ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದಲ್ಲಿ ಪಿಎಫ್‌ಐ ಹಿಂಸಾಚಾರ ಪೂರ್ವಯೋಜಿತ: ಪಿಣರಾಯಿ

Last Updated 24 ಸೆಪ್ಟೆಂಬರ್ 2022, 15:26 IST
ಅಕ್ಷರ ಗಾತ್ರ

ತಿರುವನಂತಪುರ: ಕೇರಳದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸೆಪ್ಟೆಂಬರ್ 23ರಂದು ಕರೆ ನೀಡಿದ್ದ ಹರತಾಳದಲ್ಲಿ ವ್ಯಾಪಕ ಹಿಂಸಾಚಾರ ನಡೆದಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಹಿಂಸಾಚಾರ ಪೂರ್ವಯೋಜಿತ ಕೃತ್ಯವಾಗಿದ್ದು, ಅಪರಾಧಿಗಳನ್ನು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳ ಸಂಘದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಪಿಎಫ್‌ಐ ಹಿಂಸಾಚಾರವನ್ನು ಖಂಡಿಸಿದ್ದರಲ್ಲದೆ ಸಾರ್ವಜನಿಕ ಆಸ್ತಿ-ಪಾಸ್ತಿಗೆ ವ್ಯಾಪಕ ಹಾನಿಯುಂಟಾಗಿದೆ ಎಂದು ಹೇಳಿದರು.

ಪೂರ್ವಯೋಜಿತ ಹಿಂಸಾಚಾರದಿಂದಾಗಿ ರಾಜ್ಯಕ್ಕೆ ಭಾರಿ ನಷ್ಟ ಉಂಟಾಗಿದೆ. ಆದರೆ ಹಿಂಸಾಚಾರವನ್ನು ತಡೆಗಟ್ಟಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಹಿಂಸಾಚಾರದಲ್ಲಿ ತೊಡಗಿದವರನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ಈಗಾಗಲೇ ಹಲವರನ್ನು ಬಂಧಿಸಲಾಗಿದೆ. ತಪ್ಪು ಮಾಡಿದವರನ್ನು ಸುಮ್ಮನೇ ಬಿಡುವುದಿಲ್ಲ ಎಂದು ಹೇಳಿದರು.

ಹಿಂಸಾಚಾರಕ್ಕೆ ಸಂಬಂಧಿಸಿದಂತೆ 281 ಪ್ರಕರಣ ದಾಖಲಾಗಿದ್ದು, 1,013 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಇಲ್ಲಿ ಕೋಮುವಾದಿಗಳು ಭಯೋತ್ಪಾದಕ ವರ್ತನೆ ತೋರುತ್ತಿದ್ದಾರೆ. ಕೋಮುವಾದಿ-ಭಯೋತ್ಪಾದಕ ಅಂಶಗಳು ಎಂದಿಗೂ ನಮ್ಮ ರಾಷ್ಟ್ರವನ್ನು ಒಂದುಗೂಡಿಸಲು ಸಾಧ್ಯವಿಲ್ಲ. ಅವರಿಗೇ ಅವರದ್ದೇ ಆದ ಅಜೆಂಡಾ ಇದೆ. ಇಂತಹ ಪ್ರಚಾರವನ್ನು ಜಾತ್ಯತೀತ ಮನಸ್ಸುಗಳು ಹುರಿದುಂಬಿಸಬಾರದು ಎಂದು ಮುಖ್ಯಮಂತ್ರಿ ಪಿಣರಾಯಿ ಹೇಳಿದರು.

ಸೆಪ್ಟೆಂಬರ್ 22ರಂದು ಕಾನೂನುಬಾಹಿರ ಚಟುವಟಿಕೆ ಹಾಗೂ ಭಯೋತ್ಪಾದನಾ ಕೃತ್ಯಕ್ಕೆ ಸಂಚು ರೂಪಿಸುತ್ತಿದ್ದ ಆರೋಪದಡಿ ದೇಶದ 11 ರಾಜ್ಯಗಳಲ್ಲಿ ದಾಳಿ ನಡೆಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಪಿಎಫ್‌ಐ ಸಂಘಟನೆಯ 106 ಮಂದಿಯನ್ನು ಬಂಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT