ಭಾನುವಾರ, ಏಪ್ರಿಲ್ 18, 2021
33 °C
ಗೃಹವ್ಯವಹಾರಗಳ ಸಂಸತ್ತಿನ ಸ್ಥಾಯಿ ಸಮಿತಿ ಅಭಿಪ್ರಾಯ

ಪೋಕ್ಸೊ ತಿದ್ದುಪಡಿ; ಸಮಿತಿ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) -ಪ್ರಾತಿನಿಧಿಕ ಚಿತ್ರ

ನವದೆಹಲಿ: ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ವಿಚಾರಣೆಗೆ ಒಳಪಡಿಸುವ ಆರೋ‍ಪಿಗಳ ವಯಸ್ಸಿನ ಮಿತಿಯನ್ನು 18 ವರ್ಷದಿಂದ 16 ವರ್ಷಕ್ಕೆ ಇಳಿಸುವ ಸಾಧ್ಯತೆಯ ಬಗ್ಗೆ ಸರ್ಕಾರ ಆಲೋಚಿಸಬೇಕು ಎಂದು ಸಂಸದೀಯ ಸಮಿತಿ ಹೇಳಿದೆ. ಆಪ್ತಸಮಾಲೋಚನೆ (ಕೌನ್ಸೆಲಿಂಗ್‌) ನಡೆಸಿ ಮನಪರಿವರ್ತನೆ ಮಾಡದೇ ಕೈಬಿಟ್ಟಲ್ಲಿ, ಈ ವಯಸ್ಸಿನವರು ಗಂಭೀರ ಸ್ವರೂಪದ ಲೈಂಗಿಕ ಅಪರಾಧ ಕೃತ್ಯಗಳಲ್ಲಿ ತೊಡಗಿಕೊಳ್ಳುವ ಅಪಾಯ ಇದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

ಮಕ್ಕಳು ಮತ್ತು ಮಹಿಳೆಯರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸಿಕೊಳ್ಳುವ ಪೊಲೀಸರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ, ಕಠಿಣ ನಿಬಂಧನೆಗಳನ್ನು ಸೇರಿಸಲು ಕಾನೂನಿಗೆ ತಿದ್ದುಪಡಿ ಮಾಡಬೇಕೆಂದು ಸೂಚಿಸಿತು.

ಹೆಚ್ಚೆಚ್ಚು ಬಾಲಕರು ಇಂತಹ ಪ್ರಕರಣಗಳಲ್ಲಿ ಭಾಗಿಯಾಗುತ್ತಿರುವ ಕಾರಣ, ಪೋಕ್ಸೊವನ್ನು ಮರುಪರಿಶೀಲಿಸಬೇಕಾದ ಅಗತ್ಯವಿದೆ ಎಂದು ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ ಅಧ್ಯಕ್ಷತೆಯ ಗೃಹವ್ಯವಹಾರ ಕುರಿತ ಸಂಸತ್ತಿನ ಸ್ಥಾಯಿಸಮಿತಿ ತಿಳಿಸಿದೆ.

ಪ್ರಸ್ತುತ, 16 ವರ್ಷಕ್ಕಿಂತ ಮೇಲ್ಪಟ್ಟವರನ್ನು ಮಾತ್ರ ಕೊಲೆ ಅಥವಾ ಅತ್ಯಾಚಾರದಂತಹ ಗಂಭೀರ ಅಪರಾಧಗಳಲ್ಲಿ ತೊಡಗಿದ್ದರೆ ವಿಚಾರಣೆಗೆ ಗುರಿಪಡಿಸಬಹುದಾಗಿದೆ.

ಸರ್ಕಾರದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಪೋಕ್ಸೊ ಕಾಯ್ದೆಯಡಿ ದಾಖಲಾಗುವ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. 2017ರಲ್ಲಿ 32,608, 2018ರಲ್ಲಿ 39,827 ಹಾಗೂ 2019ರಲ್ಲಿ 47,325 ಪ್ರಕರಣಗಳು ದಾಖಲಾಗಿವೆ. 2018ಕ್ಕೆ ಹೋಲಿಸಿದರೆ, 2019ರಲ್ಲಿ ಶೇ 18ರಷ್ಟು ಹೆಚ್ಚು ಪ್ರಕರಣಗಳು ದಾಖಲಾಗಿವೆ.

ಗೃಹಸಚಿವಾಲಯವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಜೊತೆಗೂಡಿ ಪೋಕ್ಸೊ ಕಾಯ್ದೆ 2012ರ ಅನ್ವಯ 18 ವರ್ಷ ವಯಸ್ಸಿನ ಮಿತಿಯನ್ನು 16 ವರ್ಷಕ್ಕೆ ಇಳಿಸಬಹುದೇ ಎಂದು ಪರಿಶೀಲಿಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ‘ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ’ ಎಂಬ ವರದಿಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಕೆಲವು ಪ್ರಕರಣಗಳಲ್ಲಿ ಪೋಕ್ಸೊ ಕಾಯ್ದೆಯನ್ನು ಜಾರಿ ಮಾಡಲು ಇರುವ ತೊಂದರೆಗಳನ್ನು ತಮಿಳುನಾಡು ಸರ್ಕಾರ ಮುಂದಿರಿಸಿದೆ ಎಂದು ವರದಿ ಹೇಳಿದೆ. ‘18 ವರ್ಷದೊಳಗಿನ ಹುಡುಗಿ ಮತ್ತು 18 ವರ್ಷ ದಾಟಿದ ಹುಡುಗ ಪರಸ್ಪರ ಒಪ್ಪಿಗೆಯ ಮೇಲೆ ವಿವಾಹವಾಗಿರುತ್ತಾರೆ. ಹುಡುಗಿಯ ಪೋಷಕರು ದೂರು ನೀಡಿದಾಗ, ಹುಡುಗನನ್ನು ಬಾಲ್ಯವಿವಾಹ ಮತ್ತು ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗುತ್ತದೆ. ಇಂತಹ ಸಂಕೀರ್ಣ ಪ್ರಕರಣಗಳು ಅತಿಹೆಚ್ಚಾಗಿ ದಾಖಲಾಗುತ್ತಿವೆ. ಇವುಗಳ ಪಾಲು ಶೇ 40ರಷ್ಟಿದೆ’ ಎಂದು ವರದಿ ಉದಾಹರಣೆ ನೀಡಿದೆ.

ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧ ಪ್ರಕರಣಗಳನ್ನು ನೋಂದಾಯಿಸದಿರುವ ಬಗ್ಗೆಯೂ ಸಮಿತಿ ಕಳವಳ ವ್ಯಕ್ತಪಡಿಸಿದೆ. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ವಿಳಂಬಕ್ಕೆ ಇದೂ ಒಂದು ಪ್ರಮುಖ ಕಾರಣವಾಗಿದೆ ಎಂದು ಹೇಳಿದೆ. ಈ ವಿಚಾರದಲ್ಲಿ ರಾಜಸ್ಥಾನ ಸರ್ಕಾರ ತೆಗೆದುಕೊಂಡಿರುವ ಕ್ರಮದ ಬಗ್ಗೆ ಸಮಿತಿ ಮೆಚ್ಚುಗೆ ವ್ಯಕ್ತಪಡಿಸಿದೆ. ಈ ರೀತಿಯ ಪ್ರಕರಣಗಳಲ್ಲಿ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಾಗಿದೆಯೇ ಅಥವಾ ಇಲ್ಲವೇ ಎಂದು ಪರಿಶೀಲನೆ ನಡೆಸುವ ವಿಧಾನವನ್ನು ಎಲ್ಲ ರಾಜ್ಯಗಳೂ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ.

‘ಇಂತಹ ಕಾರ್ಯಾಚರಣೆ ನಡೆಸುವುದರಿಂದ ಕೆಳಹಂತದ ಪೊಲೀಸ್ ಅಧಿಕಾರಿಗಳಲ್ಲಿ ಜಾಗೃತಿ ಮೂಡಿ, ಪ್ರಕರಣಗಳು ದಾಖಲಾಗುತ್ತವೆ. ಮುಖ್ಯವಾಗಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳೂ ಸೇರಿದಂತೆ ವಿವಿಧ ದೂರುಗಳು ಬಂದಾಗ, ಆನ್‌ಲೈನ್‌ನಲ್ಲಿ ಎಫ್‌ಐಆರ್ ದಾಖಲಿಸಲು ಸಮಿತಿ ಶಿಫಾರಸು ಮಾಡಿದೆ’ ಎಂದು ವರದಿ ತಿಳಿಸಿದೆ.

ಸುಳ್ಳು ಪ್ರಕರಣಗಳಿಗೆ ಶಾಸ್ತಿ: ಸಮಿತಿ ಶಿಫಾರಸು

ಸುಳ್ಳು ಪ್ರಕರಣ ದಾಖಲು ಮತ್ತು ಕಾನೂನು ದುರುಪಯೋಗದ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಮಿತಿ, ಸುಳ್ಳು ಪ್ರಕರಣಗಳನ್ನು ದಾಖಲಿಸಿದ ಪೊಲೀಸ್ ಸಿಬ್ಬಂದಿಯನ್ನೇ ಅದಕ್ಕೆ ಹೊಣೆಗಾರರನ್ನಾಗಿ ಮಾಡಿ, ಕ್ರಮ ಕೈಗೊಳ್ಳಬೇಕು ಎಂದಿದೆ. ಇದೇ ವೇಳೆ ಸುಳ್ಳು ಪ್ರಕರಣಗಳನ್ನು ದಾಖಲಿಸುವ ವ್ಯಕ್ತಿಗಳ ವಿರುದ್ಧವೂ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದೆ. ಸುಳ್ಳು ಪ್ರಕರಣಗಳಲ್ಲಿ ಕ್ರಮ ತೆಗೆದುಕೊಳ್ಳುವ ಕುರಿತಂತೆ ಎಲ್ಲ ರಾಜ್ಯಗಳಿಗೆ ಗೃಹಸಚಿವಾಲಯವು ಸೂಚನೆ ನೀಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ಗೃಹಸಚಿವಾಲಯವು ಈ ವಿಷಯದಲ್ಲಿ ಕಾನೂನು ಸಚಿವಾಲಯವನ್ನು ಸಂಪರ್ಕಿಸಿ, ಸುಳ್ಳು ಪ್ರಕರಣಗಳ ವಿರುದ್ಧ ಕಠಿಣ ನಿಬಂಧನೆಗಳನ್ನು ಸೇರಿಸಲು ಅಗತ್ಯ ಕಾನೂನು ತಿದ್ದುಪಡಿ ಮಾಡಬೇಕು ಎಂದು ಸ್ಥಾಯಿ ಸಮಿತಿ ಶಿಫಾರಸು ಮಾಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು