ಶನಿವಾರ, ಸೆಪ್ಟೆಂಬರ್ 18, 2021
21 °C

ಕೋವಿಡ್‌ ಪೀಡಿತ ಶವಗಳಿಗೆ ಗೌರವಯುತ ಅಂತ್ಯಕ್ರಿಯೆ: ‘ಸುಪ್ರೀಂ’ಗೆ ಪಿಐಎಲ್‌ ಸಲ್ಲಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ಕೋವಿಡ್‌ನಿಂದ ಮೃತಪಟ್ಟವರ ಶವಗಳಿಗೆ ಗೌರವಯುತವಾಗಿ ಅಂತ್ಯಕ್ರಿಯೆ ನಡೆಸುವುದರ ಮೇಲ್ವಿಚಾರಣೆಗೆ ಮೂರು ಹಂತದಲ್ಲಿ ಸಮಿತಿಯನ್ನು ರಚಿಸಲು ಕೇಂದ್ರ, ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗಿದೆ.

ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ಗಂಗಾ ನದಿಯಲ್ಲಿ ಕೋವಿಡ್ ಪೀಡಿತರ ಶವಗಳು ತೇಲಿ ಬರುತ್ತಿರುವುದಕ್ಕೆ ಸಂಬಂಧಿಸಿದ ವರದಿಗಳ ಹಿನ್ನೆಲೆಯಲ್ಲಿ ಈ ಅರ್ಜಿಯನ್ನು ಸಲ್ಲಿಸಲಾಗಿದೆ.

ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಪಂಚಾಯತ್‌ ಸೇರಿದಂತೆ ಸ್ಥಳೀಯ ಆಡಳಿತಗಳ ಹಂತದಲ್ಲಿ ಸಮಿತಿಗಳು ರಚನೆ ಆಗಬೇಕು ಎಂದು ಅರ್ಜಿದಾರ ವಿನೀತ್ ಜಿಂದಾಲ್ ಕೋರಿದ್ದಾರೆ. ಶವಗಳನ್ನು ನದಿಗೆ ಎಸೆಯುವುದರಿಂದ ನದಿಪಾತ್ರದ ಗ್ರಾಮಗಳು, ನಗರಗಳಲ್ಲಿ ಕುಡಿಯುವ ನೀರು ಪೂರೈಕೆ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮವಾಗಲಿದೆ ಎಂದಿದ್ದಾರೆ.

‘ನದಿತಟದಲ್ಲಿ ಕೋವಿಡ್ ಪೀಡಿತರ ಶವಗಳನ್ನು ಹೂಳಲಾಗಿದೆ. ಗಾಳಿಗೆ ಮರಳು ಚದುರಿದ್ದು, ಕೊಳೆತ ಸ್ಥಿತಿಯಲ್ಲಿರುವ ಶವಗಳು ಭೂಮಿ ಮೇಲ್ಮಟ್ಟದಲ್ಲೇ ಕಾಣಿಸುತ್ತಿವೆ’ ಎಂದು ವಕೀಲ ರಾಜ್‌ಕಿಶೋರ್‌ ಚೌಧುರಿ ಮೂಲಕ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ, ರಾಷ್ಟ್ರೀಯ ಕ್ಲೀನ್‌ ಗಂಗಾ ಮಿಷನ್‌, ಉತ್ತರ ಪ್ರದೇಶ, ಬಿಹಾರ ರಾಜ್ಯ ಸರ್ಕಾರಗಳು ಹಾಗೂ ಈ ರಾಜ್ಯಗಳ ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ಪ್ರತಿವಾದಿಗಳಾಗಿ ಹೆಸರಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು