ಮಂಗಳವಾರ, ಜನವರಿ 25, 2022
28 °C

ಪ್ರಧಾನಿ ಭದ್ರತಾ ಲೋಪಕ್ಕೆ ಪಂಜಾಬ್ ಪೊಲೀಸ್ ಕಾರಣ: ಕೇಂದ್ರ ಗೃಹ ಸಚಿವಾಲಯ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ನವದೆಹಲಿ: ‘ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್‌ಗೆ ತೆರಳಿದ್ದ ವೇಳೆ ಭದ್ರತಾ ಲೋಪವಾಗಿದ್ದಕ್ಕೆ ಪಂಜಾಬ್ ಪೊಲೀಸರು ಕಾರಣ’ ಎಂದು ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು ಆರೋಪಿಸಿದ್ದಾರೆ.

‘ಪ್ರತಿಭಟನಾಕಾರರ ಬಗ್ಗೆ ಪಂಜಾಬ್ ಪೊಲೀಸರಿಗೆ ಗುಪ್ತಚರ ಮಾಹಿತಿ ಇದ್ದರೂ ಎಸ್‌ಪಿಜಿಯ ಬ್ಲೂ ಬುಕ್ ಮಾರ್ಗದರ್ಶನಗಳನ್ನು ಅನುಸರಿಸಲಿಲ್ಲ. ಪ್ರಧಾನಿಯವರಿಗೆ ಪರ್ಯಾಯ ಮಾರ್ಗವನ್ನು ಹುಡಕಲಿಲ್ಲ’ ಎಂದು ಅಧಿಕಾರಿಗಳು ಆರೋಪಿಸಿರುವುದಾಗಿ ಎಎನ್‌ಐ ಸುದ್ದಿ ಸಂಸ್ಥೆ ಟ್ವೀಟಿಸಿದೆ.

‘ನಮ್ಮ ಗುಪ್ತಚರ ಅಧಿಕಾರಿಗಳು ಪಂಜಾಬ್ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದರು. ಪ್ರತಿಭಟನಾಕಾರರ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದರು. ಪ್ರಧಾನಿ ಭೇಟಿ ವೇಳೆ ಭದ್ರತಾ ಲೋಪ ಆಗುವುದಿಲ್ಲವೆಂದು ಪಂಜಾಬ್ ಪೊಲೀಸರು ನಮಗೆ ಭರವಸೆ ಕೊಟ್ಟಿದ್ದರು’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಪಂಜಾಬ್ ಪೊಲೀಸರು ಕೈಗೊಂಡಿದ್ದ ಭದ್ರತಾ ಕ್ರಮಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಬುಧವಾರ ಜನವರಿ 5 ರಂದು ಪಂಜಾಬ್‌ನ ಫಿರೋಜ್‌ಪುರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ನಿಗದಿಯಾಗಿತ್ತು.

ಇನ್ನೊಂದೆಡೆ ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಂಜಾಬ್ ಸಿಎಂ  ಚರಣ್‌ಜಿತ್ ಸಿಂಗ್‌ ಚನ್ನಿ, ‘ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯಾಣಕ್ಕೆ ಅಡ್ಡಿಯಾಗಿದ್ದಕ್ಕೆ ವಿಷಾದವಿದೆ. ಆದರೆ, ಇಲ್ಲಿ ಯಾವುದೇ ಭದ್ರತಾ ಲೋಪವಾಗಿಲ್ಲ. ಪ್ರಧಾನಿ ಅವರು ಸುರಕ್ಷಿತವಾಗಿ ವಾಪಸ್ಸಾಗಿದ್ದಾರೆ’ ಎಂದಿದ್ದಾರೆ.

‘ಪ್ರಧಾನಿ ಅವರ ರ‍್ಯಾಲಿಗೆ ಭದ್ರತೆ ಕೇಳಲಾಗಿತ್ತು. ಅದಕ್ಕೆ ಅಗತ್ಯವಿದ್ದ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿತ್ತು. ಪ್ರಧಾನಿ ಅವರು ರಸ್ತೆ ಮಾರ್ಗದಲ್ಲಿ ಹುಸೈನಿವಾಲಾಕ್ಕೆ ಹೋಗುವ ಕಾರ್ಯಕ್ರಮ ಮೂಲಪಟ್ಟಿಯಲ್ಲಿ ಇರಲಿಲ್ಲ. ಆದರೆ, ಕೊನೆಯ ಕ್ಷಣದಲ್ಲಿ ಪ್ರಧಾನಿ ರಸ್ತೆ ಮಾರ್ಗದಲ್ಲಿ ಹೊರಟರು’ ಎಂದಿದ್ದಾರೆ.

‘ಪ್ರತಿಭಟನೆಯ ಕಾರಣ ರಸ್ತೆ ಬಂದ್ ಆಗಿತ್ತು. ಪ್ರತಿಭಟನಾಕಾರರನ್ನು ತೆರವು ಮಾಡಲು 20 ನಿಮಿಷವಾದರೂ ಬೇಕಿತ್ತು. ಪ್ರಧಾನಿ ಅವರಿಗೆ ಬದಲಿ ಮಾರ್ಗವನ್ನೂ ಸೂಚಿಸಿದೆವು. ಆದರೆ ಅವರು ವಾಪಸ್ಸಾಗಲು ನಿರ್ಧರಿಸಿದರು’ ಎಂದು ಚನ್ನಿ ವಿವರಣೆ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು