ಪಕ್ಷಗಳು 'ದೇಶ ಮೊದಲು' ಎಂಬ ಮನೋಭಾವದಿಂದ ಕೆಲಸ ಮಾಡಬೇಕು: ಕೋವಿಂದ್ ವಿದಾಯ ಭಾಷಣ

ನವದೆಹಲಿ: ರಾಜಕೀಯ ಪಕ್ಷಗಳು ಪಕ್ಷಪಾತ ಧೋರಣೆಯಿಂದ ಹೊರಬರಬೇಕು ಮತ್ತು 'ದೇಶ ಮೊದಲು' ಎಂಬ ಮನೋಭಾವದಿಂದ ಕೆಲಸ ಮಾಡಬೇಕು ಎಂದು ನಿರ್ಗಮಿತ ರಾಷ್ಟ್ರಪತಿ ರಾಮನಾಥ ಕೋವಿಂದ್ ಶನಿವಾರ ಹೇಳಿದ್ದಾರೆ.
ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನಡೆದ ತಮ್ಮ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತದ ಜನತೆಗೆ ಮತ್ತು ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತದ್ದಕ್ಕೆ ಚಿರಋಣಿಯಾಗಿರುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ದೇಶದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ
ರಾಷ್ಟ್ರಪತಿ ಹಾಗೂ ಉಭಯ ಸದನಗಳನ್ನೊಳಗೊಂಡ ಸಂಸತ್ತಿಗೆ ಅವಕಾಶ ಕಲ್ಪಿಸುವ ಸಂವಿಧಾನದ 79ನೇ ವಿಧಿಯನ್ನು ಉಲ್ಲೇಖಿಸಿದ ಕೋವಿಂದ್, 'ಈ ಸಾಂವಿಧಾನಿಕ ನಿಬಂಧನೆಗೆ ಅನುಗುಣವಾಗಿ, ರಾಷ್ಟ್ರಪತಿ ಸ್ಥಾನವನ್ನು ಸಂಸದೀಯ ಕುಟುಂಬದ ಅವಿಭಾಜ್ಯ ಅಂಗವೆಂದು ಭಾವಿಸುತ್ತೇನೆ. ಯಾವುದೇ ಕುಟುಂಬವಿರಲಿ, ಭಿನ್ನಾಭಿಪ್ರಾಯಗಳಿರುವಂತೆ, ಸಂಸದೀಯ ಕುಟುಂಬದಲ್ಲಿಯೂ ಭಿನ್ನಾಭಿಪ್ರಾಯಗಳಿವೆ. ಅವು ಹೇಗೆ ಮುನ್ನಡೆಯಬೇಕು ಎಂಬುದಕ್ಕೆ ಸಂಬಂಧಿಸಿದ್ದವುಗಳಾಗಿವೆ. ಭಿನ್ನಾಭಿಪ್ರಾಯಗಳ ಹೊರತಾಗಿಯೂ ನಾವು ಕುಟುಂಬವಾಗಿಯೇ ಉಳಿದಿದ್ದೇವೆ. ರಾಷ್ಟ್ರದ ಹಿತಾಸಕ್ತಿ ನಮ್ಮ ಪ್ರಮುಖ ಆದ್ಯತೆಯಾಗಿದೆ. ಪಕ್ಷ ಸಂಘಟನೆಗಳ ಮೂಲಕ ರಾಜಕೀಯ ಪ್ರಕ್ರಿಯೆಗಳು ನಡೆಯುತ್ತವೆ. ಆದರೆ, ಪಕ್ಷಗಳು ಪಕ್ಷದ ಪರವಾದ ನಿಲುವುಗಳಿಂದ ಹೊರಬರಬೇಕು. ದೇಶ ಮೊದಲು ಎಂಬ ಧೋರಣೆಯೊಂದಿಗೆ, ಸಾಮಾನ್ಯ ಜನರಿಗೆ, ಮಹಿಳೆಯರಿಗೆ ಯಾವುದು ಒಳಿತು, ಯಾವುದು ಅತ್ಯಗತ್ಯ ಎಂಬುದನ್ನು ಪರಿಗಣಿಸಬೇಕು' ಎಂದು ಸಲಹೆ ನೀಡಿದ್ದಾರೆ.
ಇಡೀ ದೇಶವನ್ನು ಒಂದು ಕುಟುಂಬವೆಂದು ಪರಿಗಣಿಸಿದಾಗ ಮಾತ್ರ, ಯಾವುದೇ ಭಿನ್ನಾಭಿಪ್ರಾಯಗಳನ್ನು ಶಾಂತಿಯುತವಾಗಿ ಮತ್ತು ಸಾಮರಸ್ಯದಿಂದ ಪರಿಹರಿಸಬಹುದು ಎಂಬುದು ಅರ್ಥವಾಗುತ್ತದೆ ಎಂದಿದ್ದಾರೆ.
ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಮಾತನಾಡಿರುವ ರಾಷ್ಟ್ರಪತಿ, 'ದೇಶದ ನಾಗರಿಕರು ಮತ್ತು ರಾಜಕೀಯ ಪಕ್ಷಗಳಿಗೆ ಪ್ರತಿಭಟನೆಯೂ ಸೇರಿದಂತೆ ಅನೇಕ ಸಾಂವಿಧಾನಿಕ ಅವಕಾಶಗಳು ಮುಕ್ತವಾಗಿವೆ. ನಮ್ಮ ರಾಷ್ಟ್ರಪಿತ (ಮಹಾತ್ಮ ಗಾಂಧಿ) ಸಹ ಉದ್ದೇಶಗಳ ಈಡೇರಿಕೆಗಾಗಿ ಅಂತಿಮವಾಗಿ ಸತ್ಯಾಗ್ರಹದ ಅಸ್ತ್ರವನ್ನು ಬಳಸುತ್ತಿದ್ದರು. ಆದರೆ, ಅವರಿಗೆ ಅದರಿಂದ ಆಗುವ ಪರಿಣಾಮಗಳ ಬಗ್ಗೆ ಕಳಕಳಿ ಇತ್ತು. ತಮ್ಮ ಬೇಡಿಕೆಗಳಿಗಾಗಿ ಪ್ರತಿಭಟಿಸುವ ಹಕ್ಕು ನಾಗರಿಕರಿಗೆ ಇದೆ. ಆದರೆ, ಅದು ಯಾವಾಗಲೂ ಶಾಂತಿಯುತವಾಗಿ, ಗಾಂಧಿ ಮಾರ್ಗದಲ್ಲಿರಬೇಕು' ಎಂದು ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: ದೇಶದ 15ನೇ ರಾಷ್ಟ್ರಪತಿ ದ್ರೌಪದಿ ಮುರ್ಮು ಕುರಿತು ತಿಳಿಯಬೇಕಾದ ಪ್ರಮುಖ ವಿಚಾರಗಳು
'ಮೂಲಭೂತ ಅಗತ್ಯತೆಗಳು ಪೂರೈಕೆಯಾಗುತ್ತಿದ್ದಂತೆ, ಜನರ ಆಕಾಂಕ್ಷೆಗಳೂ ಬದಲಾಗುತ್ತಿವೆ. ದೇಶದ ಸಾಮಾನ್ಯ ವರ್ಗದ ಜನರ ಕನಸುಗಳಿಗೆ ಇದೀಗ ರೆಕ್ಕೆಗಳು ಬಂದಿವೆ. ಇದು ಯಾವುದೇ ತಾರತಮ್ಯವಿಲ್ಲದ ಉತ್ತಮ ಆಡಳಿತದಿಂದ ಸಾಧ್ಯವಾಗಿದೆ. ಈ ಸರ್ವತೋಮುಖ ಪ್ರಗತಿಯು ಬಾಬಾಸಾಹೇಬ್ ಅಂಬೇಡ್ಕರ್ ಅವರ ದೃಷ್ಟಿಕೋನಕ್ಕೆ ಅನುಗುಣವಾಗಿ ಆಗಿದೆ' ಎಂದೂ ಹೇಳಿದ್ದಾರೆ.
ಚುನಾಯಿತ ಪ್ರತಿನಿಧಿಗಳ ಬೆಂಬಲ ಇಲ್ಲದಿದ್ದರೆ, ತಾವು ದೇಶದ ಉನ್ನತ ಹುದ್ದೆಗೇರಲು ಸಾಧ್ಯವಾಗುತ್ತಿರಲಿಲ್ಲ ಎಂಬುದನ್ನು ಸ್ಮರಿಸಿರುವ ಕೋವಿಂದ್, ಸಂಸದರು ಮತ್ತು ವಿವಿಧ ಕ್ಷೇತ್ರಗಳ ನಿಯೋಗಗಳ ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ.
ತಮ್ಮ ಅಧಿಕಾರಾವಧಿಯಲ್ಲಿ ಎಲ್ಲ ರೀತಿಯ ಸಹಕಾರ ನೀಡಿದ್ದಕ್ಕಾಗಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಉಪ ರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವರಿಗೆ ಧನ್ಯವಾದ ಹೇಳಿದ್ದಾರೆ.
ಇದನ್ನೂ ಓದಿ: ಬುಡಕಟ್ಟು ಸಮುದಾಯದ ಗಟ್ಟಿ ಧ್ವನಿ ದ್ರೌಪದಿ ಮುರ್ಮು
Earlier today, attended the farewell programme hosted for President Kovind Ji in Parliament. It was attended by Ministers and leaders from various parties. pic.twitter.com/NhqlR0l2xc
— Narendra Modi (@narendramodi) July 23, 2022


ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.