ಶುಕ್ರವಾರ, ಡಿಸೆಂಬರ್ 3, 2021
20 °C

ಬಾಂಗ್ಲಾದಲ್ಲಿ ದುರ್ಗಾಪೂಜೆಗೆ ಅಡ್ಡಿ: ಪ್ರಮುಖರ ಕಳವಳ, ಕ್ರಮಕ್ಕೆ ಆಗ್ರಹ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೋಲ್ಕತ್ತ (ಪಿಟಿಐ): ಬಾಂಗ್ಲಾದೇಶದಲ್ಲಿ ದೇವಸ್ಥಾನ ಮತ್ತು ದುರ್ಗಾಪೂಜೆ ಪೆಂಡಾಲ್‌ಗಳಲ್ಲಿ ನಡೆದ ದಾಂದಲೆ ಕೃತ್ಯಗಳಿಗೆ ಕಾರಣರಾದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಶಿಕ್ಷಣ ತಜ್ಞರು, ರಂಗಭೂಮಿ, ಚಲನಚಿತ್ರ ಕ್ಷೇತ್ರದ ಪ್ರಮುಖರು ಅಲ್ಲಿನ ಪ್ರಧಾನಿಗೆ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಸರ್ಕಾರಕ್ಕೆ ಬಹಿರಂಗ ಪತ್ರ ಬರೆದಿರುವ ವಿವಿಧ ಕ್ಷೇತ್ರಗಳ ಪ್ರಮುಖರು, ಅಡ್ಡಿ ಕೃತ್ಯಗಳಿಂದಾಗಿ ಬಾಂಗ್ಲಾದೇಶದ ಹಿಂದೂ ಸಮುದಾಯದವರು ದುರ್ಗಾಪೂಜೆ ಆಚರಣೆಯನ್ನು ಸುಲಲಿತವಾಗಿ ಆಚರಿಸಲು ಆಗಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ದುರ್ಗಾಪೂಜೆಯ ಪೆಂಡಾಲ್‌ಗಳ ಮೇಲೆ ದಾಳಿ, ಅನುಚಿತ ಘಟನೆಗಳು ನಡೆದಿವೆ. ಈ ಕಾರಣದಿಂದ ಹಿಂದೂಗಳಿಗೆ ಆಚರಣೆ ಸಾಧ್ಯವಾಗಿಲ್ಲ. ಸರ್ಕಾರ ಅಡ್ಡಿಪಡಿಸಿದವರನ್ನು ಗುರುತಿಸಿ ಶಿಕ್ಷೆಗೆ ಒಳಪಡಿಸಬೇಕು ಎಂದು 60 ಮಂದಿ ಪ್ರಮುಖರ ಸಹಿಯುಳ್ಳ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಬಾಂಗ್ಲಾದೇಶ ಸರ್ಕಾರ ಮತ್ತು ಪೊಲೀಸರ ಸಕಾಲಿಕ ಕ್ರಮದಿಂದಾಗಿ ಖಂಡಿತವಾಗಿ ದೊಡ್ಡಮಟ್ಟದ ಅವಘಡ ತಪ್ಪಿದೆ. ಆದರೆ, ನಡೆದಿರುವ ದಾಂದಲೆ ಘಟನೆಗಳು ಮಾನವೀಯತೆಯ ಮೇಲೆ ನಂಬಿಕೆಯನ್ನು ಹೊಂದಿದ್ದವರ ಪ್ರಜ್ಞೆಗೆ ಘಾಸಿ ಉಂಟುಮಾಡಿವೆ ಎಂದು ಪತ್ರದಲ್ಲಿ ಹೇಳಿದ್ದಾರೆ.

ಅಲ್ಪಸಂಖ್ಯಾತ ಸಮುದಾಯದವರ ಜೀವ, ಆಸ್ತಿ, ಹಕ್ಕುಗಳನ್ನು ರಕ್ಷಿಸುವುದು ಸರ್ಕಾರದ ಹೊಣೆಗಾರಿಕೆ. ಇಂತಹ ಭದ್ರತೆಯನ್ನು ಒದಗಿಸುವಲ್ಲಿ ಭಾರತ ಮತ್ತು ಬಾಂಗ್ಲಾದೇಶ ಎರಡೂ ಕಡೆ ಲೋಪವಾಗಿದೆ ಎಂದು ಪತ್ರಕ್ಕೆ ಸಹಿ ಹಾಕಿರುವ ಪ್ರಮುಖರು ಪ್ರತಿಪಾದಿಸಿದ್ದಾರೆ.

ಸಹಿ ಹಾಕಿರುವ ಪ್ರಮುಖರಲ್ಲಿ ಶಿಕ್ಷಣ ತಜ್ಞರಾದ ಪ‍ವಿತ್ರಾ ಸರ್ಕಾರ್, ಸಿಪಿಎಂ ಪಾಲಿಟ್‌ಬ್ಯೂರೊ ಸದಸ್ಯ ಮೊಹಮ್ಮದ್‌ ಸಲೀಂ, ಕೋಲ್ಕತ್ತದ ಮಾಜಿ ಮೇಯರ್ ಬಿಲ್ಕಶ್‌ ಭಟ್ಟಾಚಾರ್ಯ, ರಂಗಭೂಮಿಯ ದೇವ್ ಶಂಕರ್‌ ಹಲ್ದರ್, ಲೇಖಕ ನಬಕುಮಾರ್ ಬಸು, ರಂಗಭೂಮಿ ನಟ ಕೌಶಿಕ್ ಸೇನ್, ಚಿತ್ರ ನಿರ್ಮಾಪಕ ಕಮಲೇಶ್ವರ ಮುಖ್ಯೋಪಾಧ್ಯಾಯ, ನಟರಾದ ಪರಂಬ್ರತಾ ಚಟರ್ಜಿ, ರಿದ್ಧಿ ಸೇನ್‌, ರಿತ್ವಿಕ್‌ ಚಕ್ರವರ್ತಿ ಅವರೂ ಸೇರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು