ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂದಿನ ತಲೆಮಾರುಗಳಿಗಾಗಿ ಪ್ರಕೃತಿ ರಕ್ಷಿಸಿ: ರಾಮನಾಥ ಕೋವಿಂದ್‌ ಕರೆ

Last Updated 24 ಜುಲೈ 2022, 20:04 IST
ಅಕ್ಷರ ಗಾತ್ರ

ನವದೆಹಲಿ: ನಿಸರ್ಗ ಮಾತೆಯು ದಟ್ಟ ನೋವಿನಲ್ಲಿದ್ದಾಳೆ. ಹವಾಮಾನ ಬಿಕ್ಕಟ್ಟು ಈ ಗ್ರಹದ ಭವಿಷ್ಯಕ್ಕೆ ಗಂಡಾಂತರ ತರಬಹುದು ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ತಮ್ಮ ವಿದಾಯ ಭಾಷಣದಲ್ಲಿ ಭಾನುವಾರ ಹೇಳಿದ್ದಾರೆ. ಮುಂದಿನ ತಲೆಮಾರುಗಳಿಗಾಗಿ ನಿಸರ್ಗವನ್ನು ರಕ್ಷಿಸುವಂತೆ ಅವರು ಕರೆ ನೀಡಿದ್ದಾರೆ.

21ನೇ ಶತಮಾನವನ್ನು ಭಾರತದ ಶತಮಾನವಾಗಿಸಲು ದೇಶವು ಸಜ್ಜಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಆರೋಗ್ಯ, ಶಿಕ್ಷಣ ಕ್ಷೇತ್ರಗಳ ಜತೆಗೆ ಆರ್ಥಿಕ ಸುಧಾರಣೆಗಳಿಂದಾಗಿ ಜನರು ತಮ್ಮ ಸಾಮರ್ಥ್ಯವನ್ನು ಕಂಡುಕೊಂಡು ಸಂತಸವಾಗಿ ಇರುವುದು ಸಾಧ್ಯವಾಗುತ್ತದೆ ಎಂದರು.

ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಸೌಕರ್ಯವನ್ನು ಸುಧಾರಿಸುವ ಅಗತ್ಯ ಇದೆ ಎಂಬುದನ್ನು ಸಾಂಕ್ರಾಮಿಕವು ನಮಗೆ ತೋರಿಸಿಕೊಟ್ಟಿದೆ. ಸರ್ಕಾರವು ಈ ವಿಚಾರಕ್ಕೆ ಆದ್ಯತೆ ಕೊಟ್ಟಿದೆ ಎಂಬುದು ಸಂತಸದ ವಿಚಾರ ಎಂದರು.

ಭಾರತದ ಯುವ ಜನರು ಅವರ ಪರಂಪರೆಯ ಜತೆಗೆ ನಂಟು ಹೊಂದುವಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯು ಕೆಲಸ ಮಾಡಲಿದೆ. 21ನೇ ಶತಮಾನದಲ್ಲಿ ಬಲವಾಗಿ ಕಾಲೂರಲು ಇದು ಅವರಿಗೆ ನೆರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವು ಅಮೂರ್ತ ಎಂದು ಭಾವಿಸಬಾರದು. ಅವು ಅತ್ಯುಚ್ಚ, ಉನ್ನತ ಮತ್ತು ಉದ್ಧಾರಕವಾದುದು ಎಂದರು.

‘ತಮ್ಮ ಕಠಿಣ ಶ್ರಮ ಮತ್ತು ಸೇವಾ ಮನೋಭಾವದ ಮೂಲಕ ನಮ್ಮ ಹಿಂದಿನವರು ಮತ್ತು ಆಧುನಿಕ ದೇಶದ ಸಂಸ್ಥಾಪಕರುನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಅರ್ಥಗಳನ್ನು ವಿಸ್ತರಿಸಿದ್ದಾರೆ. ಅವರು ಹಾಕಿಕೊಟ್ಟ ಹಾದಿಯಲ್ಲಿ ನಾವು ನಡೆದರೆ ಸಾಕು. ಸಾಮಾನ್ಯ ಪ್ರಜೆಗೆ ಈ ತತ್ವಗಳು ಯಾವ ಅರ್ಥವನ್ನು ಕೊಡುತ್ತವೆ? ಜೀವನದಲ್ಲಿ ಸಂತಸವನ್ನು ಕಂಡುಕೊಳ್ಳುವುದೇ ಮುಖ್ಯ ಗುರಿ ಎಂದು ನನ್ನ ಭಾವನೆ. ಅದಕ್ಕೆ ಬೇಕಾದ ಮೂಲಭೂತ ಅಗತ್ಯಗಳನ್ನು ‍‍‍ಪೂರೈಸುವ ದಿಸೆಯಲ್ಲಿ ಕೆಲಸ ಮಾಡಬೇಕು’ ಎಂದು ಕೋವಿಂದ್‌ ಹೇಳಿದ್ದಾರೆ.

ನೆನಪುಗಳ ಮೆಲುಕು

ಹಿಂದಿನ ನೆನಪುಗಳನ್ನು ಕೋವಿಂದ್‌ ಅವರು ಮೆಲುಕು ಹಾಕಿದರು. ದೇಶವು ಸ್ವಾತಂತ್ರ್ಯ ಪಡೆದುಕೊಂಡ ನಂತರದ ದಿನಗಳ ಬಗ್ಗೆ ಮಾತನಾಡಿದರು. ‘ಆಗ, ದೇಶ ಕಟ್ಟುವುದಕ್ಕಾಗಿ ಹೊಸ ಚೈತನ್ಯ ಚಿಮ್ಮುತ್ತಿತ್ತು. ಹೊಸ ಕನಸುಗಳಿದ್ದವು. ನನ್ನಲ್ಲೂ ಕನಸುಗಳಿದ್ದವು. ದೇಶ ಕಟ್ಟುವ ಪ್ರಕ್ರಿಯೆಯಲ್ಲಿ ನಾನೂ ಒಂದಲ್ಲ ಒಂದು ದಿನ ಭಾಗಿಯಾಗಬೇಕು ಎಂಬುದು ನನ್ನ ಕನಸಾಗಿತ್ತು’ ಎಂದರು.

‘ಮಣ್ಣಿನ ಮನೆಯಲ್ಲಿರುವ ಹುಡುಗನಿಗೆ ಗಣರಾಜ್ಯದ ಅತ್ಯುನ್ನತ ಸಾಂಸ್ಥಿಕ ಹುದ್ದೆಯ ಬಗ್ಗೆ ಯಾವ ಗ್ರಹಿಕೆಯೂ ಇರಲಿಲ್ಲ. ಆದರೆ, ಯಾವುದೇ ಪ್ರಜೆಯು ನಮ್ಮೆಲ್ಲರ ಸಾಮೂಹಿಕ ಭವಿಷ್ಯ ಕಟ್ಟುವ ಕೆಲಸದಲ್ಲಿ ಭಾಗಿಯಾ‌ಗಲು ಅವಕಾಶವಿದೆ ಮತ್ತು ಅದುವೇ ನಮ್ಮ ಪ್ರಜಾಪ್ರಭುತ್ವದ ಶಕ್ತಿಯ ಪ್ರತೀಕ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT