ್ಷೇತ್ರದಲ್ಲಿ ಹೊಂದಿರುವ ಜನಪ್ರಿಯತೆ ಮತ್ತು ಅವರು ಜಾರಿಗೆ ತಂದಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನೇ ಯುಡಿಎಫ್‌ ನೆಚ್ಚಿಕೊಂಡಿದೆ. ಕಳೆದ ಚುನಾವಣೆಯಲ್ಲಿ ಶಫಿ ಅವರಿಗೆ 57,559 ಮತಗಳು ಸಿಕ್ಕಿದ್ದವು. 17 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಅವರು ಗೆದ್ದಿದ್ದರು.

ಶಫಿ ಅವರು ಕ್ಷೇತ್ರದ ಜನರ ಕೈಗೆ ಸಿಗುವ ವ್ಯಕ್ತಿ. ಉತ್ತಮ ವಾಗ್ಮಿಯೂ ಆಗಿರುವ ಅವರು ಕಳೆದ ಹತ್ತು ವರ್ಷಗಳಲ್ಲಿ ಕ್ಷೇತ್ರದ ಎಲ್ಲ ಜಾತಿ–ಧರ್ಮಗಳ ಜನರ ಜತೆಗೆ ವೈಯಕ್ತಿಕ ಎನ್ನುವಂತಹ ಸಂಬಂಧ ಇರಿಸಿಕೊಂಡಿದ್ದಾರೆ. ತಮ್ಮ ಕಾರ್ಯಕ್ಷಮತೆಯ ಬಗ್ಗೆ ಕ್ಷೇತ್ರದ ಜನರಲ್ಲಿ ಮೆಚ್ಚುಗೆ ಇದೆ. ಹಾಗಾಗಿ ಇನ್ನೊಂದು ಅವಧಿಗೆ ಗೆಲುವು ನಿಶ್ಚಿತ ಎಂಬ ವಿಶ್ವಾಸದಲ್ಲಿ ಶಫಿ ಇದ್ದಾರೆ. ಶಫಿ ಅವರು ರಾಜ್ಯ ಯುವ ಕಾಂಗ್ರೆಸ್‌ನ ಅಧ್ಯಕ್ಷರೂ ಹೌದು.

ಈ ಯುವ ಮುಖಂಡನ ಜನಪ್ರಿಯತೆಯಿಂದ ಶ್ರೀಧರನ್ ಅವರು ಎದೆಗುಂದಿಲ್ಲ. ಸೀಮಿತ ಸಮಯದಲ್ಲಿ ಸಾಧ್ಯವಾದಷ್ಟು ಜನರನ್ನು ತಲುಪಲು ಅವರು ಯತ್ನಿಸುತ್ತಿದ್ದಾರೆ.

ಕೇರಳದಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಎರಡು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಪಾಲಕ್ಕಾಡ್‌ ಕೂಡ ಒಂದು. ಅದಲ್ಲದೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಾಲಕ್ಕಾಡ್‌ನಿಂದ ಸ್ಪರ್ಧಿಸಿದ್ದ ಶೋಭಾ ಸುರೇಂದ್ರನ್‌ ಅವರು 40,076 ಮತಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದರು. 2011ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಇಲ್ಲಿ ಶೇ 19.86ರಷ್ಟು ಮತಗಳು ಸಿಕ್ಕಿದ್ದರೆ 2016ರಲ್ಲಿ ಇದು ಶೇ 29.08ಕ್ಕೆ ಏರಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಶೇ 29.76ರಷ್ಟು ಮತ ಸಿಕ್ಕಿತ್ತು. ಈ ಎಲ್ಲ ಕಾರಣಗಳಿಂದಾಗಿಯೇ ಶ್ರೀಧರನ್‌ ಅವರನ್ನು ಬಿಜೆಪಿ ಇಲ್ಲಿ ಕಣಕ್ಕೆ ಇಳಿಸಿದೆ.

ಶ್ರೀಧರನ್‌ ಅವರ ದೊಡ್ಡ ಹಿನ್ನೆಲೆ ಮತ್ತು ಶುದ್ಧ ಚಾರಿತ್ರ್ಯವು ಚುನಾವಣೆಯಲ್ಲಿ ನೆರವಾಗಲಿದೆ ಎಂಬುದು ಬಿಜೆಪಿಯ ಲೆಕ್ಕಾಚಾರ. ಆದರೆ, ಕೆಲವರು ಶ್ರೀಧರನ್‌ ಅವರ ಕಾಲು ತೊಳೆಯುವ ಮತ್ತು ಕಾಲಿಗೆ ಬೀಳುವ ವಿಡಿಯೊಗಳು ವೈರಲ್‌ ಆಗಿ ಇತ್ತೀಚೆಗೆ ವಿವಾದವಾಗಿತ್ತು. ಇದು ಅವರ ‘ಊಳಿಗಮಾನ್ಯ ಮನಸ್ಥಿತಿ’ಯ ಪ್ರತಿಬಿಂಬ ಎಂದು ಪ್ರತಿಸ್ಪರ್ಧಿಗಳು ಹೇಳಿದ್ದಾರೆ. ಆದರೆ, ಹಿರಿಯರಿಗೆ ನಮಸ್ಕರಿಸುವುದು ಭಾರತೀಯ ಸಂಸ್ಕೃತಿ ಎಂದು ಶ್ರೀಧರನ್‌ ತಿರುಗೇಟು ಕೊಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT