ಪ್ರಧಾನಿ ಮೋದಿ ದೇಶದ ಮತ್ತು ಬಿಜೆಪಿಯ ಉನ್ನತ ನಾಯಕ: ಸಂಜಯ್ ರಾವುತ್

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಮರು ದಿನವೇ ಶಿವಸೇನೆ ಮುಖಂಡ ಸಂಜಯ್ ರಾವುತ್ ಗುರುವಾರ ‘ಮೋದಿ ದೇಶದ ಮತ್ತು ಬಿಜೆಪಿಯ ಉನ್ನತ ನಾಯಕ’ ಎಂದು ಹೇಳಿರುವುದು ಕುತೂಹಲ ಮೂಡಿಸಿದೆ.
ಮೋದಿ ಜನಪ್ರಿಯತೆಯು ಕುಸಿಯುತ್ತಿದೆ ಎಂದು ಭಾವಿಸಿ ಆರ್‌ಎಸ್‌ಎಸ್ ರಾಜ್ಯ ಚುನಾವಣೆಗಳಲ್ಲಿ ರಾಜ್ಯದ ನಾಯಕರನ್ನು ಮುಂದಿಟ್ಟುಕೊಂಡು ಹೋಗುತ್ತಿದೆ ಎನ್ನುವ ಮಾಧ್ಯಮ ವರದಿಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ರಾವುತ್ ಈ ಪ್ರತಿಕ್ರಿಯೆ ನೀಡಿದರು.
ಉತ್ತರ ಮಹಾರಾಷ್ಟ್ರದ ಪ್ರವಾಸದಲ್ಲಿರುವ ರಾವುತ್ ಜಲ್ಗಾಂವ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಮಾಧ್ಯಮ ವರದಿಗಳನ್ನೂ ನಂಬುವುದಿಲ್ಲ. ನಾನು ಈ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ಯಾವುದೇ ಅಧಿಕೃತ ಹೇಳಿಕೆಯನ್ನೂ ನೀಡಲಾರೆ. ಬಿಜೆಪಿಯು ಕಳೆದ ಏಳು ವರ್ಷಗಳಲ್ಲಿನ ತನ್ನ ಯಶಸ್ಸನ್ನು ನರೇಂದ್ರ ಮೋದಿಯವರಿಗೆ ಅರ್ಪಿಸಬೇಕು. ಪ್ರಸ್ತುತ ಮೋದಿ ಅವರು ದೇಶದಲ್ಲಿ ಮತ್ತು ಬಿಜೆಪಿಯಲ್ಲಿ ಉನ್ನತ ನಾಯಕರಾಗಿದ್ದಾರೆ’ ಎಂದು ಅವರು ಹೇಳಿದ್ದಾರೆ.
‘ಶಿವಸೇನಾ ನಿಲುವು ಯಾವಾಗಲೂ ಒಂದೇ, ಪ್ರಧಾನಿ ಇಡೀ ದೇಶಕ್ಕೆ ಸೇರಿದವರೇ ಹೊರತು ನಿರ್ದಿಷ್ಟ ಪಕ್ಷಕ್ಕೆ ಸೇರಿದವರಲ್ಲ. ಆಡಳಿತ ಯಂತ್ರದ ಮೇಲೆ ಒತ್ತಡ ಉಂಟಾಗುವುದರಿಂದ ಪ್ರಧಾನಿ ಚುನಾವಣಾ ಪ್ರಚಾರದಲ್ಲಿ ತೊಡಗಬಾರದು’ ಎಂದು ಹೇಳಿದರು.
ಮೋದಿ ಬಯಸಿದಲ್ಲಿ ತಮ್ಮ ಪಕ್ಷವು ಹುಲಿಯೊಂದಿಗೆ (ಶಿವಸೇನೆಯ ಚಿಹ್ನೆ) ಸ್ನೇಹ ಮಾಡಲಿದೆ ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ರಾವುತ್, ‘ಹುಲಿಯೊಂದಿಗೆ ಯಾರೂ ಸ್ನೇಹ ಬೆಳೆಸಲು ಸಾಧ್ಯವಿಲ್ಲ. ತನ್ನೊಂದಿಗೆ ಯಾರು ಸ್ನೇಹ ಬೆಳೆಸಬೇಕೆನ್ನುವುದನ್ನು ಹುಲಿ ನಿರ್ಧರಿಸುತ್ತದೆ’ ಎಂದರು.
ಉತ್ತರ ಮಹಾರಾಷ್ಟ್ರದ ಪ್ರವಾಸದ ಬಗ್ಗೆ ಕೇಳಿದಾಗ, ‘ಇದು ಸಂಘಟನೆ ಬಲಪಡಿಸುವ ಪಕ್ಷದ ಪ್ರಯತ್ನಗಳ ಭಾಗವಾಗಿದೆ. ಮಹಾ ವಿಕಾಸ್ ಅಘಾಡಿ (ಎಂವಿಎ) ಮಿತ್ರಪಕ್ಷಗಳು ತಮ್ಮ ನೆಲೆ ವಿಸ್ತರಿಸಲು ಮತ್ತು ಪಕ್ಷಗಳನ್ನು ಬಲಪಡಿಸುವ ಹಕ್ಕನ್ನು ಹೊಂದಿವೆ. ಇದು ಈ ಸಮಯದ ಅವಶ್ಯಕತೆ ಕೂಡ ಹೌದು. ಪರಸ್ಪರ ಸಮನ್ವಯ ಬಲಪಡಿಸುವ ಕುರಿತು ನಾವು ಸಭೆಗಳನ್ನು ನಡೆಸುತ್ತಿದ್ದೇವೆ’ ಎಂದು ರಾವುತ್ ಹೇಳಿದರು.
ಇದನ್ನೂ ಓದಿ... ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದೇಕೆ? ಕಾರಣ ಬಿಚ್ಚಿಟ್ಟ ಜಿತಿನ್ ಪ್ರಸಾದ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.