ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನ ಬಂದ್‌ಗೆ ರೈತರ ಸಿದ್ಧತೆ, ಕಾಯ್ದೆ ರದ್ದತಿಯೇ ಗುರಿ

ವಿರೋಧಪಕ್ಷಗಳ ವಿರುದ್ಧ ಬಿಜೆಪಿ ವಾಗ್ದಾಳಿ
Last Updated 7 ಡಿಸೆಂಬರ್ 2020, 19:58 IST
ಅಕ್ಷರ ಗಾತ್ರ

ನವದೆಹಲಿ: ನೂತನ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಮಂಗಳವಾರ ಭಾರತ್‌ ಬಂದ್‌ ಆಚರಿಸಲು 20ಕ್ಕೂ ಹೆಚ್ಚು ರಾಜಕೀಯ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳು ಸಿದ್ಧತೆ ಮಾಡಿಕೊಂಡಿವೆ. ಕಾಯ್ದೆಗಳ ಸಂಪೂರ್ಣ ರದ್ದತಿಯೇ ನಮ್ಮ ಗುರಿ ಎಂದು ರೈತರು ಹೇಳಿದ್ದಾರೆ.

‘ಬಂದ್‌ ಶಾಂತಿಯುತವಾಗಿರುತ್ತದೆ ಎಂಬುದನ್ನು ಖಾತರಿಪಡಿಸುವ ಜವಾಬ್ದಾರಿ ಕೆಂದ್ರ ಸರ್ಕಾರದ ಮೇಲಿದೆ’ ಎಂದು ಹೇಳಿರುವ ಕಾಂಗ್ರೆಸ್‌, ಬಂದ್‌ನಿಂದ ಜನರಿಗೆ ಆಗುವ ಅನನುಕೂಲಗಳ ಹೊಣೆಯನ್ನು ಕೇಂದ್ರವೇ ಹೊರಬೇಕು’ ಎಂದಿದೆ.

‘ಅದಾನಿ–ಅಂಬಾನಿ ಕೃಷಿ ಕಾಯ್ದೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಬೇಕು. ಇದರಲ್ಲಿ ಯಾವುದೇ ಹೊಂದಾಣಿಕೆ ಇಲ್ಲ’ ಎಂದು ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಹೇಳಿದ್ದಾರೆ.

ಇನ್ನೊಂದೆಡೆ, ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರದ ಸಚಿವ ರವಿಶಂಕರ್‌ ಪ್ರಸಾದ್‌, ‘ತಾನು ಅಧಿಕಾರದಲ್ಲಿದ್ದಾಗ ಕೃಷಿ ಕಾನೂನುಗಳಲ್ಲಿ ಇದೇ ಬದಲಾವಣೆಗಳನ್ನು ತರಲು ಕಾಂಗ್ರೆಸ್‌ ಇಚ್ಛಿಸಿತ್ತು. ಕೃಷಿ ಕ್ಷೇತ್ರದ ಖಾಸಗೀಕರಣಕ್ಕೆ ಕಾಂಗ್ರೆಸ್‌ ಹಾಗೂ ಅಂದಿನ ಕೃಷಿ ಸಚಿವ ಶರದ್‌ ಪವಾರ್‌ ಮುಂದಾಗಿದ್ದರು. ಈಗ ರಾಜಕೀಯ ಉದ್ದೇಶದಿಂದ ವಿರೋಧ ವ್ಯಕ್ತಪಡಿಸುತ್ತಿದ್ದಾರೆ’ ಎಂದಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹಾಗೂ ಪವಾರ್‌ ವಿರುದ್ಧ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್‌ ಅವರೂ ವಾಗ್ದಾಳಿ ನಡೆಸಿದ್ದಾರೆ. ‘ಕೃಷಿ ಉತ್ಪನ್ನಗಳನ್ನು ಯಾವಾಗ ಎಲ್ಲಿ ಬೇಕಾದರೂ ಮಾರಾಟಕ್ಕೆ ಅವಕಾಶ ಇರಬೇಕು ಎಂದು ಪವಾರ್‌ ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ. ಈ ಕಾನೂನನ್ನು ಅವರು ಎಂದೂ ವಿರೋಧಿಸಿರಲಿಲ್ಲ’ ಎಂದು ಫಡಣವಿಸ್‌ ಹೇಳಿದ್ದಾರೆ.

‘ಬಂದ್‌ ಯಶಸ್ವಿಯಾಗುವುದಿಲ್ಲ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ’ ಎಂದು ಬಿಜೆಪಿ ಆಡಳಿತದ ರಾಜ್ಯಗಳ ಮುಖ್ಯಮಂತ್ರಿಗಳು ಹೇಳಿದ್ದಾರೆ.

ರಾಜ್ಯಗಳಿಗೆ ಸಲಹೆ: ಬಂದ್‌ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಗೃಹ ಸಚಿವಾಲಯವು ಎಲ್ಲಾ ರಾಜ್ಯಗಳಿಗೆ ಸಲಹೆ ನೀಡಿದೆ.

ಈ ಬಗ್ಗೆ ಎಲ್ಲಾ ರಾಜ್ಯಗಳಿಗೆ ಪತ್ರ ಕಳುಹಿಸಿರುವ ಕೇಂದ್ರವು ‘ಕೋವಿಡ್‌-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು, ಎಲ್ಲಾ ಕಡೆ ಅಗತ್ಯ ಭದ್ರತಾ ವ್ಯವಸ್ಥೆ ಮಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದೆ.

ಒತ್ತಡ ಬೇಡ: ಬಂದ್‌ ಬೆಂಬಲಿಸಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಯಾರ ಮೇಲೂ ಒತ್ತಡ ಹೇರ
ಬಾರದು ಎಂದು ರೈತ ಮುಖಂಡರು ಮನವಿ ಮಾಡಿದ್ದಾರೆ.

‘ಕೇಂದ್ರ ಸರ್ಕಾರವು ನಮ್ಮ ಬೇಡಿಕೆಗಳನ್ನು ಒಪ್ಪಲೇಬೇಕು. ಕಾಯ್ದೆಗಳ ರದ್ದತಿ ಬಿಟ್ಟು ಯಾವ ಪರ್ಯಾಯಕ್ಕೂ ನಾವು ಒಪ್ಪುವುದಿಲ್ಲ. ಬಂದ್‌ ಯಶಸ್ವಿಯಾಗುವುದು ಖಚಿತ’ ಎಂದು ರೈತ ಮುಖಂಡ ಬಲ್‌ಬೀರ್‌ ಸಿಂಗ್‌ ರಾಜೆವಾಲ್‌ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.

ಮತ್ತೊಮ್ಮೆ ಸಮರ್ಥನೆ

ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ಕೃಷಿ ಕಾಯ್ದೆಗಳನ್ನು ಪುನಃ ಸಮರ್ಥಿಸಿಕೊಂಡಿದ್ದಾರೆ. ಆಗ್ರಾದಲ್ಲಿ ಮೆಟ್ರೊ ರೈಲು ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಹಳೆಯ ಶತಮಾನಗಳ ಕಾನೂನುಗಳನ್ನಿಟ್ಟುಕೊಂಡು ಮುಂದಿನ ಶತಮಾನವನ್ನು ರೂಪಿಸಲು ಸಾಧ್ಯವಿಲ್ಲ. ಹಿಂದೆ ಉಪಯೋಗಿಯಾಗಿದ್ದ ಕೆಲವು ಕಾನೂನುಗಳು ಇಂದು ಹೊರೆಯಾಗಿವೆ. ಇತ್ತೀಚಿನ ದಿನಗಳಲ್ಲಿ ಕೈಗೊಂಡಿರುವ ಸುಧಾರಣಾ ಕ್ರಮಗಳಿಂದ ಜನರಲ್ಲಿ ಹೊಸ ವಿಶ್ವಾಸ ಮೂಡಿದೆ. ಸೂಕ್ಷ್ಮವಾಗಿ ಗಮನಿಸಿದರೆ ಇದು ನಿಮಗೂ ಅರ್ಥವಾಗುತ್ತದೆ’ ಎಂದು ಕೃಷಿ ಕಾಯ್ದೆಗಳನ್ನು ಉಲ್ಲೇಖಿಸದೆ ಹೇಳಿದರು. ಪ್ರತಿಭಟನೆಗೆ ಇಳಿಯುವುದಕ್ಕೂ ಮುನ್ನ, ರೈತರು ಹೊಸ ಕೃಷಿ ಕಾಯ್ದೆಗಳ ಅಧ್ಯಯನ ನಡೆಸುವುದು ಅಗತ್ಯ ಎಂಬುದನ್ನು ಪ್ರಧಾನಿ ಸೂಚ್ಯವಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT