ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಭರವಸೆ ಈಡೇರಿಕೆ ಪಕ್ಷದ ಹೊಣೆಗಾರಿಕೆ ಅಲ್ಲ: ಅಲಹಾಬಾದ್‌ ಹೈಕೋರ್ಟ್‌

ಅಮಿತ್‌ ಶಾ ವಿರುದ್ಧ ಪ್ರಕರಣ ದಾಖಲಿಸಲು ಕೋರಿದ್ದ ಅರ್ಜಿ
Last Updated 18 ಮಾರ್ಚ್ 2022, 21:40 IST
ಅಕ್ಷರ ಗಾತ್ರ

ಲಖನೌ: ಚುನಾವಣೆ ಸಂದರ್ಭದಲ್ಲಿ ಜನರಿಗೆ ನೀಡಿದ ಭರವಸೆಯನ್ನು ಈಡೇರಿಸದೇ ಇದ್ದರೆ ಅದಕ್ಕೆ ರಾಜಕೀಯ ಪಕ್ಷಗಳನ್ನು ಉತ್ತರದಾಯಿ ಮಾಡಲು ಸಾಧ್ಯವಿಲ್ಲ ಎಂದು ಅಲಹಾಬಾದ್‌ ಹೈಕೋರ್ಟ್‌ ತೀರ್ಪು ನೀಡಿದೆ.

2014ರ ಲೋಕಸಭಾ ಚುನಾವಣೆ ಯ ಸಂದರ್ಭದಲ್ಲಿ ಬಿಜೆಪಿ ಪ್ರಣಾಳಿಕೆ ಯಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಹಾಗಾಗಿ, ಆಗ ಪಕ್ಷದ ಅಧ್ಯಕ್ಷರಾಗಿದ್ದ ಅಮಿತ್ ಶಾ ಅವರ ವಿರುದ್ದ ಅಪರಾಧ ಪ್ರಕರಣ ದಾಖಲಿ ಸಬೇಕು ಎಂದು ಕೋರಿ ಕೆಳ ನ್ಯಾಯಾಲಯ ವೊಂದರಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಆ ನ್ಯಾಯಾಲಯವು ವಜಾ ಮಾಡಿತ್ತು. ಅದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಮೇಲ್ಮನವಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ದಿನೇಶ್‌ ಪಾಠಕ್‌ ಅವರ ಏಕಸದಸ್ಯ ಪೀಠವು ಈ ತೀರ್ಪು ನೀಡಿದೆ.

ಯಾವುದೇ ಪಕ್ಷದ ಚುನಾವಣಾ ಪ್ರಣಾಳಿಕೆಯ ಆ ಪಕ್ಷದ ನೀತಿ, ನಿಲುವು, ಭರವಸೆಗಳು ಮತ್ತು ಪ್ರತಿಜ್ಞೆ ಆಗಿರುತ್ತದೆ. ಆದರೆ, ಆ ಭರವಸೆಗಳನ್ನು ಕಡ್ಡಾಯವಾಗಿ ಈಡೇರಿಸಬೇಕು ಎಂದು ಹೇಳಲಾಗದು. ಭರವಸೆಗಳನ್ನು ಈಡೇರಿಸಬೇಕು ಎಂದು ನ್ಯಾಯಾಲಯವು ಆದೇಶ ನೀಡಲು ಸಾಧ್ಯವಿಲ್ಲ.ಚುನಾವಣಾ ಪ್ರಣಾಳಿಕೆಯ ಭರವಸೆಗಳನ್ನು ಈಡೇರಿಸದೇ ಇದ್ದಾಗ ಪಕ್ಷದ ವಿರುದ್ಧ ಕ್ರಮ ಕೈಗೊಳ್ಳಲು ಯಾವುದೇ ಕಾಯ್ದೆಯ ಬಲವೂ ಇಲ್ಲ ಎಂದು ತೀರ್ಪಿನಲ್ಲಿ ಹೇಳಲಾಗಿದೆ.

ಪಕ್ಷವು ಭರವಸೆಗಳನ್ನು ಈಡೇರಿಸಿಲ್ಲ ಎಂದು ಜನರಿಗೆ ಅನಿಸಿದರೆ, ತಮ್ಮ ಅಸಮಾಧಾನವನ್ನು ಅವರು ಮುಂದಿನ ಚುನಾವಣೆಯಲ್ಲಿ ತೋರಿಸಬಹುದು ಎಂದು ಪೀಠವು ಹೇಳಿದೆ.

ಬ್ರಿಟನ್‌ನ ನ್ಯಾಯಾಲಯದಲ್ಲಿ ನಡೆದ ಬ್ರೋಮ್ಲಿ ಲಂಡನ್‌ ಬರೋ ಕೌನ್ಸಿಲ್‌ ಮತ್ತು ಗ್ರೇಟರ್‌ ಲಂಡನ್‌ ಕೌನ್ಸಿಲ್‌ ನಡುವಣ ಪ್ರಕರಣದ ತೀರ್ಪನ್ನು ನ್ಯಾಯಮೂರ್ತಿ ಉಲ್ಲೇಖಿಸಿದ್ದಾರೆ. ರಾಜಕೀಯ ಪಕ್ಷದ ಪ್ರಣಾಳಿಕೆಯನ್ನು ವೇದವಾಕ್ಯ ಎಂದು ಪರಿಗಣಿಸಬೇಕಿಲ್ಲ. ಅದು ಸಹಿ ಮಾಡಿ ಕೊಟ್ಟ ಕರಾರು ಪತ್ರವೂ ಅಲ್ಲ.ಕಾರ್ಯಸಾಧುವಲ್ಲದ ಅಥವಾ ಈಡೇರಿಸಲು ಸಾಧ್ಯವೇ ಇಲ್ಲದ ಭರವಸೆಗಳು ಅಥವಾ ಪ್ರಸ್ತಾವಗಳನ್ನು ಪ್ರಣಾಳಿಕೆಯು ಹೊಂದಿರಬಹುದು.

ಮತದಾರರಲ್ಲಿ ಕೆಲವೇ ಕೆಲವು ಮಂದಿ ಮಾತ್ರ ಪ್ರಣಾಳಿಕೆಯನ್ನು ಪೂರ್ಣವಾಗಿ ಓದಿರುತ್ತಾರೆ. ಜನರು ಪಕ್ಷಕ್ಕೆ ಮತ ಹಾಕುತ್ತಾರೆಯೇ ವಿನಾ ಪ್ರಣಾಳಿಕೆಗೆ ಅಲ್ಲ ಎಂದು ಬ್ರಿಟನ್‌ನ ನ್ಯಾಯಮೂರ್ತಿ ಡೆನಿಂಗ್‌ ಹೇಳಿದ್ದನ್ನು ಪೀಠವು ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT