ಫಿಲಿಪ್ಪಿನ್ಸ್ ವಿಮಾನ ಅಪಘಾತ: ಸಾವಿಗೀಡಾದವರ ಸಂಖ್ಯೆ 50ಕ್ಕೆ ಏರಿಕೆ

ಮನಿಲಾ (ಎಪಿ): ಫಿಲಿಪ್ಪಿನ್ಸ್‌ನಲ್ಲಿ ಭಾನುವಾರ ಪತನವಾದ ಸೇನಾ ವಿಮಾನದ ಅಪಘಾತದಲ್ಲಿ ಸಾವಿಗೀಡಾದವರ ಸಂಖ್ಯೆ 50ಕ್ಕೆ ಏರಿದೆ.
ಸುಲು ಪ್ರಾಂತ್ಯದ ಜುಲು ವಿಮಾನ ನಿಲ್ದಾಣದಲ್ಲಿ ರನ್‌ವೇಯಲ್ಲಿ ಇಳಿಯಲು ಸಾಧ್ಯವಾಗದೆ ಈ ವಿಮಾನವು ಅಪಘಾತಕ್ಕೀಡಾಗಿತ್ತು.
‘ಲಾಕ್‌ಹೀದ್ ಸಿ–130 ಹೆರ್ಕ್ಯೂಲೆಸ್’ ಸೇನಾ ವಿಮಾನದಲ್ಲಿ 96 ಯೋಧರು ಪ್ರಯಾಣಿಸುತ್ತಿದ್ದರು. 49 ಯೋಧರನ್ನು ಪೊಲೀಸರು, ಅಗ್ನಿಶಾಮಕದ ದಳ ಹಾಗೂ ಸೇನಾ ಪಡೆ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ರಕ್ಷಿಸಲಾಗಿದೆ.
ವಿಮಾನದಲ್ಲಿದ್ದ ಬಹುತೇಕ ಯೋಧರು ಹೊಸದಾಗಿ ನೇಮಕಗೊಂಡು ತರಬೇತಿ ಪಡೆದಿದ್ದರು. ಈ ಯೋಧರನ್ನು ಅಬು ಸಯ್ಯಫ್ ಉಗ್ರರ ವಿರುದ್ಧ ಹೋರಾಟಕ್ಕೆ ನಿಯೋಜಿಸಲು ಉದ್ದೇಶಿಸಲಾಗಿತ್ತು.
ವಿಮಾನ ನಿಲ್ದಾಣದಲ್ಲಿದ್ದ ಏಳು ಮಂದಿಗೂ ವಿಮಾನ ಡಿಕ್ಕಿಯಾಗಿತ್ತು. ಇವರಲ್ಲಿ ಮೂವರು ಸಾವಿಗೀಡಾಗಿದ್ದಾರೆ.
ನೆರವು ನೀಡುವ ಒಪ್ಪಂದದ ಅನ್ವಯ ಅಮೆರಿಕ ವಾಯು ಪಡೆಯ ಈ ಯುದ್ಧ ವಿಮಾನವನ್ನು ಫಿಲಿಪ್ಪಿನ್ಸ್‌ಗೆ ಇದೇ ವರ್ಷ ಹಸ್ತಾಂತರಿಸಲಾಗಿತ್ತು. ವಿಮಾನ ಅಪಘಾತಕ್ಕೆ ಖಚಿತ ಕಾರಣಗಳು ತಿಳಿದು ಬಂದಿಲ್ಲ.
‘ರನ್‌ವೇಯಿಂದ ಹೊರಹೋದ ವಿಮಾನವು ಮತ್ತೆ ಅದೇ ಮಾರ್ಗಕ್ಕೆ ಮರಳಲು ಯತ್ನಿಸಿದೆ. ಆದರೆ, ಈ ಪ್ರಯತ್ನವು ವಿಫಲವಾಗಿ ಅಪಘಾತಕ್ಕೀಡಾಗಿದೆ’ ಎಂದು ಸೇನಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಸಿರಿಲಿಟೊ ಸೊಬೆಜನಾ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.