ಪಿಎಂಸಿ ಬ್ಯಾಂಕ್ ಹಗರಣ: ಇ.ಡಿ.ಯಿಂದ ಸಂಜಯ್ ರಾವುತ್ ಪತ್ನಿ ವಿಚಾರಣೆ

ಮುಂಬೈ: ಶಿವಸೇನಾ ನಾಯಕ ಸಂಜಯ್ ರಾವುತ್ ಪತ್ನಿ ವರ್ಷಾ ಅವರನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಸೋಮವಾರ ವಿಚಾರಣೆಗೆ ಒಳಪಡಿಸಿದೆ.
ಪಂಜಾಬ್- ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ನ ವಂಚನೆ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿರುವ ಆರೋಪವನ್ನು ವರ್ಷಾ ಅವರು ಎದುರಿಸುತ್ತಿದ್ದಾರೆ.
ಈ ಸಂಬಂಧ ಜಾರಿ ನಿರ್ದೇಶನಾಲಯವು ವರ್ಷಾ ಅವರಿಗೆ ಮೂರನೇ ಬಾರಿ ಸಮನ್ಸ್ ನೀಡಿತ್ತು. ಅನಾರೋಗ್ಯದ ಕಾರಣ ನೀಡಿದ್ದ ವರ್ಷಾ ಅವರು ಈ ಹಿಂದಿನ ಎರಡು ವಿಚಾರಣೆಗೆ ಗೈರಾಗಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದರು.
ಪಂಜಾಬ್- ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ನಿಂದ ವರ್ಷಾ ಅವರು ಹಣ ತೆಗೆದುಕೊಂಡಿದ್ದಾರೆ. ಈ ಹಣದ ರಶೀದಿಗಳಿಗೆ ಸಂಬಂಧಿಸಿದಂತೆ ಪ್ರಶ್ನಿಸಲು ಇ.ಡಿ ಅಧಿಕಾರಿಗಳು ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
2019ರಲ್ಲಿ ಪಿಎಂಸಿ ಬ್ಯಾಂಕ್ನಲ್ಲಿ ಸುಮಾರು ₹6,500 ಕೋಟಿ ವಂಚನೆ ನಡೆದ ಆರೋಪ ಕೇಳಿಬಂದಿತ್ತು. ಈ ಆರೋಪದಡಿ ಬ್ಯಾಂಕ್ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೋಯ್ ಥಾಮಸ್ ಅವರನ್ನು ಬಂಧಿಸಲಾಗಿದೆ.
ರಿಯಲ್ ಎಸ್ಟೇಟ್ ಸಂಸ್ಠೆಯಾದ ಹೌಸಿಂಗ್ ಡೆವಲಪ್ಮೆಂಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ಗೆ (ಎಚ್ಡಿಐಎಲ್) ಪಿಎಂಸಿ ಬ್ಯಾಂಕ್ ತನ್ನ ಶೇ. 75 ರಷ್ಟು ಸಾಲವನ್ನು ನೀಡಿತ್ತು. ಎಚ್ಡಿಐಎಲ್ ಪ್ರವರ್ತಕರು ಸಾಲ ಪಡೆಯುವುದಕ್ಕಾಗಿ 21,000 ನಕಲಿ ಖಾತೆಗಳನ್ನು ಸೃಷ್ಟಿಸಿದ್ದರು ಎಂಬ ಆರೋಪವಿದೆ.
ಎಚ್ಡಿಐಎಲ್ ಸಾಲ ನೀಡಿದ್ದರೂ ವಾರ್ಷಿಕ ವರದಿಯಲ್ಲಿ ಪಿಎಂಸಿ ಈ ಬಗ್ಗೆ ಉಲ್ಲೇಖಿಸಿರಲಿಲ್ಲ. ಎಚ್ಡಿಐಎಲ್ ದಿವಾಳಿಯಾಗುತ್ತಿದ್ದರೂ ಪಿಎಂಸಿ ಬ್ಯಾಂಕ್ ಸಾಲ ಕೊಡುತ್ತಲೇ ಇತ್ತು ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.