ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ನಿರ್ವಹಣೆ ಕುರಿತ ಟೀಕೆಗೆ ತಕ್ಕ ಉತ್ತರ ನೀಡಿ: ಸಂಸದರಿಗೆ ಮೋದಿ

ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ಮೋದಿ
Last Updated 20 ಜುಲೈ 2021, 17:06 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌–19 ಸಾಂಕ್ರಾಮಿಕ ಸ್ಥಿತಿಯನ್ನು ಸರ್ಕಾರವು ನಿಭಾಯಿಸುತ್ತಿರುವ ಬಗ್ಗೆ ವಿರೋಧ ಪಕ್ಷಗಳು ಸದನದ ಒಳಗೆ ಹಾಗೂ ಹೊರಗೆ ಮಾಡುತ್ತಿರುವ ಟೀಕೆಗಳಿಗೆ ತಕ್ಕ ಉತ್ತರ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಸಂಸದರಿಗೆ ಮಂಗಳವಾರ ಸೂಚಿಸಿದರು.

ಬಿಜೆಪಿ ಸಂಸದೀಯ ಸಭೆಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷಗಳು, ರಾಜಕೀಯ ಲಾಭಕ್ಕಾಗಿ ಕೋವಿಡ್‌–19 ವಿಷಯವನ್ನು ಬಳಸಿಕೊಳ್ಳುತ್ತಿರುವುದಾಗಿ ಹರಿಹಾಯ್ದರು.

ಸಂಭಾವ್ಯ ಕೋವಿಡ್‌–19ನ ಮೂರನೇ ಅಲೆಯಿಂದ ಜನರನ್ನು ರಕ್ಷಿಸಲು, ಸಂಸದರು ಅಗತ್ಯ ಪೂರ್ವತಯಾರಿ ಮಾಡಿಕೊಳ್ಳಬೇಕು. ತಮ್ಮ ತಮ್ಮ ಕ್ಷೇತ್ರದಲ್ಲಿ ಲಸಿಕೆ ಅಭಿಯಾನ ಸಮರ್ಪಕವಾಗಿ ನಡೆಯುವಂತೆ ನೋಡಿಕೊಳ್ಳಬೇಕು. ಲಸಿಕೆ ಪ್ರಯೋಜನಗಳ ಬಗ್ಗೆ ಜನರಿಗೆ ಮಾಹಿತಿ ನೀಡಿ, ಲಸಿಕೆ ಪಡೆಯುವ ಬಗ್ಗೆ ಅವರಲ್ಲಿರುವ ಹಿಂಜರಿಕೆಯನ್ನು ತೊಡೆದು ಹಾಕಬೇಕು ಎಂದು ಹೇಳಿದರು. ಲಸಿಕೆ ನೀಡುವಲ್ಲಿ ಆಗುವ ಪೋಲು ತಪ್ಪಿಸುವಂತೆಯೂ ಸಲಹೆ ನೀಡಿದರು.

ಸಂಸತ್ತಿನಲ್ಲಿ ಹಾಜರಿರುವುದರ ಜೊತೆಗೆ ಸದನದ ಕಲಾಪದಲ್ಲಿ ಭಾಗವಹಿಸಬೇಕು ಎಂದು ಸೂಚಿಸಿದ ಪ್ರಧಾನಿ, ಕಲಾಪವನ್ನು ಹಾಳುಗೆಡಹುವ ವಿರೋಧ ಪಕ್ಷಗಳ ಪ್ರಯತ್ನವನ್ನು ತಡೆಯಬೇಕು ಎಂದರು.

ಸರ್ಕಾರವು ಕೋವಿಡ್‌–19 ನಿರ್ವಹಣೆಯ ಬಗೆಗೆ ಚರ್ಚಿಸಲು ಸಿದ್ಧವಿದೆ ಎಂದ ಮೋದಿ, ಸದನದ ಕಲಾಪಗಳಿಗೆ ಅಡ್ಡಿ ಮಾಡುವ ಮೂಲಕ ವಿರೋಧ ಪಕ್ಷಗಳು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿರುವುದಾಗಿ ಆರೋಪಿಸಿದರು.

ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲೂ ಬಹಳಷ್ಟು ಜನರಿಗೆ ಪಡಿತರ ಒದಗಿಸಲಾಗಿದೆ. ಜನರಿಗೆ ಪರಿಹಾರ ಒದಗಿಸುವುದು ಸರ್ಕಾರದ ಜವಾಬ್ದಾರಿ ಆಗುತ್ತದೆಯೇ ಹೊರತು ಓಲೈಕೆ ಅಲ್ಲ ಎಂದರು.

ಸಭೆಯ ಕುರಿತು ಮಾಹಿತಿ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ, ‘ಕೋವಿಡ್‌ ಸಂದರ್ಭವನ್ನು ಮಾನವೀಯತೆಯಿಂದ ನೋಡಬೇಕೇ ಹೊರತು ರಾಜಕೀಯ ವಿಷಯವಾಗಿ ಅಲ್ಲ. ಈ ಬಗ್ಗೆ ವಿರೋಧ ಪಕ್ಷಗಳ ಅದರಲ್ಲಿಯೂ ಕಾಂಗ್ರೆಸ್‌ ಪಕ್ಷದ ವರ್ತನೆ ಬಗ್ಗೆ ಪ್ರಧಾನಿ ಅಸಮಾಧಾನ ವ್ಯಕ್ತಪಡಿಸಿದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT