ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಟ್‌ ದೊರೆ ಹೆಸರಲ್ಲಿ ವಿಶ್ವವಿದ್ಯಾಲಯ

ಉ.ಪ್ರ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಕ್ರಮ: ಪ್ರತಿಭಟನೆನಿರತ ರೈತರ ಮನವೊಲಿಕೆ ಯತ್ನ
Last Updated 14 ಸೆಪ್ಟೆಂಬರ್ 2021, 19:59 IST
ಅಕ್ಷರ ಗಾತ್ರ

ಲಖನೌ: ಜಾಟ್ ಸಮುದಾಯದ ದೊರೆ ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ಅವರ ಗುಣಗಾನ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ರಾಜಕೀಯವಾಗಿ ಪ್ರಭಾವಶಾಲಿ ಎನಿಸಿರುವ ಸಮುದಾಯದ ಕೋಪ ನಿವಾರಿಸುವ ಯತ್ನ ಮಾಡಿದ್ದಾರೆ.

ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ವಿಶ್ವವಿದ್ಯಾಲಯಕ್ಕೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ,ಉತ್ತರ ಪ್ರದೇಶದ ಅಲಿಗಡ ಪಟ್ಟಣದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಸ್ವಾತಂತ್ರ್ಯ ಸಂಗ್ರಾಮಕ್ಕೆ ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ಅವರ ಕೊಡುಗೆ ಸ್ಮರಿಸಿದ ಪ್ರಧಾನಿ, ಅವರ ಆದರ್ಶಗಳನ್ನು ಯುವಕರು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಹೇಂದ್ರ ಪ್ರತಾಪ್ ಸಿಂಗ್ ಅವರು ರಾಜ್ಯದ ಪಶ್ಚಿಮ ಭಾಗದ ಜಾಟ್ ಸಮುದಾಯದ ಅತ್ಯಂತ ಗೌರವಾನ್ವಿತ ನಾಯಕ. ಅವರ ಹೆಸರಿನಲ್ಲಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವ ನಿರ್ಧಾರವನ್ನು ಸಮುದಾಯದಲ್ಲಿನ ಕೋಪವನ್ನು ತಗ್ಗಿಸುವ ಪ್ರಯತ್ನವೆಂದು ಪರಿಗಣಿಸಲಾಗಿದೆ.

‘ಸ್ವಾತಂತ್ರ್ಯ ಹೋರಾಟದಲ್ಲಿ ಸಾಕಷ್ಟು ಕೊಡುಗೆ ನೀಡಿದ ಅನೇಕರು ಇದ್ದಾರೆ. ಆದರೆ ಅವರ ಬಗೆಗಿನ ಮಾಹಿತಿ ಅಸ್ಪಷ್ಟವಾಗಿದೆ. ಹಿಂದೆ ಮಾಡಿದ ತಪ್ಪುಗಳಿಂದಾಗಿ ಅನೇಕ ತಲೆಮಾರುಗಳಿಗೆ ಅವರ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ. 20ನೇ ಶತಮಾನದ ತಪ್ಪುಗಳನ್ನು 21ನೇ ಶತಮಾನದಲ್ಲಿಸರಿಪಡಿಸಲಾಗುತ್ತಿದೆ’ ಎಂದು ಮೋದಿ ಹೇಳಿದರು.

ಪ್ರಧಾನಿ ಅವರು ಜಾಟರ ದೊರೆ
ಯನ್ನು ಶ್ಲಾಘಿಸಿದ್ದು ಹಾಗೂ ಅವರ ಕೊಡುಗೆಯನ್ನು ಸ್ಮರಿಸಿದ್ದನ್ನು ಗಮನಿಸಿದರೆ, ಜಾಟ್ ಸಮುದಾಯ
ದವರೇ ಮುಂಚೂಣಿಯಲ್ಲಿರುವ ರೈತರ ಪ್ರತಿಭಟನೆಯ ಬಗ್ಗೆ ಬಿಜೆಪಿಗೆ ಭೀತಿ ಇದ್ದಂತೆ ತೋರುತ್ತದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಭಾರತೀಯ ಕಿಸಾನ್ ಯೂನಿಯನ್‌ನ ಪದಾಧಿಕಾರಿಗಳು ಹಾಗೂ ಪ್ರಮುಖ ರೈತ ನಾಯಕರು ಜಾಟ್ ಸಮುದಾಯದವರೇ ಆಗಿದ್ದಾರೆ. ಮುಂಬರುವ ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರಚಾರ ನಡೆಸುವುದಾಗಿ ಈಗಾಗಲೇ ರೈತ ಸಂಘಟನೆಗಳು ಎಚ್ಚರಿಸಿವೆ.

ಮಹೇಂದ್ರ ಸಿಂಗ್ ದಾನ ಮಾಡಿದ ಭೂಮಿಯಲ್ಲಿ ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯ (ಎಎಂಯು) ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ. ವಿಶ್ವವಿದ್ಯಾಲಯಕ್ಕೆ ಮರುನಾಮಕರಣ ಮಾಡಬೇಕು ಎಂದಿ ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ನಾಯಕರು ಒತ್ತಾಯಿಸುತ್ತಿದ್ದಾರೆ.

ಅಲಿಗಡ ಜಿಲ್ಲೆಯ ಲೋಧಾ ಗ್ರಾಮ ಮತ್ತು ಮುಸೇಪುರ್ ಕರೀಮ್ ಜರೌಲಿ ಗ್ರಾಮಗಳ ವ್ಯಾಪ್ತಿಯ 92 ಎಕರೆ ಪ್ರದೇಶದಲ್ಲಿ ವಿಶ್ವವಿದ್ಯಾಲಯ ತಲೆ ಎತ್ತಲಿದೆ. ಮಹೇಂದ್ರ ಸಿಂಗ್ ಸ್ಮರಣೆ ಹಾಗೂ ಗೌರವಾರ್ಥ ರಾಜ್ಯ ಸರ್ಕಾರವು ಇದನ್ನು ನಿರ್ಮಿಸುತ್ತಿದೆ.

ಉತ್ತರ ಪ್ರದೇಶ ರಕ್ಷಣಾ ಕೈಗಾರಿಕಾ ಕಾರಿಡಾರ್ ಅನ್ನು ಪ್ರಧಾನಿ ಇದೇ ವೇಳೆ ವೀಕ್ಷಿಸಿದರು. ರಕ್ಷಣಾ ಸಲಕರಣೆಗಳ ಆಮದುದಾರ ಆಗಿದ್ದ ಭಾರತ ಈಗ ಪ್ರಮುಖ ರಫ್ತುದಾರ ದೇಶವಾಗಿದೆ ಎಂದು ಹೇಳಿದರು.

ಗೂಂಡಾರಾಜ್ಯ ಈಗಿಲ್ಲ: ಯೋಗಿಗೆ ಪ್ರಧಾನಿ ಶ್ಲಾಘನೆ

ರಾಜ್ಯದಲ್ಲಿ ಮಾಫಿಯಾ ಗುಂಪುಗಳನ್ನು ಮಟ್ಟಹಾಕಿ, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ಯಶಸ್ವಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದರು.

‘2017ಕ್ಕೂ ಮುನ್ನ ಉತ್ತರ ಪ್ರದೇಶವನ್ನು ಗ್ಯಾಂಗ್‌ಸ್ಟರ್‌ಗಳು, ಮಾಫಿಯಾ ದೊರೆಗಳು ಆಳುತ್ತಿದ್ದರು. ಅಂತಹವರೆಲ್ಲ ಯೋಗಿ ಸರ್ಕಾರದಲ್ಲಿ ಕಂಬಿ ಹಿಂದಿದ್ದಾರೆ’ ಎಂದು ಪ್ರಧಾನಿ ಹೇಳಿದರು.
***
‘ಈ ಮೊದಲು ಹೆಣ್ಣುಮಕ್ಕಳು ಮನೆಯಿಂದ ಹೊರಹೋಗಲು ಭಯಪಡುತ್ತಿದ್ದರು. ಹಲವರು ವಾಸಸ್ಥಾನವನ್ನು ಬದಲಿಸಿದರು. ಆದರೆ ರಾಜ್ಯದ ಪರಿಸ್ಥಿತಿ ಈಗ ಬದಲಾಗಿದೆ’ ಎಂದರು.
ಉತ್ತರ ಪ್ರದೇಶದ ಅಪರಾಧಗಳ ಬಗ್ಗೆ ಸಚಿವಾಲಯದ ದತ್ತಾಂಶಗಳನ್ನು ಪರಿಶೀಲಿಸಿ ಪ್ರಧಾನಿ ಮಾತನಾಡಲಿ/
– ಅಖಿಲೇಶ್ ಯಾದವ್, ಎಸ್‌ಪಿ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT