ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾಯ್ದೆಗಳ ವಾಪಸ್‌ ಇಲ್ಲ: ಪ್ರಧಾನಿ ಮೋದಿ ಸ್ಪಷ್ಟನೆ

Last Updated 16 ಡಿಸೆಂಬರ್ 2020, 2:15 IST
ಅಕ್ಷರ ಗಾತ್ರ
ADVERTISEMENT
""

ಕೃಷಿ ಕ್ಷೇತ್ರದ ಸುಧಾರಣೆಗಾಗಿ ಜಾರಿಗೆ ತಂದಿರುವ ಮೂರು ಕಾಯ್ದೆಗಳನ್ನು ರದ್ದುಪಡಿಸುವ ಪ್ರಶ್ನೆಯೇ ಇಲ್ಲ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಪುನರುಚ್ಚರಿಸಿದ್ದಾರೆ. ರಾಜಕೀಯ ಲಾಭಕ್ಕಾಗಿ ವಿರೋಧ ಪಕ್ಷಗಳು ರೈತರ ದಾರಿತಪ್ಪಿಸಿವೆ. ಇವು ರೈತರಿಗೆ ಅತ್ಯಂತ ಪ್ರಯೋಜನಕಾರಿ ಕಾಯ್ದೆಗಳು. ಹಾಗಾಗಿಯೇ, ವಿರೋಧ ಪಕ್ಷಗಳು ಮತ್ತು ರೈತರ ಸಂಘಟನೆಗಳು ಇಂತಹ ಕಾಯ್ದೆಗಳು ಜಾರಿಯಾಗಬೇಕು ಎಂದು ಹಲವು ವರ್ಷಗಳಿಂದ ಬೇಡಿಕೆ ಇಟ್ಟಿದ್ದವು ಎಂದು ಅವರು ಹೇಳಿದ್ದಾರೆ.

ಗುಜರಾತ್‌ನ ಧೋರ್ಡೊದಲ್ಲಿ ಮಾತನಾಡಿದ ಮೋದಿ ಅವರು ‘ಈಗಿನ ವಿರೋಧ ಪಕ್ಷಗಳು ಅಧಿಕಾರದಲ್ಲಿದ್ದಾಗ ಇವೇ ಕಾನೂನುಗಳನ್ನು ಜಾರಿಗೆ ತರಲು ಬಯಸಿದ್ದವು. ಆದರೆ, ನಿರ್ಧಾರ ಕೈಗೊಳ್ಳಲು ಅವರಿಗೆ ಆಗಿರಲಿಲ್ಲ. ಈಗ, ಜಮೀನುಗಳನ್ನು ಕಸಿದುಕೊಳ್ಳಲಾಗುತ್ತದೆ ಎಂದು ರೈತರ ದಾರಿ ತಪ್ಪಿಸುತ್ತಿವೆ’ ಎಂದು ಆಪಾದಿಸಿದರು.

‘ಹೊಸ ಕಾನೂನುಗಳು ಜಾರಿಯಾದರೆ ನಿಮ್ಮ ಭೂಮಿಯನ್ನು ಇತರರು ಕಸಿದುಕೊಳ್ಳುತ್ತಾರೆ ಎಂದು ರೈತರಿಗೆ ಹೇಳಲಾಗಿದೆ. ನಿಮ್ಮಲ್ಲಿ ನಾನೊಂದು ಪ್ರಶ್ನೆ ಕೇಳಲು ಬಯಸುತ್ತೇನೆ, ನೀವು ಹಾಲು ಕೊಡುತ್ತೀರಿ ಎಂದ ಮಾತ್ರಕ್ಕೆ ಡೇರಿ ಮಾಲೀಕರು ನಿಮ್ಮ ಹಸುಗಳನ್ನು ವಶಪಡಿಸಿಕೊಳ್ಳುತ್ತಾರೆಯೇ’ ಎಂದು ಮೋದಿ ಪ್ರಶ್ನಿಸಿದರು.

ತಮ್ಮ ಸರ್ಕಾರವು ರೈತರ ಅನುಮಾನಗಳನ್ನು ಪರಿಹರಿಸಲು 24 ತಾಸು ಕೆಲಸ ಮಾಡಲು ಸಿದ್ಧವಿದೆ ಎಂದು ಅವರು ಹೇಳಿದರು. ‘ರೈತರನ್ನು ದಾರಿತಪ್ಪಿಸಿ ರಾಜಕೀಯ ಲಾಭ ಪಡೆಯುವ ಪ್ರಯತ್ನಗಳನ್ನು ನಮ್ಮ ಪ್ರಾಮಾಣಿಕ ಉದ್ದೇಶವು ಸೋಲಿಸುವ ವಿಶ್ವಾಸವಿದೆ’ ಎಂದು ಪ್ರಧಾನಿ ಹೇಳಿದರು.

ಚಳಿಗಾಲದಲ್ಲಿ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ಧೋರ್ಡೊದಲ್ಲಿ ಸಿಖ್‌ ಸಮುದಾಯಕ್ಕೆ ಸೇರಿದಗಣನೀಯ ಸಂಖ್ಯೆಯ ರೈತರಿದ್ದಾರೆ. ಪ್ರಧಾನಿ ಜತೆಗಿನ ಸಂವಾದಕ್ಕಾಗಿ ಇಂತಹ ಹಲವು ರೈತರನ್ನು ಕರೆತರಲಾಗಿತ್ತು.

ಹೊಸ ಮಸೂದೆ ತನ್ನಿ
ನವದೆಹಲಿ: ‘ಹೊಸ ಕೃಷಿ ಕಾಯ್ದೆಗಳನ್ನು ಸಂಪೂರ್ಣವಾಗಿ ರದ್ದುಕೊಳಿಸಿ, ಪ್ರತಿಭಟನಾನಿರತ ರೈತರ ಜತೆಗೆ ಒಪ್ಪಂದ ಮಾಡಿಕೊಂಡ ಬಳಿಕ ಹೊಸ ಮಸೂದೆಯನ್ನು ಮಂಡಿಸಿ’ ಎಂದು ಕಾಂಗ್ರೆಸ್‌ ಮುಖಂಡ ಪಿ. ಚಿದಂಬರಂ ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

‘ಸರ್ಕಾರವು ಕುದುರೆಯಿಂದಿಳಿದು ಬಂದು ರೈತರೊಂದಿಗೆ ಶೀಘ್ರದಲ್ಲೇ ಒಪ್ಪಂದ ಮಾಡಿಕೊಳ್ಳಬೇಕು. ಅದಕ್ಕಿರುವ ಸರಳ ಮಾರ್ಗವೆಂದರೆ ಈಗಿನಕಾನೂನುಗಳನ್ನು ರದ್ದುಪಡಿಸಿ, ಹೊಸ ಕಾನೂನುಗಳನ್ನು ರೂಪಿಸುವುದಾಗಿದೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಅಪಘಾತ: ನಾಲ್ವರು ರೈತರ ಸಾವು
ಮಂಗಳವಾರ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮರಳುತ್ತಿರುವ ನಾಲ್ವರು ರೈತರು ಮೃತಪಟ್ಟಿದ್ದಾರೆ.

ಹರಿಯಾಣದ ಕರ್ನಾಲ್‌ ಜಿಲ್ಲೆಯಲ್ಲಿ ಮಂಗಳವಾರ ಮುಂಜಾನೆ ಲಾರಿ ಹಾಗೂ ಟ್ರ್ಯಾಕ್ಟರ್‌ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಪಟಿಯಾಲಾದ ಇಬ್ಬರು ರೈತರು ಮೃತಪಟ್ಟರು. ಒಬ್ಬರಿಗೆ ತೀವ್ರಸ್ವರೂಪದ ಗಾಯಗಳಾಗಿವೆ.

ರೈತರು ಬರುತ್ತಿದ್ದ ವಾಹನ ಮತ್ತು ಟ್ರಕ್‌ ಮಧ್ಯೆ ಮೊಹಾಲಿಯ ಸಮೀಪ ನಡೆದ ಇನ್ನೊಂದು ಅಪಘಾತದಲ್ಲಿ ಇನ್ನಿಬ್ಬರು ರೈತರು ಮೃತಪಟ್ಟಿದ್ದಾರೆ. ಈ ಘಟನೆಯಲ್ಲಿ ನಾಲ್ವರು ಗಾಹಯೊಂಡಿದ್ದಾರೆ.

ಸಿಂಘು ಗಡಿಯಲ್ಲಿ ರೈತರು ಮಂಗಳವಾರ ಮಾಧ್ಯಮಗೋಷ್ಠಿ ನಡೆಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT