ಮಂಗಳವಾರ, ಡಿಸೆಂಬರ್ 6, 2022
21 °C

ಸೇನೆಗೆ ಅವಮಾನಿಸಿದ ಬಾಲಿವುಡ್‌ ನಟಿ ರಿಚಾ ಚಡ್ಡಾ ವಿರುದ್ಧ ದೂರು

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಮುಂಬೈ: ಪಾಕ್‌ ಆಕ್ರಮಿತ ಕಾಶ್ಮೀರ ವಶಕ್ಕೆ ಸೇನೆ ಸಿದ್ಧವಾಗಿದೆ ಎಂಬ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಹೇಳಿಕೆಗೆ ವಿರುದ್ಧವಾಗಿ ಸೇನೆಯನ್ನು ಅವಮಾನಿಸುವ ರೀತಿಯಲ್ಲಿ ಟ್ವೀಟ್‌ ಮಾಡಿದ್ದ ಬಾಲಿವುಡ್‌ ನಟಿ ರಿಚಾ ಚಡ್ಡಾ ವಿರುದ್ಧ ಎಫ್‌ಐಆರ್‌ಗೆ ಆಗ್ರಹಿಸಿ ಮುಂಬೈ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಸಿನಿಮಾ ನಿರ್ಮಾಪಕ ಅಶೋಕ್‌ ಪಂಡಿತ್‌ ಎಂಬುವವರು ರಿಚಾ ವಿರುದ್ಧ ಮುಂಬೈನ ಜುಹು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಿಚಾ ಟ್ವೀಟ್ ಅನ್ನು 'ಅಪರಾಧ' ಎಂದು ಉಲ್ಲೇಖಿಸಿರುವ ಪಂಡಿತ್‌, ಆಕೆಯ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆಗ್ರಹಿಸಿದ್ದಾರೆ.

‘ರಿಚಾ ಚಡ್ಡಾ ನಮ್ಮ ಸೇನೆಯನ್ನು ಅಪಹಾಸ್ಯ ಮಾಡಿದ್ದಾರೆ, ವಿಶೇಷವಾಗಿ ಗಾಲ್ವಾನ್ ಕಣಿವೆಯಲ್ಲಿ ದೇಶಕ್ಕಾಗಿ ಪ್ರಾಣವನ್ನು ಅರ್ಪಿಸಿದ ಸೈನಿಕರನ್ನು ಅವಮಾನಿಸಿದ್ದಾರೆ. ಇದು ಅಪರಾಧ ಕೃತ್ಯವಾಗಿದೆ. ಎಫ್‌ಐಆರ್ ದಾಖಲಿಸಬೇಕು’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪಾಕ್‌ ಆಕ್ರಮಿತ ಕಾಶ್ಮೀರ ವಶಕ್ಕೆ ಸೇನೆ ಸಿದ್ಧವಾಗಿದೆ ಎಂಬ ದ್ವಿವೇದಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ರಿಚಾ, ‘ಗಲ್ವಾನ್‌ ಹಾಯ್‌ ಎನ್ನುತ್ತಿದೆ’ ಎಂಬುದಾಗಿ ಟ್ವೀಟ್‌ ಮಾಡಿ ಎಲ್ಲರ ಆಕ್ರೋಶಕ್ಕೆ ತುತ್ತಾಗಿದ್ದರು. ಬಳಿಕ ತಮ್ಮ ಪೋಸ್ಟ್‌ ಡಿಲೀಟ್‌ ಮಾಡಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದರು.

2020ರ ಜೂನ್‌ನಲ್ಲಿ ಗಲ್ವಾನ್‌ ಕಣಿವೆಯಲ್ಲಿ ಭಾರತ–ಚೀನಾ ಸಂಘರ್ಷವಾಗಿತ್ತು. ಇದರಲ್ಲಿ 20 ಭಾರತೀಯ ಸೈನಿಕರು ವೀರ ಮರಣವನ್ನಪ್ಪಿದ್ದರು. ಪ್ರತಿಕಾರದಲ್ಲಿ ಚೀನಾ ಸೈನಿಕರು ಕೂಡ ಸಾವನ್ನಪ್ಪಿದ್ದರು. ಇದಾದ ಬಳಿಕ ಚೀನಾ ಮತ್ತು ಭಾರತ ಗಡಿಯಲ್ಲಿ ಯುದ್ಧದ ಭೀತಿ ಆವರಿಸಿತ್ತು. ಸೇನೆಯ ಈ ವೀರ ಹೋರಾಟವನ್ನು ರಿಚಾ ಗೇಲಿ ಮಾಡಿದ್ದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು