ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಶಾಸಕರ ಆಪರೇಷನ್‌ಗೆ ಕೈ ಹಾಕಿದ ಆರೋಪ: ಲಾಲು ಈಗ ಬಂಗಲೆಯಿಂದ ವಾರ್ಡ್‌ಗೆ

Last Updated 26 ನವೆಂಬರ್ 2020, 14:42 IST
ಅಕ್ಷರ ಗಾತ್ರ

ರಾಂಚಿ: ವಿಧಾನಸಭಾ ಸ್ಪೀಕರ್ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯನ್ನು ಸೋಲಿಸಲು ಸಹಾಯ ಕೋರಿ ಬಿಹಾರದ ಬಿಜೆಪಿ ಶಾಸಕರೊಬ್ಬರಿಗೆ ದೂರವಾಣಿ ಕರೆ ಮಾಡಿದ ಹಿನ್ನೆಲೆಯಲ್ಲಿ ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್‌ ಅವರನ್ನು ರಾಂಚಿ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆ (ರಿಮ್ಸ್) ಆಸ್ಪತ್ರೆಯ ನಿರ್ದೇಶಕರ ಬಂಗಲೆಯಿಂದ, ವಾರ್ಡ್‌ಗೆ ಗುರುವಾರ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೇವು ಹಗರಣ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಅವರು, ಹಲವು ಕಾಯಿಲೆಗಳ ಹಿನ್ನೆಲೆಯಲ್ಲಿ ರಾಂಚಿಯ ರಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

'ಲಾಲು ಪ್ರಸಾದ್ ಯಾದವ್ ಅವರನ್ನು ನಿರ್ದೇಶಕರ ಬಂಗಲೆಯಿಂದ ಇಂದು ಎ -11 ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ' ಎಂದು ರಿಮ್ಸ್ ಹೆಚ್ಚುವರಿ ನಿರ್ದೇಶಕ ಮತ್ತು ಜಾರ್ಖಂಡ್‌ನ ಜಂಟಿ ಆರೋಗ್ಯ ಕಾರ್ಯದರ್ಶಿ ಡಾ. ವಾಘ್ಮಾರೆ ಕೃಷ್ಣ ಪ್ರಸಾದ್ ಪಿಟಿಐಗೆ ತಿಳಿಸಿದ್ದಾರೆ.

ಕೊರೊನಾ ವೈರಸ್‌ ಸೋಂಕು ತಗುಲುವ ಅಪಾಯದ ಹಿನ್ನೆಲೆಯಲ್ಲಿ ಲಾಲು ಪ್ರಸಾದ್ ಯಾದವ್‌ ಅವರನ್ನು ರಿಮ್ಸ್‌ನ ವಾರ್ಡ್‌ನಿಂದ ಅದರ ನಿರ್ದೇಶಕರ ನಿವಾಸಕ್ಕೆ ವರ್ಗಾಯಿಸಲಾಗಿತ್ತು.

ಮಂಗಳವಾರ ನಡೆದ ಬಿಹಾರ ವಿಧಾನಸಭೆ ಸ್ಪೀಕರ್ ಚುನಾವಣೆಯ ಸಂದರ್ಭದಲ್ಲಿ ಮತದಾನದಿಂದ ದೂರವಿರುವಂತೆ ಬಿಹಾರದ ಬಿಜೆಪಿ ಶಾಸಕ ಲಲನ್ ಕುಮಾರ್ ಪಾಸ್ವಾನ್ ಅವರಿಗೆ ದೂರವಾಣಿ ಕರೆ ಮಾಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಲಾಲು ಪ್ರಸಾದ್ ವಿರುದ್ಧ ತನಿಖೆಗೆ ಜಾರ್ಖಂಡ್ ಸರ್ಕಾರ ಬುಧವಾರ ಆದೇಶಿಸಿದೆ.

ಯುಪಿಎ-1ರ ಸರ್ಕಾರದಲ್ಲಿ ರೈಲ್ವೆ ಸಚಿವರಾಗಿಯೂ ಸೇವೆ ಸಲ್ಲಿಸಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ ಅವರು, ಅವಿಭಜಿತ ಬಿಹಾರದಲ್ಲಿ 1990ರ ದಶಕದಲ್ಲಿ ನಡೆದಿದ್ದ ಮೇವು ಹಗರಣಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಅಪರಾಧಿ ಎಂದು ಸಾಬೀತಾಗಿದ್ದು, 2017 ರ ಡಿಸೆಂಬರ್‌ನಿಂದ ಜೈಲಿನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT