ವಿದೇಶಿ ದೇಣಿಗೆಗೆ ಆಧಾರ್ ಕಡ್ಡಾಯ: ಮಸೂದೆಗೆ ರಾಜ್ಯಸಭೆ ಅಸ್ತು

ನವದೆಹಲಿ: ವಿದೇಶಿ ದೇಣಿಗೆ ಸ್ವೀಕರಿಸುವ ಸರ್ಕಾರೇತರ ಸಂಸ್ಥೆಯ ಪದಾಧಿಕಾರಿಗಳು, ನೋಂದಣಿಯ ಸಂದರ್ಭದಲ್ಲಿ ತಮ್ಮ ಆಧಾರ್ ಸಂಖ್ಯೆ ನೀಡುವುದನ್ನು ಕಡ್ಡಾಯಗೊಳಿಸುವ ವಿದೇಶಿ ದೇಣಿಗೆ (ನಿಯಂತ್ರಣ) ಮಸೂದೆಯು ಬುಧವಾರ ರಾಜ್ಯಸಭೆಯಲ್ಲಿ ಅಂಗೀಕಾರಗೊಂಡಿತು.
ಎಂಟು ಸಂಸದರ ಅಮಾನತು ವಿರೋಧಿಸಿ ವಿರೋಧಪಕ್ಷದವರು ನಡೆಸಿದ ಪ್ರತಿಭಟನೆಯ ನಡುವೆಯೇ ರಾಜ್ಯಸಭೆಯಲ್ಲಿ ವಿದೇಶಿ ದೇಶಣಿಗೆ (ನಿಯಂತ್ರಣ) ಮಸೂದೆಗೆ ಅವಿರೋಧವಾಗಿ ಅನುಮೋದನೆ ದೊರೆಯಿತು.
ಮಸೂದೆ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ, ‘ಈ ಮಸೂದೆ ಯಾವುದೇ ಸ್ವಯಂ ಸೇವಾ ಸಂಸ್ಥೆ (ಎನ್‌ಜಿಒ) ವಿರುದ್ಧವಲ್ಲ, ಬದಲಿಗೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರುವ ಪ್ರಯತ್ನ’ ಎಂದು ಹೇಳಿದರು.
‘ದೇಶದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಲು ಬಯಸುವ ಸ್ವಯಂ ಸೇವಾ ಸಂಸ್ಥೆಗಳ ಹಿತದೃಷ್ಟಿಯಿಂದ ಈ ಮಸೂದೆಯನ್ನು ತರಲಾಗಿದೆ. ಈ ಮಸೂದೆಗೆ ಸೋಮವಾರ ಲೋಕಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಮುಂದೆ ರಾಷ್ಟ್ರಪತಿಯವರ ಒಪ್ಪಿಗೆಗಾಗಿ ಕಳುಹಿಸಲಾಗುತ್ತದೆ’ ಎಂದು ಹೇಳಿದರು.
ಈ ಮಸೂದೆಯಿಂದಾಗಿ ಸ್ವಯಂ ಸೇವಾ ಸಂಸ್ಥೆಗಳು ತಮ್ಮ ವಾರ್ಷಿಕ ಆಡಳಿತ ವೆಚ್ಚವನ್ನು ಶೇ 50ರಿಂದ ಶೇ 20ಕ್ಕೆ ಕಡಿತಗೊಳಿಸಬೇಕು. ಇದರಿಂದ ಮೂಲ ಉದ್ದೇಶಗಳಿಗೆ ಹೆಚ್ಚು ಹಣ ಬಳಕೆಯಾಗುತ್ತದೆ ಎಂದು ಸಚಿವರು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.