ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಯಾತ್ರೆ’ ವೇಳೆ ನೀಡಿದ್ದ ಹೇಳಿಕೆಯ ವಿವರ ಸಂಗ್ರಹಿಸಲು ರಾಹುಲ್‌ ಮನೆಗೆ ಪೊಲೀಸರು

‘ಜೋಡೊ ಯಾತ್ರೆ’ ವೇಳೆ ನೀಡಿದ್ದ ಹೇಳಿಕೆಯ ವಿವರ ಸಂಗ್ರಹದ ಉದ್ದೇಶ
Last Updated 19 ಮಾರ್ಚ್ 2023, 21:11 IST
ಅಕ್ಷರ ಗಾತ್ರ

ನವದೆಹಲಿ: ಆಡಳಿತ ಪ‍ಕ್ಷ ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್‌ ನಡುವಣ ರಾಜಕೀಯ ಸಂಘರ್ಷ ಇನ್ನಷ್ಟು ತೀವ್ರಗೊಳ್ಳುವ ಲಕ್ಷಣಗಳು ಕಾಣಿಸಿಕೊಂಡಿವೆ. ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರ ಮನೆಗೆ ದೆಹಲಿ ಪೊಲೀಸರು ಭಾನುವಾರವೂ ಹೋಗಿದ್ದಾರೆ. ಇದು ನಾಲ್ಕು ದಿನಗಳಲ್ಲಿ ಮೂರನೇ ಭೇಟಿಯಾಗಿದೆ. ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ರಾಹುಲ್‌ ಗಾಂಧಿ ಅವರಲ್ಲಿ ಹೇಳಿಕೊಂಡ ಮಹಿಳೆಯರ ವಿವರಗಳನ್ನು ಸಂಗ್ರಹಿಸುವುದಕ್ಕಾಗಿ ಪೊಲೀಸರು ರಾಹುಲ್‌ ಅವರನ್ನು ಭೇಟಿಯಾಗಿದ್ದಾರೆ.

ಇದು ರಾಜಕೀಯ ದ್ವೇಷ ಮತ್ತು ನಾಚಿಕೆಗೇಡಿನ ಕೃತ್ಯ ಎಂದು ಕಾಂಗ್ರೆಸ್‌ ಹೇಳಿದೆ. ಅದಾನಿ ಪ್ರಕರಣವೂ ಸೇರಿದಂತೆ ರಾಹುಲ್‌ ಅವರು ಎತ್ತುತ್ತಿರುವ ‘ಹಿತಕರವಲ್ಲದ’ ಮತ್ತು ‘ಉತ್ತರವಿಲ್ಲದ’ ಪ್ರಶ್ನೆಗಳಿಂದ ಪ್ರಧಾನಿ ನರೇಂದ್ರ ಮೋದಿ ಅವರು ‘ಎದೆಗುಂದಿದ್ದಾರೆ’ ಎಂಬುದನ್ನು ಇದು ಸಾಬೀತು ಮಾಡಿದೆ. ‘ಭಾರತ್‌ ಜೋಡೊ ಯಾತ್ರೆ’ಯ ಸಮಾರೋಪ ಕಾರ್ಯಕ್ರಮದ ಭಾಷಣದಲ್ಲಿ ರಾಹುಲ್‌ ಹೇಳಿದ ವಿಚಾರಕ್ಕೆ ಸಂಬಂಧಿಸಿ ಅವರಿಗೆ ನೋಟಿಸ್‌ ನೀಡಲಾಗಿದೆ. ಸಮಾರೋಪ ನಡೆದು 45 ದಿನಗಳ ಬಳಿಕ ನೋಟಿಸ್‌ ನೀಡಿರುವುದೇ ಈ ನಡೆಯ ಹಿಂದಿನ ಉದ್ದೇಶ ಮತ್ತು ಅದನ್ನು ಎಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ ಎಂಬುದನ್ನು ತೋರಿಸುತ್ತದೆ ಎಂದು ಕಾಂಗ್ರೆಸ್‌ ಹೇಳಿದೆ.

ಇದು ದ್ವೇಷದ ಕ್ರಮ ಎಂಬ ಕಾಂಗ್ರೆಸ್‌ ಆರೋಪವನ್ನು ಬಿಜೆಪಿ ನಿರಾಕರಿಸಿದೆ. ದೆಹಲಿ ಪೊಲೀಸರು ತಮ್ಮ ಕಾನೂನುಬದ್ಧ ಕರ್ತವ್ಯವನ್ನಷ್ಟೇ ಮಾಡಿದ್ದಾರೆ ಎಂದು ಬಿಜೆಪಿ ಹೇಳಿದೆ.‌

ವಿಶೇಷ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಸಾಗರ್‌ಪ್ರೀತ್‌ ಹೂಡಾ ಅವರ ನೇತೃತ್ವದ ತಂಡವು ರಾಹುಲ್‌ ಅವರ ಮನೆಗೆ ಭಾನುವಾರ ಬೆಳಿಗ್ಗೆ ಭೇಟಿ ಕೊಟ್ಟಿದೆ.

ರಾಹುಲ್‌ ಭೇಟಿಯ ಬಳಿಕ ಹೂಡಾ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ್ದಾರೆ. ರಾಹುಲ್‌ ಅವರ ಹೇಳಿಕೆಯು ಪೊಲೀಸರ ಗಮನಕ್ಕೆ ಬರಲೇಬೇಕು. ಏಕೆಂದರೆ ಅವರು ದೆಹಲಿಯಲ್ಲಿ ವಾಸಿಸುತ್ತಿದ್ದಾರೆ ಹಾಗೂ ಯಾತ್ರೆಯು ದೆಹಲಿಯನ್ನೂ ಹಾದು ಹೋಗಿದೆ. ಹಾಗಾಗಿ, ನಗರ ವ್ಯಾಪ್ತಿಯಲ್ಲಿ ಇರುವ ಸಂತ್ರಸ್ತರ ಮಾಹಿತಿ ಸಂಗ್ರಹಿಸಲು ಬಯಸಿದ್ದೇವೆ ಎಂದು ಅವರು ಹೇಳಿದ್ದಾರೆ.

ತಮ್ಮ ಮೇಲೆ ಲೈಂಗಿಕ ದೌರ್ಜನ್ಯ, ಕೌಟುಂಬಿಕ ಹಿಂಸೆ ಆಗಿದೆ ಎಂದು ಕೆಲವು ಮಹಿಳೆಯರು ಹೇಳಿದ್ದಾಗಿ ರಾಹುಲ್‌ ಹೇಳಿಕೊಂಡಿದ್ದಾರೆ. ನಾವು ತನಿಖೆ ನಡೆಸಿದರೂ ಅಂಥ ಘಟನೆ ನಡೆದದ್ದು ಗಮನಕ್ಕೆ ಬಂದಿಲ್ಲ. ಹಾಗಾಗಿ, ರಾಹುಲ್‌ ಅವರನ್ನೇ ಭೇಟಿಯಾಗಿ ಮಾಹಿತಿ ಕೇಳಿದ್ದೇವೆ ಎಂದು ತಿಳಿಸಿದ್ದಾರೆ.

ರಾಹುಲ್ ಅವರು ಜನವರಿ 30ರಂದು ಹೇಳಿಕೆ ನೀಡಿದ್ದರು. ಅವರನ್ನು ಸಂಪರ್ಕಿಸಲು ಇಷ್ಟೊಂದು ತಡವಾಗಿದ್ದು ಏಕೆ ಎಂಬ ಪ್ರಶ್ನೆಗೆ, ರಾಹುಲ್ ಅವರು ವಿದೇಶಕ್ಕೆ ಹೋಗಿ ಬಂದ ಬಳಿಕ ಅವರನ್ನು ಸಂಪರ್ಕಿಸಲಾಯಿತು ಎಂದು ಹೂಡಾ ಉತ್ತರಿಸಿದ್ದಾರೆ. ರಾಹುಲ್ ಅವರು ಫೆ. 28ರಂದು ಲಂಡನ್‌ಗೆ ಹೋದವರು ಮಾರ್ಚ್‌ 15ರಂದು ಹಿಂದಿರುಗಿದ್ದರು.

ರಾಹುಲ್‌ ಅವರನ್ನು ವಿಚಾರಣೆಗೆ ಒಳಪಡಿಸಿದ್ದ ಕ್ರಮಕ್ಕೆ ಕಾಂಗ್ರೆಸ್‌ ಆಕ್ರೋಶ ವ್ಯಕ್ತ‍ಪಡಿಸಿದೆ. ‘ಮೋದಿ ಅವರ ಬೆಸ್ಟ್‌ ಫ್ರೆಂಡ್‌ ಅನ್ನು ರಕ್ಷಿಸುವ ಪ‍್ರಯತ್ನದಲ್ಲಿ ಸರ್ಕಾರವು ದಿಕ್ಕೆಟ್ಟು ಹೋಗಿದೆ. ಜಂಟಿ ಸಂಸದೀಯ ಸಮಿತಿ ರಚಿಸಿ, ಸತ್ಯ ಹೊರಕ್ಕೆ ತನ್ನಿ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ವಿವರಗಳನ್ನು ಸಂಗ್ರಹಿಸಿ ನೀಡಲು ಸ್ವಲ್ಪ ಸಮಯ ಬೇಕು ಎಂದು ಇದೇ 16ರಂದು ರಾಹುಲ್‌ ಹೇಳಿದ್ದನ್ನು ಪೊಲೀಸರು ಒಪ್ಪಿದ್ದರು ಎಂದು ಕಾಂಗ್ರೆಸ್‌ ಮುಖಂಡ ಅಭಿಷೇಕ್ ಮನು ಸಿಂಘ್ವಿ ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕುಮ್ಮಕ್ಕು ಇಲ್ಲದೆ ಪೊಲೀಸರು ಇಂಥ ಕ್ರಮಕ್ಕೆ ಮುಂದಾಗು ವುದಿಲ್ಲ ಎಂದು ರಾಜಸ್ಥಾನ ಸಿ.ಎಂ ಅಶೋಕ್‌ ಗೆಹಲೋತ್‌ ಹೇಳಿದ್ದಾರೆ.

‘ನೋಟಿಸ್‌ಗೆ ವಿವರವಾದ ಉತ್ತರ ನೀಡುತ್ತೇವೆ. ಆದರೆ, ರಾಜಕೀಯ ಯಾತ್ರೆಯ ಬಳಿಕ ಯಾವುದೇ ಪಕ್ಷದ ನಾಯಕನಿಗೆ ನೋಟಿಸ್‌ ನೀಡಿದ ನಿದರ್ಶನ ಕಳೆದ 75 ವರ್ಷಗಳಲ್ಲಿ ಇಲ್ಲ. ಇದು ಸಣ್ಣತನದ ಪರಮಾವಧಿ’ ಎಂದು ಸಿಂಘ್ವಿ ಟೀಕಿಸಿದ್ದಾರೆ.

ಶಾ ಅವರ ಆದೇಶವಿಲ್ಲದೇ ಪೊಲೀಸರು ಇಷ್ಟೊಂದು ಧಾರ್ಷ್ಟ್ಯ ತೋರಲು ಸಾಧ್ಯವಿಲ್ಲ. ನೋಟಿಸ್‌ಗೆ ಉತ್ತರಿಸಲಾಗುವುದು ಎಂದು ರಾಹುಲ್‌ ಹೇಳಿದ ಬಳಿಕವೂ ಪೊಲೀಸರು ರಾಹುಲ್‌ ಮನೆಗೆ ಹೋಗಿದ್ದಾರೆ. ತುರ್ತು ಪರಿಸ್ಥಿತಿ ಬಳಿಕ, ಇಂದಿರಾ ಮನೆಗೆ ಪೊಲೀಸರನ್ನು ಕಳುಹಿಸಿದ ಪಕ್ಷಗಳ ಗತಿ ಏನಾಗಿದೆ ಎಂಬುದನ್ನು ಮರೆಯಬಾ ರದು ಎಂದು ಗೆಹಲೋತ್‌ ಹೇಳಿದ್ದಾರೆ.

‘ರಾಹುಲ್ ತಡೆಯಲು ಪೊಲೀಸ್‌ ಬಳಕೆ’

ಬೆಳಗಾವಿ: ‘ರಾಹುಲ್‌ ಗಾಂಧಿ ಅವರು ಮಾರ್ಚ್‌ 20ರಂದು ಕರ್ನಾಟಕದಲ್ಲಿ ಯುವಜನರಿಗೆ ದೊಡ್ಡ ಕೊಡುಗೆ ಘೋಷಣೆ ಮಾಡಲಿದ್ದಾರೆ. ಹೆದರಿರುವ ಬಿಜೆಪಿ ನಾಯಕರು ಅವರನ್ನು ತಡೆಯಲು ಪೊಲೀಸರನ್ನು ಉಪಯೋಗಿಸಿದ್ದಾರೆ’ ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲಾ ಕಿಡಿ ಕಾರಿದರು.

‘ಯುವಜನರನ್ನು ರಾಹುಲ್‌ ಗಾಂಧಿ ಜಾಗೃತಗೊಳಿಸುತ್ತಿದ್ದಾರೆ. ಅವರನ್ನು ತಡೆಯಲು ಸರ್ವಾಧಿಕಾರಿ ಯತ್ನಿಸು‌ತ್ತಿದ್ದಾರೆ. ಸರ್ವಾಧಿಕಾರಿಗೆ ಭೀತಿಯಾದಾಗಲೆಲ್ಲ ಪೊಲೀಸರನ್ನು ಬಳಸುತ್ತಾರೆ. ರಾಹುಲ್‌ ಮನೆಗೆ ಪೊಲೀಸರನ್ನು ಕಳುಹಿಸಿದ್ದೂ ಇದೇ ಕಾರಣಕ್ಕೆ’ ಎಂದು ದೂರಿದರು.

ಪ್ರಕ್ರಿಯೆಗೆ ಪ್ರಶ್ನೆ

l ಭಾನುವಾರ ಬೆಳಿಗ್ಗೆ 10 ಗಂಟೆಗೆ ಪೊಲೀಸರು ರಾಹುಲ್ ಮನೆಗೆ ಹೋಗಿದ್ದಾರೆ. ಸುಮಾರು 2 ತಾಸು ಬಳಿಕ ಪೊಲೀಸರು–ರಾಹುಲ್‌ ಭೇಟಿ ನಡೆದಿದೆ. ಮಧ್ಯಾಹ್ನ 1ರ ಹೊತ್ತಿಗೆ ಪೊಲೀಸರು ವಾಪಸ್‌ ಹೋಗಿದ್ದಾರೆ

l ರಾಹುಲ್‌ ತಮ್ಮ ಪ್ರತಿಕ್ರಿಯೆಯಲ್ಲಿ ಪೊಲೀಸರು ಅನುಸರಿಸಿದ ಪ್ರಕ್ರಿಯೆ
ಯನ್ನು ಪ್ರಶ್ನಿಸಿದ್ದಾರೆ. ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿಲ್ಲ

l ಮಾರ್ಚ್‌ 16ರಂದು ಪೊಲೀಸರ ಜೊತೆ ನಡೆದ ಸಂಭಾಷಣೆಯನ್ನು ಪ್ರತಿಕ್ರಿಯೆಯಲ್ಲಿ ಉಲ್ಲೇಖಿಸಲಾಗಿದೆ. ಆಗ ಒಂದು ವಾರದಿಂದ 10 ದಿನಗಳ ಸಮಯ ನೀಡಲು ಪೊಲೀಸರು ಒಪ್ಪಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಮರಳಿ ಬರಲು ಕಾರಣವೇನು ಎಂದು ರಾಹುಲ್ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT