ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ನಡೆಸಿದ ಕೋವಿಡ್‌ ಸಭೆ 'ಸೂಪರ್‌ ಫ್ಲಾಪ್‌', ಸಿಎಂಗಳಿಗೆ ಅವಮಾನ: ಮಮತಾ

Last Updated 20 ಮೇ 2021, 15:00 IST
ಅಕ್ಷರ ಗಾತ್ರ

ಕೋಲ್ಕತ್ತ: ಕೋವಿಡ್‌–19 ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಸಲಾದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮಾತನಾಡಲು ಅವಕಾಶವೇ ನೀಡಲಿಲ್ಲ, ಅವರನ್ನು ಗೊಂಬೆಗಳ ರೀತಿ ಇರುವಂತೆ ಮಾಡಲಾಗಿತ್ತು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಪ್ರಧಾನ ಮಂತ್ರಿಯ ಸಭೆಯು 'ಸೂಪರ್‌ ಫ್ಲಾಪ್‌' ಎಂದು ಜರಿದಿರುವ ಮಮತಾ, 'ತನ್ನನ್ನು ಮತ್ತು ಹಲವು ರಾಜ್ಯಗಳ ಮುಖ್ಯಮಂತ್ರಿಗಳನ್ನು ಸಭೆಗೆ ಆಹ್ವಾನಿಸಲಾಗಿತ್ತು, ಆದರೆ ಮಾತನಾಡಲು ಅವಕಾಶ ನೀಡಲಿಲ್ಲ. ಅವಮಾನ ಮಾಡುವ ಉದ್ದೇಶದಿಂದಲೇ ಹಾಗೆ ಮಾಡಲಾಗಿದೆ' ಎಂದಿದ್ದಾರೆ.

ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮಾತ್ರವೇ ಸಭೆಯಲ್ಲಿ ಮಾತನಾಡಲು ಅವಕಾಶ ನೀಡಲಾಯಿತು, ಉಳಿದವರನ್ನು 'ಗೊಂಬೆಗಳ ರೀತಿ ಪರಿಗಣಿಸಲಾಗಿತ್ತು', ಅದೊಂದು ಪೂರ್ತಿ ವಿಫಲವಾದ ಸಭೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 10 ರಾಜ್ಯಗಳ ಆಯ್ದ 54 ಜಿಲ್ಲಾಧಿಕಾರಿಗಳೊಂದಿಗೆ ಗುರುವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸಂವಾದ ನಡೆಸಿದರು. ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗಿತ್ತು.

'ಬಿಜೆಪಿ ಆಡಳಿತವಿರುವ ರಾಜ್ಯಗಳ ಸಿಎಂಗಳಿಗೆ ಮಾತ್ರ ಮಾತನಾಡಲು ಅವಕಾಶ ನೀಡಿ, ಉಳಿದವರನ್ನು ಗೊಂಬೆಗಳ ರೀತಿ ಕೂರಿಸಲಾಗಿತ್ತು. ನಮಗೆ ಇದರಿಂದ ಅವಮಾನ ಮತ್ತು ಮುಖಭಂಗವಾದಂತಾಗಿದೆ. ಇದು ದೇಶದ ಒಕ್ಕೂಟ ವ್ಯವಸ್ಥೆಯನ್ನು ತುಳಿದು ಹಾಕುವ ಪ್ರಯತ್ನವಾಗಿದೆ. ಪ್ರಧಾನಿಗೆ ನಮ್ಮ ಮಾತುಗಳನ್ನು ಆಲಿಸಲೂ ಸಾಧ್ಯವಿರದಷ್ಟು ಅಭದ್ರತೆ ಕಾಡುತ್ತಿದೆ...' ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಈ ವಿಚಾರವಾಗಿ ಬಿಜೆಪಿ ಮುಖಂಡ ಸುವೆಂದು ಅಧಿಕಾರಿ ಮಮತಾ ವಿರುದ್ಧ ಹರಿಹಾಯ್ದಿದ್ದಾರೆ. 'ಕೋವಿಡ್‌–19 ವಿರುದ್ಧ ಹೋರಾಟದ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಗೌರವಾನ್ವಿತ ಪ್ರಧಾನಿ ನಡೆಸಿದ ಸಭೆಯನ್ನು ನಮ್ಮ ಮುಖ್ಯಮಂತ್ರಿಗಳು ರಾಜಕೀಯಗೊಳಿಸಿದ್ದಾರೆ. ಮತ್ತೆ ತನ್ನ ಶೈಲಿಯಂತೆಯೇ ನಡೆದುಕೊಂಡಿದ್ದಾರೆ. ಪ್ರಧಾನಿ ಜೊತೆಗಿನ ಹಲವು ಸಭೆಗಳನ್ನು ತಪ್ಪಿಸಿಕೊಂಡಿರುವ ಅವರು, ಈಗ ಪ್ರಧಾನಿ ಮತ್ತು ಜಿಲ್ಲಾಧಿಕಾರಿಗಳ ಸಭೆಯನ್ನು ಮುಂದಿಟ್ಟು ಮಾತನಾಡಲು ಅವಕಾಶ ನೀಡಲಿಲ್ಲ ಎನ್ನುತ್ತಿದ್ದಾರೆ' ಎಂದು ಟೀಕಿಸಿದ್ದಾರೆ.

'ಕೋವಿಡ್‌ ಪರಿಸ್ಥಿತಿಯನ್ನು ಪಶ್ಚಿಮ ಬಂಗಾಳ ಹೇಗೆ ನಿಭಾಯಿಸುತ್ತಿದೆ, ಲಸಿಕೆ ಸಂಗ್ರಹ ಅಥವಾ ಆಮ್ಲಜನಕದ ವ್ಯವಸ್ಥೆಯ ಬಗ್ಗೆಯಾಗಲಿ' ಪ್ರಧಾನ ಮಂತ್ರಿ ವಿಚಾರಿಸಲಿಲ್ಲ ಎಂದು ಮಮತಾ ಆರೋಪಿಸಿದ್ದಾರೆ.

ರಾಜ್ಯದಲ್ಲಿ ನಾಲ್ಕು 'ಬ್ಲ್ಯಾಕ್‌ ಫಂಗಸ್‌' ಪ್ರಕರಣಗಳು ದಾಖಲಾಗಿವೆ, ಅದರ ಬಗ್ಗೆಯೂ ಒಂದೇ ಒಂದು ಪ್ರಶ್ನೆಯನ್ನೂ ಕೇಳಲಿಲ್ಲ ಎಂದಿದ್ದಾರೆ.

ದೇಶದಲ್ಲಿ ಕೋವಿಡ್‌–19 ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ ಎಂದು ಪ್ರಧಾನಿ ಮೋದಿ ಹೇಳಿರುವುದನ್ನು ಪ್ರಸ್ತಾಪಿಸಿರುವ ಮಮತಾ, 'ಒಟ್ಟು ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದ್ದರೆ, ಕೊರೊನಾ ವೈರಸ್‌ ಸೋಂಕಿನಿಂದಾಗಿ ಏಕೆ ಹೆಚ್ಚು ಜನ ಸಾವಿಗೀಡಾಗುತ್ತಿರುವುದು ವರದಿಯಾಗುತ್ತಿದೆ' ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT