ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಖಿಂಪುರ–ಖೇರಿಗೆ ಪ್ರಿಯಾಂಕಾ ಗಾಂಧಿ ವಾದ್ರಾ ಭೇಟಿ, ಪೊಲೀಸರ ವಿರುದ್ಧ ಆರೋಪ

Last Updated 4 ಅಕ್ಟೋಬರ್ 2021, 1:57 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್‌ ಮೌರ್ಯ ಅವರ ಭೇಟಿಯ ವಿರುದ್ಧ ನಡೆದ ರೈತರ ಪ್ರತಿಭಟನೆ ಸಂದರ್ಭದಲ್ಲಿನ ಹಿಂಸಾಚಾರದಲ್ಲಿ ಎಂಟು ಮಂದಿ ಮೃತಪಟ್ಟಿರುವ ಲಖಿಂಪುರ–ಖೇರಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಭಾನುವಾರ ತಡರಾತ್ರಿ ಭೇಟಿ ನೀಡಿದರು. ಈ ವೇಳೆ ಪೊಲೀಸರು ಅಲ್ಲಿಗೆ ಹೋಗುವುದನ್ನು ತಡೆಯಲು ಪ್ರಯತ್ನಿಸಿದರು ಎಂದು ಆರೋಪಿಸಿದ್ದಾರೆ.

ಈ ಹಿಂದೆ, ಪ್ರಿಯಾಂಕಾ ಗಾಂಧಿ ಅವರು ಲಖಿಂಪುರ-ಖೇರಿಗೆ ಭೇಟಿ ನೀಡುವುದನ್ನು ತಡೆಯಲು ಆಕೆಯನ್ನು ಗೃಹಬಂಧನದಲ್ಲಿರಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

ಅಧಿಕಾರಿಗಳ ಪ್ರಕಾರ, ನಾಲ್ಕು ರೈತರು ಸೇರಿದಂತೆ ಎಂಟು ಜನರು ಘಟನೆಯಲ್ಲಿ ಮೃತಪಟ್ಟಿದ್ದಾರೆ. ಪ್ರಿಯಾಂಕಾ ಮತ್ತು ಪಕ್ಷದ ನಾಯಕ ದೀಪಿಂದರ್ ಸಿಂಗ್ ಹೂಡಾ ಭಾನುವಾರ ರಾತ್ರಿ ಲಖನೌಗೆ ಬಂದಿದ್ದರು.

'ಪ್ರಿಯಾಂಕಾ ಜಿ ಅವರು ರೈತರ ಪ್ರತಿಭಟನೆ ನಡೆದ ವೇಳೆ ಹಿಂಸಾಚಾರ ಭುಗಿಲೆದ್ದ ಲಖಿಂಪುರ-ಖೇರಿಗೆ ಹೊರಟಿದ್ದಾರೆ' ಎಂದು ಕಾಂಗ್ರೆಸ್ ವಕ್ತಾರ ಅಶೋಕ್ ಸಿಂಗ್ ಪಿಟಿಐಗೆ ತಿಳಿಸಿದ್ದರು.

ಲಖಿಂಪುರ-ಖೇರಿಗೆ ಹೋಗುವ ದಾರಿಯಲ್ಲಿನ ಅವರ ವಿಡಿಯೊ ಒಂದರಲ್ಲಿ, 'ಸರ್ಕಾರ ತನ್ನ ವಿರುದ್ಧ ಬಲವನ್ನು ಬಳಸಿದರೆ, ಅವರು ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂಬುದನ್ನು ಅದು ತೋರಿಸುತ್ತದೆ. ನಾನು ಯಾವುದೇ ಅಪರಾಧ ಮಾಡಲು ನನ್ನ ಮನೆಯಿಂದ ಹೊರಗೆ ಬಂದಿಲ್ಲ. ನೊಂದ ಕುಟುಂಬಗಳನ್ನು ಭೇಟಿ ಮಾಡಲು ಮತ್ತು ಅವರ ಕಣ್ಣೀರು ಒರೆಸಲು ಮಾತ್ರ ಹೋಗುತ್ತಿದ್ದೇನೆ' ಎಂದು ಅವರು ಹೇಳಿದರು.

'ನೀವು ನನ್ನನ್ನು ಈ ವಾಹನದಲ್ಲಿ ತಡೆದು ನಿಲ್ಲಿಸುತ್ತಿದ್ದೀರಿ. ನೀವೇಕೆ ಅದನ್ನು ನಿಲ್ಲಿಸುತ್ತಿದ್ದೀರಿ? ನಾನು ಸಿಒಗೆ ಕರೆ ಮಾಡಿದರೆ ಅವರು ಅಡಗಿಕೊಳ್ಳುತ್ತಾರೆ. ಅವರು ಮಾಡುತ್ತಿರುವುದು ಸರಿ ಎನ್ನುವುದಾದರೆ ಅವರೇಕೆ ಅಡಗಿಕೊಳ್ಳುತ್ತಾರೆ' ಎಂದು ಪ್ರಿಯಾಂಕಾ ವಿಡಿಯೋದಲ್ಲಿ ಹೇಳಿದ್ದಾರೆ.

'ಇಂದಿನ ಘಟನೆಯು ಸರ್ಕಾರವು ರೈತರನ್ನು ಹತ್ತಿಕ್ಕುವ ರಾಜಕಾರಣವನ್ನು ಮಾಡುತ್ತಿದೆ ಎಂಬುದನ್ನು ಸಾಬೀತುಪಡಿಸುತ್ತದೆ. ಇದು ರೈತರ ದೇಶವಾಗಿದೆ ಮತ್ತು ಇದು ಬಿಜೆಪಿಯ ಅಧಿಕಾರ ಕ್ಷೇತ್ರವಲ್ಲ. ಈ ಭೂಮಿಗೆ ರೈತರು ನೀರುಣಿಸುತ್ತಿದ್ದಾರೆ' ಎಂದು ಅವರು ಹೇಳಿದರು.

ಈ ಮಧ್ಯೆ, ಬಿಎಸ್‌ಪಿ ಪ್ರಧಾನ ಕಾರ್ಯದರ್ಶಿ ಎಸ್‌ಸಿ ಮಿಶ್ರಾ ಅವರ ಮನೆಯ ಹೊರಗೆ ಪೋಲಿಸರು ಅವರು ಮನೆಯಿಂದ ಹೊರಹೋಗದಂತೆ ತಡೆದರು. ಹೀಗಾಗಿ ತಾನು ಲಖಿಂಪುರ-ಖೇರಿಗೆ ಹೋಗುವುದನ್ನು ತಡೆಯುವ ಯಾವುದೇ ಕಾನೂನಿನ ನೋಟಿಸ್ ಇದ್ದರೆ ಅದನ್ನು ತೋರಿಸುವಂತೆ ವಿಡಿಯೊದಲ್ಲಿ ಕೇಳಿದ್ದಾರೆ.

ಪೊಲೀಸರಿಂದಾಗಿ ಅವರು ಭಾನುವಾರ ತಡರಾತ್ರಿ ಲಖಿಂಪುರಕ್ಕೆ ತೆರಳಲು ಸಾಧ್ಯವಾಗಲಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರ ಬೆಂಗಾವಲು ಪಡೆಯ ಎರಡು ಎಸ್‌ಯುವಿಗಳು ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಹರಿಯಿತು. ಇದರಿಂದ ನಾಲ್ವರು ರೈತರು ಬಲಿಯಾದರು. ಆಕ್ರೋಶಗೊಂಡ ರೈತರು ಎರಡೂ ಎಸ್‌ಯುವಿಗಳನ್ನು ತಡೆದು ನಿಲ್ಲಿಸಿ, ಅವುಗಳಿಗೆ ಬೆಂಕಿ ಹಚ್ಚಿದರು. ಈ ಎಸ್‌ಯುವಿಗಳಲ್ಲಿ ಇದ್ದವರಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಲಖಿಂಪುರ–ಖೇರಿ ಜಿಲ್ಲಾಧಿಕಾರಿ ಅರವಿಂದ ಕುಮಾರ್‌ ಚೌರಾಸಿಯಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT