ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ಚುನಾವಣೆ: ಪ್ರಸ್ತಾವ ಮತ್ತೊಮ್ಮೆ ತಿರಸ್ಕರಿಸಿದ ಪವಾರ್‌

ಇದೇ 20–21ಕ್ಕೆ ವಿರೋಧ ಪಕ್ಷಗಳ ಮತ್ತೊಂದು ಸುತ್ತಿನ ಸಭೆ
Last Updated 15 ಜೂನ್ 2022, 19:45 IST
ಅಕ್ಷರ ಗಾತ್ರ

ನವದೆಹಲಿ:ರಾಷ್ಟ್ರಪತಿ ಚುನಾವಣೆಗೆ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಕಣಕ್ಕಿಳಿಯಲುಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಬುಧವಾರ ಮತ್ತೊಮ್ಮೆ ನಿರಾಕರಿಸಿದ್ದಾರೆ. ಹೀಗಾಗಿ ಅಭ್ಯರ್ಥಿಯ ಆಯ್ಕೆ ಕುರಿತು ಇನ್ನೊಮ್ಮೆ ಚರ್ಚಿಸಲು ವಿರೋಧ ಪಕ್ಷಗಳು ಇದೇ 20– 21ರಂದು ಸಭೆ ಸೇರಲಿವೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದರು.

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಬುಧವಾರ ಕರೆದಿದ್ದ ಮೊದಲ ಸಭೆಯಲ್ಲಿ 17 ವಿರೋಧ ಪಕ್ಷಗಳು ಭಾಗವಹಿಸಿದ್ದವು. ‘ಪ್ರಜಾಪ್ರಭುತ್ವ ನೀತಿಯನ್ನು ಎತ್ತಿಹಿಡಿಯುವ ಸಾಮಾನ್ಯ ವ್ಯಕ್ತಿಯೊಬ್ಬರನ್ನು ವಿರೋಧ ಪಕ್ಷಗಳ ಅಭ್ಯರ್ಥಿಯನ್ನಾಗಿಸಲು’ ಈ ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಅವರು ಹೇಳಿದರು.

ಪವಾರ್‌ ಅವರು ನಿರಾಕರಿಸಿದ ಬಳಿಕ ಬ್ಯಾನರ್ಜಿ ಅವರು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಮತ್ತು ಗೋಪಾಲಕೃಷ್ಣ ಗಾಂಧಿ ಅವರ ಹೆಸರನ್ನು ಪ್ರಸ್ತಾಪಿಸಿದರು. ಗೋಪಾಲಕೃಷ್ಣ ಗಾಂಧಿ ಅವರುಮಹಾತ್ಮಾ ಗಾಂಧಿ ಮತ್ತು ಸಿ.ರಾಜಗೋಪಾಲಾಚಾರಿ ಅವರ ಮೊಮ್ಮಗ.

ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲರೂ ಆದ ಗೋಪಾಲಕೃಷ್ಣ ಗಾಂಧಿ ಅವರು 2017ರಲ್ಲಿ ಉಪರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳಒಮ್ಮತದ ಅಭ್ಯರ್ಥಿಯಾಗಿದ್ದರು. ಆ ಚುನಾವಣೆಯಲ್ಲಿ ಎಂ.ವೆಂಕಯ್ಯ ನಾಯ್ಡು ಆಯ್ಕೆಯಾಗಿದ್ದರು.

ಸುಮಾರು ಎರಡು ಗಂಟೆ ಕಾಲ ನಡೆದ ಸಭೆಯಲ್ಲಿಕಾಂಗ್ರೆಸ್, ಸಮಾಜವಾದಿ ಪಕ್ಷ, ಎನ್‌ಸಿಪಿ, ಟಿಎಂಸಿ, ಡಿಎಂಕೆ, ಆರ್‌ಜೆಡಿ, ಶಿವಸೇನೆ, ಸಿಪಿಐ, ಸಿಪಿಐ(ಎಂ), ಸಿಪಿಐ (ಎಂಎಲ್‌),ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಜೆಡಿಎಸ್, ಆರ್‌ಎಸ್‌ಪಿ, ಐಯುಎಂಎಲ್, ಆರ್‌ಎಲ್‌ಡಿ ಮತ್ತು ಜೆಎಂಎಂ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು. ಆದರೆಎಎಪಿ, ಅಕಾಲಿದಳ, ಎಐಎಂಐಎಂ, ಟಿಆರ್‌ಎಸ್ ಮತ್ತು ಒಡಿಶಾದ ಆಡಳಿತಾರೂಢ ಬಿಜೆಡಿ ನಾಯಕರು ಗೈರಾಗಿದ್ದರು.

ಸಭೆಯ ಆರಂಭದಲ್ಲೇ ಮಮತಾ ಅವರು ಪವಾರ್ ಹೆಸರನ್ನು ಪ್ರಸ್ತಾಪಿಸಿದರು. ಇತರ ನಾಯಕರೂ ಪವಾರ್‌ ಅವರ ಮನವೊಲಿಕೆಗೆ ಪ್ರಯತ್ನಿಸಿದರು. ಆದರೆ ಪ್ರಸ್ತಾವವನ್ನು ತಿರಸ್ಕರಿಸಿದ ಪವಾರ್‌, ‘ನಾನು ಕೊನೆಯವರೆಗೂ ಸಕ್ರಿಯ ರಾಜಕಾರಣದಲ್ಲಿರಲು ಬಯಸುತ್ತೇನೆ’ ಎಂದರು.

ಬಳಿಕ ಮಮತಾ ಅವರು ಫಾರೂಕ್ ಅಬ್ದುಲ್ಲಾ ಮತ್ತು ಗೋಪಾಲಕೃಷ್ಣ ಗಾಂಧಿ ಅವರನ್ನು ಸಂಭವನೀಯ ಅಭ್ಯರ್ಥಿಗಳೆಂದು ಉಲ್ಲೇಖಿಸಿದರು ಎಂದು ಮೂಲಗಳು ತಿಳಿಸಿವೆ.ಆದರೆಅಬುಲ್ಲಾ ಅವರ ಪುತ್ರ ಮತ್ತು ಎನ್‌ಸಿ ನಾಯಕ ಒಮರ್ ಅಬ್ದುಲ್ಲಾ ಅವರು ಈ ಹಂತದಲ್ಲಿ ಹೆಸರುಗಳನ್ನು ಚರ್ಚಿಸುವ ಅಗತ್ಯವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ‘ಕಾಂಗ್ರೆಸ್‌ ಮನದಲ್ಲಿ ಯಾವುದೇ ನಿರ್ದಿಷ್ಟ ಅಭ್ಯರ್ಥಿಯಿಲ್ಲ. ಎಲ್ಲರೂ ಕುಳಿತು ಸರ್ವಸಮ್ಮತ ಅಭ್ಯರ್ಥಿಯನ್ನು ಅಯ್ಕೆ ಮಾಡೋಣ’ ಎಂದು ಸಭೆಯಲ್ಲಿ ಹೇಳಿದರು.

ಜುಲೈ 18ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಬುಧವಾರ ಆರಂಭವಾಗಿದೆ.

ಸರ್ವಸಮ್ಮತ ಅಭ್ಯರ್ಥಿಗೆ ಬಿಜೆಪಿ ಯತ್ನ

ನವದೆಹಲಿ: ವಿರೋಧ ಪಕ್ಷಗಳ ಸಭೆ ನಡೆದ ಬೆನ್ನಲ್ಲೇ, ಆಡಳಿತಾರೂಢ ಬಿಜೆಪಿಯ ಹಿರಿಯ ನಾಯಕ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್ ಅವರು ರಾಷ್ಟ್ರಪತಿ ಹುದ್ದೆಗೆ ಸರ್ವಸಮ್ಮತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ವಿಚಾರವಾಗಿ ಇತರ ಪಕ್ಷಗಳ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ.

ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌, ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌, ಒಡಿಶಾ ಮುಖ್ಯಮಂತ್ತಿ ಹಾಗೂ ಬಿಜೆಡಿ ಮುಖ್ಯಸ್ಥ ನವೀನ್ ಪಟ್ನಾಯಕ್ ಅವರೊಂದಿಗೆ ರಾಜನಾಥ್‌ ಚರ್ಚಿಸಿದ್ದಾರೆ.

ಅಲ್ಲದೆ, ಸಿಂಗ್ ಅವರು ಮಿತ್ರ ಪಕ್ಷ, ಜೆಡಿಯು ನಾಯಕ ನಿತೀಶ್ ಕುಮಾರ್, ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ಮತ್ತು ವೈಎಸ್ಆರ್ ಕಾಂಗ್ರೆಸ್ ನಾಯಕರೂ ಆದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ ಅವರೊಂದಿಗೂ ಚರ್ಚೆ ನಡೆಸಿದ್ದಾರೆ.

ಆದರೆ ಸಿಂಗ್‌ ಅವರು ಮೇಲಿನ ಮುಖಂಡರ ಜೊತೆ ಚರ್ಚೆಯ ವೇಳೆ ಅಭ್ಯರ್ಥಿಯ ಹೆಸರನ್ನು ಬಹಿರಂಗ ಪಡಿಸಲಿಲ್ಲ ಎಂದು ಮೂಲಗಳು ತಿಳಿಸಿವೆ.

11 ನಾಮಪತ್ರ ಸಲ್ಲಿಕೆ

ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದ ಅಧಿಸೂಚನೆಯನ್ನು ಚುನಾವಣಾ ಆಯೋಗ ಬುಧವಾರ ಹೊರಡಿಸಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಮೊದಲ ದಿನ 11 ನಾಮಪತ್ರಗಳು ಸಲ್ಲಿಕೆಯಾಗಿದ್ದು ಈ ಪೈಕಿ ಒಂದು ನಾಮಪತ್ರವನ್ನು ಸೂಕ್ತ ದಾಖಲೆಗಳು ಒದಗಿಸದ ಕಾರಣ ತಿರಸ್ಕರಿಸಲಾಗಿದೆ.

ಜೂನ್‌ 29 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, 30ರಂದು ಪರಿಶೀಲನೆ ನಡೆಯಲಿದೆ. ಜುಲೈ 2 ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಜುಲೈ 21ರಂದು ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT