ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಆಡಳಿತ ಯಂತ್ರ ಸಜ್ಜಾಗಿರಿಸಿ -ಪ್ರಧಾನಿ ನರೇಂದ್ರ ಮೋದಿ

Last Updated 22 ಡಿಸೆಂಬರ್ 2022, 22:00 IST
ಅಕ್ಷರ ಗಾತ್ರ

ನವದೆಹಲಿ:ಕೋವಿಡ್‌ ವಿರುದ್ಧ ಹೋರಾಡಲು ಎಲ್ಲಾ ಹಂತಗಳಲ್ಲೂ ಆಡಳಿತ ಯಂತ್ರ ಸಜ್ಜಾಗಿರಿಸುವ ಜೊತೆಗೆ ಕೋವಿಡ್‌ ಪರೀಕ್ಷೆ ಹಾಗೂ ವೈರಾಣು ಸಂರಚನಾ ವಿಶ್ಲೇಷಣೆಯನ್ನು ಹೆಚ್ಚಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಚೀನಾ ಸೇರಿದಂತೆ ಕೆಲ ದೇಶಗಳಲ್ಲಿ ಕೋವಿಡ್‌ ಪ್ರಕರಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ಸಚಿವರು ಹಾಗೂ ಅಧಿಕಾರಿಗ
ಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ಅವರು,ಆಮ್ಲಜನಕ ಸಿಲಿಂಡರ್‌, ವೆಂಟಿಲೇಟರ್‌, ಪಿಎಸ್‌ಎ ಘಟಕಗಳು ಹಾಗೂ ಮಾನವ ಸಂಪನ್ಮೂಲ ಸೇರಿದಂತೆಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಾಗಿಯೇ ಆಸ್ಪತ್ರೆಗಳಲ್ಲಿ ಕಲ್ಪಿಸಲಾಗಿರುವ ಮೂಲ ಸೌಕರ್ಯಗಳ ಕುರಿತು ಮಾಹಿತಿ ಪಡೆದುಕೊಳ್ಳುವಂತೆ ಎಲ್ಲಾ ರಾಜ್ಯಗಳಿಗೂ ಸಲಹೆ ನೀಡಿದ್ದಾರೆ.

ಕೋವಿಡ್‌ ಸೋಂಕಿತರಿಂದ ಸಂಗ್ರಹಿಸಲಾಗುವ ಮಾದರಿಗಳನ್ನು ಪ್ರತಿದಿನವೂ ಕೇಂದ್ರ ಸರ್ಕಾರದ ವೈರಾಣು ಸಂರಚನೆ ವಿಶ್ಲೇಷಣೆ ಸಂಸ್ಥೆ ಐಎನ್‌ಎಸ್‌ಎಸಿಒಜಿಯ ಪ್ರಯೋಗಾಲಯಗಳಿಗೆ ಕಳುಹಿಸಬೇಕು. ಯಾವುದಾದರೂ ಹೊಸ ಮಾದರಿ ಇದ್ದರೆ ಅದನ್ನು ಆರಂಭಿಕ ಹಂತದಲ್ಲೇ ಪತ್ತೆಮಾಡಲು ಇದರಿಂದ ಅನುಕೂಲವಾಗುತ್ತದೆ ಎಂದು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ತಿಳಿಸಿದ್ದಾರೆ.

ಮಾಸ್ಕ್‌ ಕಡ್ಡಾಯಗೊಳಿಸುವ ಕುರಿತು ಸಭೆಯಲ್ಲಿ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಜನದಟ್ಟಣೆ ಪ್ರದೇಶಗಳಲ್ಲಿ ಮುಖಗವಸು ಧರಿಸುವಂತೆ ನಾಗರಿಕರಿಗೆ ಸಲಹೆ ನೀಡಿರುವ ಮೋದಿ, ಮುಂಬರುವ ಹಬ್ಬಗಳು ಮತ್ತು ಹೊಸ ವರ್ಷಾಚರಣೆ ವೇಳೆ ಪ್ರತಿಯೊಬ್ಬರೂ ಕೋವಿಡ್‌ ಶಿಷ್ಟಾಚಾರ ಪಾಲಿಸುವಂತೆ ಮನವಿ ಮಾಡಿದ್ದಾರೆ. ದುರ್ಬಲ ವ್ಯಕ್ತಿಗಳು ಹಾಗೂ ವಯಸ್ಸಾದವರು ಮುನ್ನೆಚ್ಚರಿಕೆ ಡೋಸ್‌ ಪಡೆಯುವಂತೆಯೂ ಹೇಳಿದ್ದಾರೆ.

‘ಆಲಕ್ಷ್ಯ ಭಾವನೆ ಬಿಟ್ಟು ಕಣ್ಗಾವಲು ಹೆಚ್ಚಿಸಬೇಕು. ಕಾರ್ಯಾಚರಣೆಗೆ ಅನುವಾಗುವಂತೆ ಸಾರಿಗೆ ಸೌಕರ್ಯ ಸಜ್ಜಾಗಿಟ್ಟುಕೊಳ್ಳಬೇಕು’ ಎಂದೂ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಪ್ರತಿ 15 ದಿನಗಳಿಗೊಮ್ಮೆಆಸ್ಪತ್ರೆಗಳಲ್ಲಿನ ಆಮ್ಲಜನಕದ ಸ್ಥಿತಿಗತಿ ಕುರಿತ ಮಾಹಿತಿ ಪಡೆಯುತ್ತಿದ್ದೇನೆ’ ಎಂದು ಆರೋಗ್ಯ ಸಚಿವ ಮನ್ಸುಖ್‌ ಮಾಂಡವೀಯ ಅವರು ಸಭೆಯಲ್ಲಿ ತಿಳಿಸಿದ್ದಾರೆ.

ಆಯ್ದ ಅಂತರರಾಷ್ಟ್ರೀಯ ಪ್ರಯಾಣಿಕರ ಮಾದರಿ ಸಂಗ್ರಹ: ‘ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಶೇ 2ರಷ್ಟು ಆಯ್ದ ಅಂತರರಾಷ್ಟ್ರೀಯ ಪ್ರಯಾಣಿಕರ ಮಾದರಿ ಸಂಗ್ರಹ ಗುರುವಾರದಿಂದಲೇ ಆರಂಭವಾಗಿದೆ. ಅಗತ್ಯಬಿದ್ದರೆ ಇದನ್ನು ಕಡ್ಡಾಯಗೊಳಿಸಲಾಗುತ್ತದೆ’ ಎಂದು ಸಚಿವ ಮನ್ಸುಖ್‌ ಮಾಂಡವೀಯ ಗುರುವಾರ ಸಂಸತ್ತಿನ ಉಭಯ ಸದನಗಳಿಗೂ ತಿಳಿಸಿದ್ದಾರೆ.

‘ಚೀನಾದಲ್ಲಿನ ಪರಿಸ್ಥಿತಿಯನ್ನು ಭಾರತಕ್ಕೆ ಹೋಲಿಸುವ ಅಗತ್ಯವಿಲ್ಲ ಎಂದು ತಜ್ಞರು ಹೇಳಿದ್ದಾರೆ. ಸೋಂಕಿಗೆ ಸುಲಭವಾಗಿ ತುತ್ತಾಗಬಲ್ಲವರು ಲಸಿಕೆಯ ಮೂರನೇ ಡೋಸ್‌ ಪಡೆಯುವುದು ಒಳಿತು ಎಂದು ಅವರು ಸಲಹೆ ನೀಡಿದ್ದಾರೆ’ ಎಂದಿದ್ದಾರೆ.

ಚೀನಾದಿಂದ ಬರುವ ವಿಮಾನದ ಮೇಲೆ ನಿರ್ಬಂಧ ವಿಧಿಸುವ ಆಲೋಚನೆ ಇದೆಯೇ ಎಂದು ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ, ‘ಚೀನಾದಿಂದ ನೇರವಾಗಿ ಭಾರತಕ್ಕೆ ಯಾವುದೇ ವಿಮಾನ ಇಲ್ಲ. ವೈರಾಣು ಭಾರತಕ್ಕೆ ಕಾಲಿಡದಂತೆ ತಡೆಯಬೇಕಿರುವುದು ನಮ್ಮ ಕರ್ತವ್ಯ. ಹಾಗಂತ ಪ್ರಯಾಣಕ್ಕೂ ಅಡ್ಡಿಯಾಗಬಾರದು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT