ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ಬಿಕ್ಕಟ್ಟು ಶಮನಕ್ಕೆ ಭಾರತ–ಚೀನಾ ಸಮ್ಮತಿ

ಪ್ಯಾಂಗಾಂಗ್ ಪ್ರದೇಶದಲ್ಲಿ ಗಸ್ತು ನಿಷೇಧಕ್ಕೆ ಭಾರತ–ಚೀನಾ ಒಪ್ಪಿಗೆ: ರಾಜನಾಥ್‌
Last Updated 12 ಫೆಬ್ರುವರಿ 2021, 0:44 IST
ಅಕ್ಷರ ಗಾತ್ರ

ನವದೆಹಲಿ: ಭಾರತ–ಚೀನಾ ಗಡಿಯಲ್ಲಿರುವ ಪೂರ್ವ ಲಡಾಖ್‌ನ ಪ್ಯಾಂಗಾಂಗ್‌ ಸರೋವರ ಪ್ರದೇಶದಲ್ಲಿ ಸೃಷ್ಟಿಯಾಗಿದ್ದ ಬಿಕ್ಕಟ್ಟು ಪರಿಹಾರಕ್ಕೆ ಎರಡೂ ದೇಶಗಳು ಸಹಮತಕ್ಕೆ ಬಂದಿವೆ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಸಂಸತ್ತಿಗೆ ಗುರುವಾರ ತಿಳಿಸಿದ್ದಾರೆ.

ಚೀನಾದ ಸೈನಿಕರು ‍ಪ್ಯಾಂಗಾಂಗ್‌ ಸರೋವರದ ಉತ್ತರ ದಂಡೆಯಲ್ಲಿರುವ ವಿವಾದಾತ್ಮಕ ಫಿಂಗರ್‌ 8 ಪ್ರದೇಶದ ಪೂರ್ವಕ್ಕೆ ಸರಿಯಲಿದ್ದಾರೆ ಎಂದು ಅವರು ಹೇಳಿದ್ದಾರೆ. ಸುದೀರ್ಘ ಕಾಲದಿಂದ ಎರಡೂ ದೇಶಗಳ ನಡುವೆ ಇದ್ದ ಬಿಗುವಿನ ಪರಿಸ್ಥಿತಿಯ ಶಮನದ ದಿಸೆ ಯಲ್ಲಿ ಇದು ಮಹತ್ವದ ಹೆಜ್ಜೆ ಎಂದು ಪರಿಗಣಿಸಲಾಗಿದೆ.

ಚೀನಾದ ನಡೆಗೆ ಪ್ರತಿಯಾಗಿ, ಭಾರತದ ಯೋಧರು ಫಿಂಗರ್ 3 ಪ್ರದೇಶದ ಸಮೀಪದಲ್ಲಿರುವ ಧನ್‌ ಸಿಂಗ್‌ ಥಾಪಾ ಚೌಕಿಯ ಕಾಯಂ ಶಿಬಿರಕ್ಕೆ ಹಿಂದಿರುಗಲಿದ್ದಾರೆ.

ಫಿಂಗರ್‌ 3 ಮತ್ತು ಫಿಂಗರ್‌ 8 ನಡು ವಣ ವಿವಾದಾತ್ಮಕ ಪ್ರದೇಶದಲ್ಲಿ ಯಾವದೇಶವೂ ಗಸ್ತು ನಡೆಸುವುದಿಲ್ಲ ಎಂಬುದು ರಾಜನಾಥ್‌ ಅವರ ಹೇಳಿಕೆಯ ಅರ್ಥ. ಎರಡೂ ದೇಶಗಳ ನಡುವೆ ಮುಂದೆ ಒಪ್ಪಂದವಾಗಿ ಈ ಪ್ರದೇಶದಲ್ಲಿ ಯೋಧರ ನಿಯೋಜನೆಯ ನಿರ್ಧಾರ ಕೈಗೊಳ್ಳಬಹುದು ಎಂದು ರಕ್ಷಣಾ ಪರಿಣತರು ವಿಶ್ಲೇಷಿಸಿದ್ದಾರೆ.

ಫಿಂಗರ್‌ 4 ಮತ್ತು ಫಿಂಗರ್‌ 8 ಪ್ರದೇಶದ ನಡುವೆ ಚೀನಾ ಸೇನೆಯು ಹಲವು ಬಂಕರ್‌ಗಳು ಮತ್ತು ಕಟ್ಟಡಗಳನ್ನು ನಿರ್ಮಿಸಿದೆ.

ಫಿಂಗರ್‌ 4 ಪ್ರದೇಶವನ್ನು ದಾಟಿ ಮುಂದಕ್ಕೆ ಭಾರತದ ಯೋಧರು ಗಸ್ತು ನಡೆಸುವುದನ್ನು ತಡೆದಿತ್ತು. ಇದು, ಭಾರತದ ಕಡೆಯಿಂದ ಪ್ರಬಲ ಪ್ರತಿಕ್ರಿಯೆಗೆ ಕಾರಣವಾಗಿತ್ತು. ಫಿಂಗರ್‌ 4 ಮತ್ತು ಫಿಂಗರ್‌ 8ರ ನಡುವೆ ಇರುವ ಪ್ರದೇಶದಿಂದ ಚೀನಾದ ಸೇನೆಯು ಹಿಂದಕ್ಕೆ ಸರಿಯಬೇಕು ಎಂಬುದನ್ನು ಒಂಬತ್ತು ಸುತ್ತಿನ ಮಾತುಕತೆಯಲ್ಲಿಯೂ ಭಾರತವು ಬಲವಾಗಿ ಪ್ರತಿಪಾದಿಸಿತ್ತು. ಪರ್ವತಗಳ ಮುಂಚಾಚು ಪ್ರದೇಶವನ್ನು ಫಿಂಗರ್‌ ಎಂದು
ಕರೆಯಲಾಗುತ್ತಿದೆ.

ಪ್ಯಾಂಗಾಂಗ್‌ ಸರೋವರದ ದಕ್ಷಿಣದ ದಂಡೆಯಲ್ಲಿಯೂ ಇಂತಹುದೇ ಕ್ರಮ ಕೈಗೊಳ್ಳಲಾಗುವುದು. 2020ರ ನಂತರ ಈ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಎಲ್ಲ ಕಟ್ಟಡಗಳು ಮತ್ತು ಇತರ ನಿರ್ಮಾಣಗಳನ್ನು ತೆಗೆಯಲಾಗುವುದು ಎಂದು ರಾಜನಾಥ್‌ ಅವರು ರಾಜ್ಯಸಭೆಗೆ ತಿಳಿಸಿದ್ದಾರೆ.

ಐದು ತಿಂಗಳ ಹಿಂದೆ ಚೀನಾದ ಸೈನಿಕರು ಭಾರತದ ಯೋಧರಿಗೆ ತಡೆ ಒಡ್ಡಿದ ಬಳಿಕ, ಪ್ಯಾಂಗಾಂಗ್‌ ಸರೋವರದ ದಕ್ಷಿಣ ಭಾಗದಲ್ಲಿರುವ ಮುಖ್‌ಪಾರಿ, ರೆಚಿನಾ ಲಾ ಮತ್ತು ಮಗರ್‌ನಂತಹ ವ್ಯೂಹಾತ್ಮಕವಾಗಿ ಮಹತ್ವದ ಪರ್ವತಗಳನ್ನು ಭಾರತವು ವಶಕ್ಕೆ
ತೆಗೆದುಕೊಂಡಿತ್ತು.

ಕಾಂಗ್ರೆಸ್‌ ಪ್ರತಿಭಟನೆ

ರಾಜನಾಥ್‌ ಅವರ ಹೇಳಿಕೆಯಿಂದ ತಮಗೆ ಸಮಾಧಾನ ಆಗಿಲ್ಲ ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಹೇಳಿದ್ದಾರೆ. ಗಡಿಯಲ್ಲಿ ಯಥಾಸ್ಥಿತಿ ಸ್ಥಾಪನೆ ಆಗದೇ ಇದ್ದರೆ ಶಾಂತಿ ಮತ್ತು ಸೌಹಾರ್ದ ಸಾಧ್ಯವಿಲ್ಲ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಭಾರತದ ಭೂ ಪ್ರದೇಶವನ್ನು ಅನ್ಯರಿಗೆ ನೀಡಿದೆ ಎಂದು ಅವರು ಆರೋಪಿಸಿದ್ದಾರೆ.

ಪೂರ್ವ ಲಡಾಖ್‌ನಲ್ಲಿ ಈಗಿನ ಸ್ಥಿತಿ ಎಂಬ ವಿಚಾರದಲ್ಲಿ ರಾಜನಾಥ್‌ ನೀಡಿದ ಹೇಳಿಕೆಯ ಬಗ್ಗೆ ಕೆಲವು ಸ್ಪಷ್ಟನೆಗಳನ್ನು ಕೇಳಲು ಕಾಂಗ್ರೆಸ್‌ ಸಂಸದರು ಬಯಸಿದ್ದರು. ಆದರೆ, ಇದಕ್ಕೆ ಅವಕಾಶ ನಿರಾಕರಿಸಲಾಯಿತು. ಹಾಗಾಗಿ, ಮಾಜಿ ರಕ್ಷಣಾ ಸಚಿವ ಎ.ಕೆ. ಆ್ಯಂಟನಿ ಮತ್ತು ಕಾಂಗ್ರೆಸ್‌ನ ಇತರ ಸಂಸದರು ರಾಜ್ಯಸಭೆಯಲ್ಲಿ ಪ್ರತಿಭಟನೆ ನಡೆಸಿದರು.

***

ನಮ್ಮ ಯೋಧರ ತ್ಯಾಗವನ್ನು ಭಾರತ ಸರ್ಕಾರವು ಏಕೆ ಅವಮಾನಿಸುತ್ತಿದೆ ಮತ್ತು ನಮ್ಮ ಭೂ ಪ್ರದೇಶವನ್ನು ಅನ್ಯರಿಗೆ ಏಕೆ ನೀಡಿದೆ?

- ರಾಹುಲ್‌ ಗಾಂಧಿ,ಕಾಂಗ್ರೆಸ್ ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT