ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಯಲ್ಲಿ ಶಾಂತಿ ನೆಲೆಸದೇ ಬಾಂಧವ್ಯ ವೃದ್ಧಿಯಾಗದು: ಚೀನಾಕ್ಕೆ ಭಾರತ ಸ್ಪಷ್ಟ ನುಡಿ

Last Updated 25 ಮಾರ್ಚ್ 2022, 19:45 IST
ಅಕ್ಷರ ಗಾತ್ರ

ನವದೆಹಲಿ: ಭಾರತ–ಚೀನಾದ ಗಡಿಯುದ್ದಕ್ಕೂ ಶಾಂತಿ, ಸೌಹಾರ್ದದ ಪರಿಸ್ಥಿತಿ ನೆಲೆಸದೇ ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಬಾಂಧವ್ಯ ಮತ್ತು ಮಾತುಕತೆ ಸಹಜ ಸ್ಥಿತಿಗೆ ಮರಳುವುದು ಸಾಧ್ಯವೇ ಇಲ್ಲ ಎಂದು ಭಾರತ ಪ್ರತಿಪಾದಿಸಿದೆ.

ಪೂರ್ವ ಲಡಾಖ್‌ ಒಳಗೊಂಡಂತೆ ಉಭಯ ದೇಶಗಳ ಗಡಿರೇಖೆಯುದ್ದಕ್ಕೂ ನಿಯೋಜಿಸಿದ್ದ, ಬಾಕಿ ಉಳಿದಿರುವ ಸೇನೆಯನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ಚೀನಾ ಆದಷ್ಟು ಶೀಘ್ರ ಪೂರ್ಣಗೊಳಿಸಬೇಕು ಎಂದೂ ತನ್ನ ನಿಲುವನ್ನು ಪುನರುಚ್ಚರಿಸಿದೆ.

ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ಅವರ ಜೊತೆಗೆ ಶುಕ್ರವಾರ ಇಲ್ಲಿ ನಡೆದ ಮೂರು ಗಂಟೆಗಳ ಸುದೀರ್ಘ ಮಾತುಕತೆಯ ಸಂದರ್ಭದಲ್ಲಿ ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಭಾರತದ ನಿಲುವನ್ನು ಸ್ಪಷ್ಟಪಡಿಸಿದರು.

ವಾಂಗ್‌ ಯಿ ಅವರ ಭೇಟಿ ಪೂರ್ವ ಯೋಜಿತವಾಗಿರಲಿಲ್ಲ. ಕಾಬೂಲ್‌ನಿಂದ ಗುರುವಾರ ಸಂಜೆ ನವದೆಹಲಿಗೆ ಆಗಮಿಸಿದ್ದರು. ಎರಡು ವರ್ಷದ ಹಿಂದೆ ನಡೆದಿದ್ದ ಸೇನಾ ತುಕಡಿಗಳ ಸಂಘರ್ಷದ ನಂತರ, ಚೀನಾದ ಉನ್ನತ ಪ್ರತಿನಿಧಿಯೊಬ್ಬರ ಪ್ರಥಮ ಭೇಟಿ ಇದಾಗಿತ್ತು.

ದ್ವಿಪಕ್ಷೀಯ ಮಾತುಕತೆ ಹಾಗೂ ಸೌಹಾರ್ದ ಸಂಬಂಧ ಬಲಪಡಿಸಲು ಉಭಯತ್ರರು ಬದ್ಧರಾಗಿದ್ದರೆ. ಸೇನಾ ತುಕಡಿ ಹಿಂಪಡೆಯುವ ಬಗ್ಗೆ ನಡೆದಿರುವ ಮಾತುಕತೆಗೆ ಪೂರ್ಣ ಬದ್ಧರಾಗಿರಬೇಕು ಎಂದು ಸಭೆಯ ನಂತರ ಜೈಶಂಕರ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಭಾರತ–ಚೀನಾ ಬಾಂಧವ್ಯ ಕುರಿತ ಪ್ರಸ್ತುತ ಈಗಿನ ಸ್ಥಿತಿಯನ್ನು ‘ಪ್ರಗತಿಯಲ್ಲಿದೆ’ ಎಂದು ಬಣ್ಣಿಸಿದ ಅವರು, 2020ರ ಏಪ್ರಿಲ್‌ನಲ್ಲಿ ಪೂರ್ವ ಲಡಾಖ್‌ ಗಡಿಯಲ್ಲಿ ಚೀನಾದ ಕ್ರಿಯೆಯಿಂದಾಗಿ ಉಭಯ ದೇಶಗಳ ನಡುವಿನ ಬಾಂಧವ್ಯವು ಹದಗೆಟ್ಟಿದೆ ಎಂದು ಹೇಳಿದರು.

ಉಭಯ ದೇಶಗಳ ನಡುವೆ ನಡೆದಿರುವ ಸೇನೆ ಮತ್ತು ರಾಜತಾಂತ್ರಿಕ ಹಂತದ ಸರಣಿ ಮಾತುಕತೆಯನ್ನು ಉಲ್ಲೇಖಿಸಿದ ಸಚಿವರು, ಮಾತುಕತೆ ನಂತರಗಡಿಯಿಂದ ಸೇನಾ ತುಕಡಿಗಳನ್ನು ಹಿಂಪಡೆಯುವುದರಲ್ಲಿ ಕೆಲ ಪ್ರಗತಿ ಕಾಣಿಸಿದೆ.ಸೇನೆ ಹಿಂಪಡೆಯುವುದು ಸೇರಿದಂತೆ ಒಟ್ಟು ಪ್ರಕ್ರಿಯೆಯನ್ನು ಚುರುಕುಗೊಳಿಸುವ ಕುರಿತೇ ವಾಂಗ್‌ ಯಿ ಜೊತೆಗೆ ಚರ್ಚೆ ನಡೆಯಿತು ಎಂದು ಹೇಳಿದರು.

ಉಭಯ ದೇಶಗಳ ನಡುವಿನ ಸಂಬಂಧ ಸೌಹಾರ್ದವಾಗಿದೆಯೇ ಎಂದುನೀವು ಪ್ರಶ್ನಿಸಿದರೆ, ನನ್ನ ಉತ್ತರ ‘ಇಲ್ಲ’ ಎಂಬುದೇ ಆಗಿದೆ. ಸೇನೆ ಮತ್ತು ರಾಜತಾಂತ್ರಿಕ ಹಂತದ ಚರ್ಚೆಗಳು ಸಕಾರಾತ್ಮಕ ಫಲಿತಾಂಶ ನೀಡಿವೆ. ಆದರೆ, ಸೌಹಾರ್ದ ವಾತಾವರಣ ಮೂಡಿಲ್ಲ.ಗಡಿಭಾಗದಲ್ಲಿ ಅಸಹಜವಾದ ಸ್ಥಿತಿ ಇದ್ದಾಗ, ಒಟ್ಟು ಸಂಬಂಧ ಸಹಜವಾಗಿರಲು ಸಾಧ್ಯವೇ ಇಲ್ಲ ಎಂದೂ ಪ್ರಶ್ನಿಸಿದರು.

ಭಾರತದ ಜೊತೆಗಿನ ಸಂಬಂಧವನ್ನು ಸಹಜ ಸ್ಥಿತಿಗೆ ತರುವ ಕುರಿತಂತೆ ವಾಂಗ್ ಯಿ ಮಾತನಾಡಿದರು. ಭಾರತ ಕೂಡ ಮತ್ತು ಸ್ಥಿರ ಮತ್ತು ಆಶಾದಾಯಕ ಸಂಬಂಧ ಬಯಸುತ್ತದೆ ಎಂದು ನಾನು ಪ್ರತಿಕ್ರಿಯಿಸಿದ್ದೇನೆ ಎಂದರು.

ಶೃಂಗಸಭೆಗೆ ಪ್ರಧಾನಿ
ನವದೆಹಲಿ (ಪಿಟಿಐ):
ಚೀನಾದ ಆತಿಥ್ಯದಲ್ಲಿ ನಡೆಯಲಿರುವ ಬ್ರಿಕ್ಸ್‌ ಸದಸ್ಯ ರಾಷ್ಟ್ರಗಳ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವಿಕೆಯನ್ನು ಭಾರತ ಇನ್ನು ದೃಢಪಡಿಸಿಲ್ಲ. ಭಾರತ ಮತ್ತು ಚೀನಾ ಹೊರತುಪಡಿಸಿ ಬ್ರೆಜಿಲ್, ರಷ್ಯಾ, ದಕ್ಷಿಣ ಆಫ್ರಿಕಾ ‘ಬ್ರಿಕ್ಸ್’ ಸಮೂಹದ ಸದಸ್ಯ ರಾಷ್ಟ್ರಗಳಾಗಿವೆ.ವಾಂಗ್‌ ಯಿ ಭೇಟಿ ವೇಳೆ ಸಚಿವ ಜೈಶಂಕರ್‌ ಅವರು ಪ್ರಧಾನಿ ಭೇಟಿ ಕುರಿತು ಏನೂ ಹೇಳಿಲ್ಲ. ಆಫ್ಗಾನಿಸ್ತಾನ ಕುರಿತ ವಿದೇಶಾಂಗ ಸಚಿವರ ಸಭೆಗೆ ಭಾರತಕ್ಕೆ ಆಹ್ವಾನ ನೀಡಿರಲಿಲ್ಲ ಎಂದರು.

ದ್ವಿಪಕ್ಷೀಯ ಬಾಂಧವ್ಯ: ವಾಂಗ್ ಯಿ ಮೂರು ಅಂಶಗಳ ಸೂತ್ರ
ಬೀಜಿಂಗ್‌ (ಪಿಟಿಐ):
ಭಾರತ–ಚೀನಾ ದ್ವಿಪಕ್ಷೀಯ ಒಪ್ಪಂದದಲ್ಲಿ ಅಭಿವೃದ್ಧಿ ಕುರಿತಂತೆ ‘ಸ್ಪಷ್ಟ ಗುರಿಯತ್ತ’ ಸಾಗಲು ಉಭಯ ದೇಶಗಳು ಗಮನ ಕೇಂದ್ರೀಕರಿಸಬೇಕು ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ಶುಕ್ರವಾರ ಪ್ರತಿಪಾದಿಸಿದರು.

ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಮತ್ತು ರಾಷ್ಟ್ರೀಯ ಭದ್ರತಾ ಸಲಹಗಾರ ಅಜಿತ್ ಡೋವಲ್ ಜೊತೆಗೆ ಚರ್ಚೆ ನಡೆಸಿದ್ದ ಅವರು, ದ್ವಿಪಕ್ಷೀಯ ಬಾಂಧವ್ಯ ವೃದ್ಧಿಗೆ ಮೂರು ಅಂಶಗಳ ಸೂತ್ರ ಪ್ರಸ್ತಾಪಿಸಿದ್ದಾಗಿ ಹೇಳಿದರು.

‘ಮೊದಲಿಗೆ ಉಭಯ ರಾಷ್ಟ್ರಗಳು ದೀರ್ಘಾವಧಿಯ ದೃಷ್ಟಿಕೋನ ಹೊಂದಿರಬೇಕು. ಎರಡನೆಯದಾಗಿ, ಪರಸ್ಪರರ ಅಭಿವೃದ್ಧಿಯನ್ನು ಗುರುತಿಸಿ, ಇಬ್ಬರೂ ಗೆಲ್ಲುವ ಮನಸ್ಥಿತಿ ಹೊಂದಿರಬೇಕು. ಮೂರನೆಯದಾಗಿ ಸಹಕಾರ ಧೋರಣೆಯೊಂದಿಗೆ ಉಭಯ ದೇಶಗಳು ಬಹುಹಂತದ ಪ್ರಕ್ರಿಯೆಯಲ್ಲಿ ಭಾಗಿಯಾಗಬೇಕು ಎಂದು ಹೇಳಿದರು’ ಎಂದರು ಸರ್ಕಾರದ ಸುದ್ದಿ ಸಂಸ್ಥೆ ಕ್ಸಿನ್‌ಹುಅ ವರದಿ ಮಾಡಿದೆ.

ಉಭಯದ ದೇಶಗಳ ಬಾಂಧವ್ಯದಲ್ಲಿ ಗಡಿ ಕುರಿತ ತಮ್ಮ ಭಿನ್ನಾಭಿಪ್ರಾಯಗಳನ್ನು ಉಭಯ ದೇಶಗಳು ಪ್ರತ್ಯೇಕವಾಗಿ ನೋಡಬೇಕು. ಭಾರತ–ಚೀನಾ ಒಪ್ಪಂದಗಳ ವಿಷಯದಲ್ಲಿ ಗುರಿ ಸಾಧನೆಗೆ ಬದ್ಧರಾಗಿರಬೇಕು ಎಂದರು.

ಚೀನಾದ ಸರ್ಕಾರದಲ್ಲಿ ಉನ್ನತ, ಪ್ರಭಾವಿ ಸ್ಥಾನವನ್ನು ವಾಂಗ್‌ ಯಿ ಹೊಂದಿದ್ದಾರೆ. ಅಲ್ಲದೆ, ಅವರು ಭಾರತ –ಚೀನಾ ಗಡಿ ಮಾತುಕತೆಯಲ್ಲಿ ಚೀನಾದ ವಿಶೇಷ ಪ್ರತಿನಿಧಿಯೂ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT