ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ತುಕ್ಡೆ, ತುಕ್ಡೆ ಗ್ಯಾಂಗ್‌ನ ನಾಯಕ: ಲೋಕಸಭೆಯಲ್ಲಿ ಪ್ರಧಾನಿ ಟೀಕೆ

ಲೋಕಸಭೆಯಲ್ಲಿ ಪ್ರಧಾನಿ ಟೀಕೆ: ಕಾಂಗ್ರೆಸ್‌ ಪಕ್ಷವನ್ನೇ ಗುರಿಯಾಗಿಸಿ ವಾಗ್ದಾಳಿ
Last Updated 7 ಫೆಬ್ರುವರಿ 2022, 15:40 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸರ್ಕಾರದ ಕಾರ್ಯವೈಖರಿಯನ್ನು ಸಂಸತ್ತಿನಲ್ಲಿ ಬಲವಾಗಿ ಸಮರ್ಥಿಸಿಕೊಂಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷವನ್ನೇ ಗುರಿಯಾಗಿಸಿ ವ್ಯಂಗ್ಯದ ಮಾತುಗಳಿಂದ ತೀವ್ರ ವಾಗ್ದಾಳಿ ನಡೆಸಿದರು.

‘ಕಾಂಗ್ರೆಸ್ ಪಕ್ಷದ್ದು ಒಡೆದು ಆಳುವ ನೀತಿ. ಅದೇ ಕಾರಣಕ್ಕೆ ಈಗ ಅದು ‘ತುಕ್ಡೆ ತುಕ್ಡೆ ಗ್ಯಾಂಗ್‌’ಗೆ ನಾಯಕನಾಗಿದೆ.ಆ ಪಕ್ಷದ ಮುಖಂಡರ ಹೇಳಿಕೆ, ನಡವಳಿಕೆ ಗಮನಿಸಿದರೆ 100 ವರ್ಷ ಅಧಿಕಾರದಿಂದ ದೂರವಿರಲು ನಿರ್ಧರಿಸಿದಂತಿದೆ‘ ಎಂದು ಮೋದಿ ಹೇಳಿದರು.

ರಾಷ್ಟ್ರಪತಿಯವರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಅವರು ಸೋಮವಾರ ಲೋಕಸಭೆಯಲ್ಲಿ ಉತ್ತರಿಸಿದರು.

‘ದಶಕದಿಂದ ವಿವಿಧ ರಾಜ್ಯಗಳಲ್ಲಿ ಜನಾದೇಶ ಪಡೆಯಲುಕಾಂಗ್ರೆಸ್‌ ವಿಫಲವಾಗಿದೆ. ‘ಅಂಧ ಪ್ರತಿಪಕ್ಷ’ವಾಗಿಯೇ ಕೆಲಸ ಮಾಡುತ್ತಿದೆ. ಅದಕ್ಕೀಗ ಅಧಿಕಾರದ ಹಸಿವಿಲ್ಲ. ಪ್ರತ್ಯೇಕತಾವಾದಿ ಗುಂಪುಗಳನ್ನು ಬಲಪಡಿಸಲು ಬೀಜ ಬಿತ್ತುವ ಕಾರ್ಯದಲ್ಲಿ ನಿರತವಾಗಿದೆ’ ಎಂದೂ ತರಾಟೆಗೆ ತೆಗೆದುಕೊಂಡರು. ಆಡಳಿತ ಪಕ್ಷದ ಸದಸ್ಯರು ಮೇಜುಕುಟ್ಟಿ ಪ್ರಧಾನಿ ಮಾತಿಗೆ ಸಹಮತ ವ್ಯಕ್ತಪಡಿಸಿದರು.

‘1971ರಿಂದಲೂ ಕಾಂಗ್ರೆಸ್‌ ‘ಬಡತನ ನಿರ್ಮೂಲನೆ’ ಘೋಷಣೆಯಡಿ ಚುನಾವಣೆ ಗೆಲ್ಲುತ್ತಿತ್ತು. ಬಡತನ ನಿರ್ಮೂಲನೆ ಆಗಲಿಲ್ಲ. ಜನರು ಕಾಂಗ್ರೆಸ್‌ ಅನ್ನೇ ಅಧಿಕಾರದಿಂದ ಕಿತ್ತೊಗೆದರು. ಒಂದು ವೇಳೆ ಈಗ ಕಾಂಗ್ರೆಸ್ ಪಕ್ಷವೇನಾದರೂ ಅಧಿಕಾರದಲ್ಲಿ ಇದ್ದಿದ್ದರೆ ಹಣದುಬ್ಬರಕ್ಕೆ ಕೋವಿಡ್‌ ಪರಿಸ್ಥಿತಿಯೇ ಕಾರಣ ಎಂದು ನೆಪ ಹೇಳುತ್ತಿತ್ತು’ ಎಂದು ಪ್ರಧಾನಿ ಹೇಳಿದರು.

ಕೋವಿಡ್‌ ಸಂದರ್ಭದಲ್ಲಿ ಕಾಂಗ್ರೆಸ್‌ ಎಲ್ಲ ಮಿತಿಗಳನ್ನು ದಾಟಿತು. ಮೊದಲ ಅಲೆ ಸಂದರ್ಭದಲ್ಲಿ ಜನರಲ್ಲಿ ಭೀತಿ ಮೂಡಿಸಿತು. ಆದರೆ, ಕೋವಿಡ್ ಸ್ಥಿತಿಯನ್ನುಭಾರತವು ನಿರ್ವಹಿಸಿದ ಪರಿಯು ವಿಶ್ವಕ್ಕೇ ಮಾದರಿಯಾದುದಾಗಿದೆ’ ಎಂದರು.

‘ಕೋವಿಡ್ ಪರಿಸ್ಥಿತಿಯ ನಂತರವು ದೇಶದಲ್ಲಿ ಹಣದುಬ್ಬರ ಕೈಮೀರದಂತೆ ನಿಯಂತ್ರಿಸಿದ್ದೇವೆ. ಯುಪಿಎ ಆಡಳಿತಾವಧಿಯಲ್ಲಿ ಭಾರತ ಜೋಡಿಸಂಖ್ಯೆಯ ಹಣದುಬ್ಬರ ಎದುರಿಸಿತ್ತು. ಆಗ ಸರ್ಕಾರ ಹಣದುಬ್ಬರ ನಿಯಂತ್ರಿಸಲಾಗದು ಎಂದು ಒಪ್ಪಿಕೊಂಡಿತ್ತು’ ಎಂದರು.

‘ಇಲ್ಲಿ ಪ್ರಶ್ನೆ ಚುನಾವಣೆಯದ್ದಲ್ಲ, ಉದ್ದೇಶದ್ದು. 50 ವರ್ಷ ಆಡಳಿತ ನಡೆಸಿದ್ದರೂ ಜನ ಮತ್ತೆ, ಮತ್ತೆ ಕಾಂಗ್ರೆಸ್‌ ತಿರಸ್ಕರಿಸುತ್ತಿದ್ದಾರೆ. ಅವರು ಕೆಳಹಂತದಲ್ಲಿ ಜನರ ಜೊತೆ ಸಂಪರ್ಕ ಕಡಿದುಕೊಂಡಿದ್ದಾರೆ. ಕಡತಗಳಲ್ಲಿ ಕಳೆದುಹೋಗಿದ್ದಾರೆ’ ಎಂದರು.

ಟೀಕೆ ಪ್ರಜಾಪ್ರಭುತ್ವದ ಭಾಗ:‘ನಮಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ವಿಶ್ವಾಸವಿದೆ. ಟೀಕೆಗಳು ಪ್ರಜಾಪ್ರಭುತ್ವದ ಭಾಗ ಎಂದೇ ನಾವು ನಂಬಿದ್ದೇವೆ. ಆದರೆ, ವಿರೋಧಪಕ್ಷವು ತನ್ನ ಸುತ್ತಲಿನ ಬೆಳವಣಿಗೆಗಳ ಬಗ್ಗೆ ಕುರುಡಾಗಿದೆ’ ಎಂದು ಪ್ರತಿಪಾದಿಸಿದರು.

‘130 ಕೋಟಿ ಭಾರತೀಯರ ಬದುಕಿನಲ್ಲಿ ಬದಲಾವಣೆ ತರಲು ನಾನು ಕಾರ್ಯತತ್ಪರರಾಗಿದ್ದೇವೆ. ಜಾಗತಿಕ ನಾಯಕತ್ವದ ಪ್ರಶ್ನೆ ಬಂದಾಗ ಭವಿಷ್ಯದಲ್ಲಿ ಭಾರತದ ಪಾತ್ರವೇನು ಎಂದು ಮಂಥನ ನಡೆಸಲು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅವಧಿ ಸಕಾಲ. ಕೋವಿಡೋತ್ತರದಲ್ಲಿ ಜಗತ್ತು ಹೊಸದರತ್ತ ವೇಗವಾಗಿ ಸಾಗುತ್ತಿದೆ. ಭಾರತ ಈ ಅವಕಾಶ ಕಳೆದುಕೊಳ್ಳಬಾರದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT