ಭಾನುವಾರ, ಜೂನ್ 26, 2022
29 °C

ಕೋವಿಡ್‌ ಸಂಬಂಧಿತ ದತ್ತಾಂಶ ಮುಚ್ಚಿಡುತ್ತಿರುವ ಕೇಂದ್ರ: ಪ್ರಿಯಾಂಕಾ ಗಾಂಧಿ ಆರೋಪ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಕೇಂದ್ರ ಸರ್ಕಾರವು ಕೋವಿಡ್ ಸಾಂಕ್ರಾಮಿಕಕ್ಕೆ ಸಂಬಂಧಿಸಿದ ದತ್ತಾಂಶವನ್ನು ಮುಚ್ಚಿಡುತ್ತಿದೆ. ಅಲ್ಲದೆ ಮೋದಿ ಸರ್ಕಾರವು ಜೀವ ಉಳಿಸುವಂತಹ ಕಾರ್ಯವನ್ನು ಪ್ರಚಾರಕ್ಕಾಗಿ ಬಳಸುತ್ತಿದೆ’ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸೋಮವಾರ ಆರೋಪಿಸಿದ್ದಾರೆ.

‘ಜಿಮೆದಾರ್‌ ಕೌನ್‌?’(ಯಾರು ಜವಾಬ್ದಾರರು?) ಅಭಿಯಾನದಡಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ‘ಜನರ ಜೀವಗಳನ್ನು ಉಳಿಸುವುದಕ್ಕಿಂತ ಪ್ರಧಾನಿ ಮೋದಿ ಅವರ ಘನತೆಯನ್ನು ಕಾಪಾಡುವುದು ಅತಿ ಅವಶ್ಯಕವೇ? ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಫೇಸ್‌ಬುಕ್‌, ಟ್ವಿಟರ್‌, ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿರುವ ಅವರು,‘ ಈ ದತ್ತಾಂಶಗಳನ್ನು ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಪ್ರಮುಖ ಅಸ್ತ್ರವಾಗಿ ಬಳಸಬೇಕಾಗಿತ್ತು. ಆದರೆ ಸಾಂಕ್ರಾಮಿಕ ಆರಂಭದಿಂದಲೂ ಕೇಂದ್ರ ಸರ್ಕಾರ, ಈ ದತ್ತಾಂಶಗಳನ್ನು ಪ್ರಚಾರದ ಟೂಲ್‌ ಆಗಿ ಬಳಸುತ್ತಿದೆ. ಜನರು ಜೀವಗಳನ್ನು ಕಳೆದುಕೊಳ್ಳುತ್ತಿದ್ದರೂ, ತಮ್ಮ ರಾಜಕೀಯ ಉದ್ದೇಶಗಳನ್ನು ಪೂರೈಸಲು ದತ್ತಾಂಶಗಳನ್ನು ತಿರುಚಲಾಗುತ್ತಿದೆ’ ಎಂದರು.

‘ಸಾಂಕ್ರಾಮಿಕದ ಆರಂಭದಿಂದಲೇ ಕೋವಿಡ್‌ ಪ್ರಕರಣಗಳು ಮತ್ತು ಮೃತರ ಸಂಖ್ಯೆಯನ್ನು ಜನಸಂಖ್ಯೆಗೆ ಅನುಗುಣವಾಗಿ ತೋರಿಸಲಾಗುತ್ತಿತ್ತು. ಆದರೆ ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಾಗಿ ತೋರಿಸಲಾಗುತ್ತಿತ್ತು. ಆದರೆ ನಿಜವಾಗಿಯೂ ಪರಿಸ್ಥಿತಿ ಇದಕ್ಕೆ ವ್ಯತಿರಿಕ್ತವಾಗಿತ್ತು. ಮೋದಿ ಸರ್ಕಾರವು ಇದೇ ವಿಧಾನವನ್ನು ಈಗಲೂ ಅನುಸರಿಸುತ್ತಿದೆ’ ಎಂದು ಅವರು ದೂರಿದ್ದಾರೆ.

ಉತ್ತರ ಪ್ರದೇಶ ಸರ್ಕಾರವು ಕೋವಿಡ್‌ ದತ್ತಾಂಶಗಳಲ್ಲಿ ಏರುಪೇರು ಮಾಡಲು ಆರ್‌ಟಿ–ಪಿಸಿಆರ್‌ ಮತ್ತು ಆ್ಯಂಟಿಜೆನ್‌ ಪರೀಕ್ಷೆಯನ್ನು ಅಂಕಿಅಂಶವನ್ನು ಒಟ್ಟಾಗಿ ತೋರಿಸುತ್ತಿದೆ. ಆ್ಯಂಟಿಜೆನ್‌ ಪರೀಕ್ಷೆಯು ಅಷ್ಟೊಂದು ವಿಶ್ವಾಸಾರ್ಹವಲ್ಲ ಎಂಬುದು ತಿಳಿದಿರುವ ವಿಷಯ ಎಂದು ಅವರು ಹೇಳಿದರು.

ಗಂಗಾ ನದಿಯ ದಡದಲ್ಲಿ 2,200 ಶವಗಳು ಪತ್ತೆಯಾಗಿವೆ ಎಂದು ಮಾಧ್ಯಮಗಳು ವರದಿ ಮಾಡಿತ್ತು. ಇದಕ್ಕೆ ಸಂಬಂಧಿಸಿದ ಡ್ರೋನ್‌ ದೃಶ್ಯಗಳು ಕೂಡ ವೈರಲ್‌ ಆಗಿತ್ತು. ಆಗ ಉತ್ತರ ಪ್ರದೇಶ ಸರ್ಕಾರವು ಏಕಾಏಕಿ ‘ಸಫಾಯಿ ಅಭಿಯಾನ’ವನ್ನು(ಸ್ವಚ್ಛತಾ ಅಭಿಯಾನ) ಆರಂಭಿಸಿತು. ವಾರಾಣಸಿ, ಗೋರಖ್‌ಪುರ, ಲಖನೌ, ಕಾನ್ಪುರ, ಝಾನ್ಸಿ, ಮೀರತ್‌ನ ಶವಗಾರಗಳು ಮತ್ತು ಸರ್ಕಾರ ನೀಡುತ್ತಿರುವ ಸಾವಿನ ವರದಿಯಲ್ಲಿ ಭಾರಿ ವ್ಯತ್ಯಾಸವಿದೆ ಎಂದು ಅವರು ಆರೋಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು