ಬುಧವಾರ, ಡಿಸೆಂಬರ್ 8, 2021
25 °C

ಗೋವಾ: ಮಮತಾ ಬ್ಯಾನರ್ಜಿ ಚಿತ್ರಗಳಿದ್ದ ಪೋಸ್ಟರ್‌, ಫಲಕಗಳು ವಿರೂಪ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪಣಜಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಭೇಟಿಗೂ ಮುನ್ನ ಗೋವಾ ರಾಜ್ಯದಲ್ಲಿ ಅವರ ಚಿತ್ರಗಳಿದ್ದ ಹಲವು ಫಲಕಗಳನ್ನು ವಿರೂಪಗೊಳಿಸಲಾಗಿದೆ. ಈ ಕೃತ್ಯವನ್ನು ಖಂಡಿಸಿರುವ ತೃಣಮೂಲ ಕಾಂಗ್ರೆಸ್, ಇದು ಬಿಜೆಪಿಯ ‘ಅಸಹಿಷ್ಣುತೆ’ಯನ್ನು ಬಿಂಬಿಸುತ್ತದೆ ಎಂದು ಹೇಳಿದೆ.

ಮುಂದಿನ ವರ್ಷ ಗೋವಾ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಅದರ ತಯಾರಿಗಾಗಿ ಮಮತಾ ಬ್ಯಾನರ್ಜಿ ಶುಕ್ರವಾರ ಗೋವಾಗೆ ಭೇಟಿ ನೀಡಲಿದ್ದಾರೆ. ಈಗಾಗಲೇ, ಗೋವಾ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಟಿಎಂಸಿ ಪ್ರಕಟಿಸಿದೆ.

ಪಕ್ಷದ ವರಿಷ್ಠೆ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರನ್ನು ತುಳಿಯಲು ಪ್ರಯತ್ನಿಸುತ್ತಿರುವ ಕಾರ್ಟೂನ್ ಅನ್ನು ತೃಣಮೂಲ ಕಾಂಗ್ರೆಸ್‌ನ ಗೋವಾ ಘಟಕವು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ ಎಂದು ಬಿಜೆಪಿ ಭಾನುವಾರ ಆರೋಪಿಸಿತ್ತು. ಬ್ಯಾನರ್ಜಿ ನೇತೃತ್ವದ ಪಕ್ಷವು ಮಾಡಿದ ಟ್ವೀಟ್ ಅನ್ನು ತಕ್ಷಣವೇ ಅಳಿಸಲಾಗಿದೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ್ ಅವರ ಕಚೇರಿಯು ಹೇಳಿಕೆಯಲ್ಲಿ ತಿಳಿಸಿದೆ.

ಈ ಕುರಿತ ಟ್ವೀಟ್‌ನ ಸ್ಕ್ರೀನ್‌ಶಾಟ್ ವೈರಲ್ ಆಗುತ್ತಿದ್ದಂತೆ ಮಮತಾ ಬ್ಯಾನರ್ಜಿಯವರ ಚಿತ್ರಗಳಿದ್ದ ಟಿಎಂಸಿ ಹಾಕಿದ್ದ ಹಲವಾರು ಪೋಸ್ಟರ್‌ಗಳು ಮತ್ತು ಫಲಕಗಳನ್ನು ಧ್ವಂಸಗೊಳಿಸಲಾಗಿದೆ.

ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಟಿಎಂಸಿಯ ರಾಜ್ಯಸಭಾ ಸದಸ್ಯ ಡೆರೆಕ್ ಒಬ್ರಿಯಾನ್, ‘ದೇಶದಲ್ಲಿರುವ ಏಕೈಕ ಮಹಿಳಾ ಮುಖ್ಯಮಂತ್ರಿಯನ್ನು ಅವಮಾನಿಸಲಾಗಿದೆ, ಇದು ಗೋವಾದ ಸಂಸ್ಕೃತಿಯಲ್ಲ ಎಂದು ನಮಗೆಲ್ಲರಿಗೂ ತಿಳಿದಿದೆ’ಎಂದು ಹೇಳಿದ್ದಾರೆ. ಬಿಜೆಪಿ ಧ್ವಂಸಗೊಳಿಸಿದ ಫಲಕಗಳಿಗೆ ಗುತ್ತಿಗೆದಾರರು ತಮ್ಮ ಜೇಬಿನಿಂದ ಹಣ ಪಾವತಿಸಬೇಕಾಗಿದೆ. ಬಿಜೆಪಿ ತನ್ನ ಪಕ್ಷದ ವಿರುದ್ಧ ಹೋರಾಡಲು ಬಯಸಿದರೆ, ಅದನ್ನು ರಾಜಕೀಯವಾಗಿ ಮಾಡಬೇಕು ಎಂದು ಅವರು ಹರಿಹಾಯ್ದಿದ್ದಾರೆ.

‘ಸಾರ್ವಜನಿಕರ ಮುಂದೆ ಇರಿಸಲಾದ ಚಾರ್ಜ್ ಶೀಟ್‌ಗೆ ನೀವು ಏಕೆ ಪ್ರತಿಕ್ರಿಯಿಸುವುದಿಲ್ಲ’ಎಂದು ಅವರು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ. ಈ ವಾರದ ಆರಂಭದಲ್ಲಿ ಗೋವಾದ ಬಿಜೆಪಿ ಸರ್ಕಾರ ಮತ್ತು ಹಿಂದಿನ ಅವಧಿಗಳ ವಿರುದ್ಧ ಟಿಎಂಸಿ ಬಿಡುಗಡೆ ಮಾಡಿದ 10 ಅಂಶಗಳ ಚಾರ್ಜ್ ಶೀಟ್ ಅನ್ನು ಅವರು ಉಲ್ಲೇಖಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು