ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರವಾದಿ ವಿಚಾರ: ಶುಕ್ರವಾರದ ಪ್ರಾರ್ಥನೆ ಬಳಿಕ ದೇಶದೆಲ್ಲೆಡೆ ಮುಸ್ಲಿಮರ ಪ್ರತಿಭಟನೆ

Published : 10 ಜೂನ್ 2022, 11:21 IST
ಫಾಲೋ ಮಾಡಿ
Comments

ನವದೆಹಲಿ: ಪ್ರವಾದಿ ಮಹಮ್ಮದ್‌ ಕುರಿತು ಅವಹೇಳನಕಾರಿ ಮಾತುಗಳನ್ನು ಆಡಿದ್ದ ನೂಪುರ್‌ ಶರ್ಮಾ ಅವರನ್ನು ಬಂಧಿಸುವಂತೆ ಆಗ್ರಹಿಸಿ ದೇಶದ ಹಲವು ಭಾಗಗಳಲ್ಲಿ ಸಾಮೂಹಿಕ ಪ್ರತಿಭಟನೆಗಳು ನಡೆದಿವೆ. ಶುಕ್ರವಾರದ ಪ್ರಾರ್ಥನೆಯ ನಂತರ ದೆಹಲಿಯ ಜಾಮಾ ಮಸೀದಿಯ ಹೊರಗೆ ಪ್ರತಿಭಟನೆ ನಡೆದಿದೆ. ಅದರ ಬೆನ್ನಲ್ಲೇ ಉತ್ತರ ಪ್ರದೇಶ, ಮಹಾರಾಷ್ಟ್ರ, ಕೋಲ್ಕತ್ತ ಹಾಗೂ ಹೈದರಾಬಾದ್‌ನಲ್ಲಿ ಜನರು ರಸ್ತೆಗಿಳಿಸಿದು ಪ್ರತಿಭಟಿಸಿದ್ದಾರೆ.

ಈಗಾಗಲೇ ಬಿಜೆಪಿಯಿಂದ ಅಮಾನತುಗೊಂಡಿರುವ ಪಕ್ಷದ ರಾಷ್ಟ್ರೀಯ ವಕ್ತಾರೆ ನೂಪುರ್‌ ಶರ್ಮಾ ಮತ್ತು ಉಚ್ಚಾಟನೆಯಾಗಿರುವ ನವೀನ್‌ ಜಿಂದಾಲ್‌ ಅವರು ಪ್ರವಾದಿ ಮಹಮ್ಮದ್‌ ಕುರಿತು ಆಡಿರುವ ಅವಹೇಳನಕಾರಿ ಮಾತುಗಳನ್ನು ತೀವ್ರವಾಗಿ ಖಂಡಿಸಿರುವ ಮುಸ್ಲಿಂ ಸಮುದಾಯ ದೇಶದ ಹಲವು ಭಾಗಗಳಲ್ಲಿ ಪ್ರತಿಭಟನೆಗೆ ಮುಂದಾಗಿದೆ. ದೆಹಲಿ ಜಾಮಾ ಮಸೀದಿಯ ಶಾಹಿ ಇಮಾಮ್‌ ಅವರು 'ಪ್ರತಿಭಟನೆಗೆ ಮಸೀದಿಯಿಂದ ಕರೆ ಕೊಟ್ಟಿಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ಕೋಲ್ಕತ್ತದಲ್ಲಿ ಸುಮಾರು 300 ಜನರು ನಮಾಜ್ ಬಳಿಕ ಭಿತ್ತಿ ಪತ್ರಗಳನ್ನು ಹಿಡಿದು ನೂಪುರ್‌ ಬಂಧನಕ್ಕೆ ಆಗ್ರಹಿಸಿದ್ದಾರೆ. ಮಹಾರಾಷ್ಟ್ರದ ಸೋಲಾಪುರದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಪ್ರತಿಭಟನಾ ರ್‍ಯಾಲಿ ನಡೆಸಿದ್ದಾರೆ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ. ಮುರಾದಾಬಾದ್‌ನಲ್ಲಿ ಪೊಲೀಸರು ಲಾಠಿಚಾರ್ಜ್‌ ಮತ್ತು ಅಶ್ರುವಾಯು ಪ್ರಯೋಗಿಸಿ ಗುಂಪನ್ನು ಚದುರಿಸಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿ ಎಡಿಜಿಪಿ ಅವರ ವಾಹನದ ಮೇಲೆ ಕಲ್ಲು ತೂರಲಾಗಿದೆ.

ಕಲ್ಲುತೂರಾಟ ನಡೆಸಿರುವ ಪುಂಡರ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸೂಚಿಸಿದ್ದಾರೆ.

ಜಮ್ಮು-ಕಾಶ್ಮೀರದಲ್ಲೂ ಪ್ರತಿಭಟನೆ:

ಜಮ್ಮು-ಕಾಶ್ಮೀರದ ವಿವಿಧೆಡೆ ಶುಕ್ರವಾರ ಭಾರಿ ಪ್ರತಿಭಟನೆಗಳು ನಡೆದಿವೆ. ಇದರಿಂದಾಗಿ ಜಮ್ಮುವಿನ ಭದರ್ವಾ ಹಾಗೂ ಕಿಶ್ತ್‌ವಾರ್ ಕೆಲವು ಭಾಗಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕಾಗಿ ಕರ್ಫ್ಯೂ ಹೇರಲಾಗಿದೆ.

ಭದರ್ವಾ ಪಟ್ಟಣದಲ್ಲಿ ಕೆಲವು ಕಲ್ಲು ತೂರಾಟದ ಘಟನೆಗಳು ನಡೆದಿದೆ. ಕೆಲವರು ನಿರ್ಬಂಧಗಳನ್ನು ಉಲ್ಲಂಘಿಸಿ, ಭದ್ರತೆ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಭಾಗದಲ್ಲಿ ಇಂಟರ್ನೆಟ್ ಸೇವೆಗಳನ್ನು ತಡೆ ಹಿಡಿಯಲಾಗಿದೆ.

ಹೈದರಾಬಾದ್‌ನ ಮೆಕ್ಕಾ ಮಸೀದಿಯ ಹೊರಭಾಗದಲ್ಲಿ ಜನರು ಪ್ರತಿಭಟನೆ ನಡೆಸಿದ್ದು, ಪೊಲೀಸರು ಮಧ್ಯ ಪ್ರವೇಶಿಸಿ ಜನರನ್ನು ಚದುರಿಸಿದ್ದಾರೆ. ಪೊಲೀಸ್‌ ಮತ್ತು ಸಿಆರ್‌ಪಿಎಫ್‌ ಸಿಬ್ಬಂದಿಯನ್ನು ಸ್ಥಳದಲ್ಲಿ ಭದ್ರತೆಗೆ ನಿಯೋಜಿಸಲಾಗಿದೆ.

ಪಂಜಾಬ್‌ನ ಲೂಧಿಯಾನಾದಲ್ಲಿ ಜಾಮಾ ಮಸೀದಿ ಪ್ರತಿಭಟನೆಗೆ ಕರೆಕೊಟ್ಟಿದೆ. ಪಂಜಾಬ್‌ನ ಹಲವು ಭಾಗಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ.

ದೆಹಲಿಯ ಜಾಮಾ ಮಸೀದಿಯಲ್ಲಿ ಪ್ರಾರ್ಥನೆಗೆ ಸುಮಾರು 1,500 ಮಂದಿ ಸೇರಿದ್ದರು. ಪ್ರಾರ್ಥನೆಯ ನಂತರ 300 ಜನರು ಹೊರಬಂದು ಪ್ರತಿಭಟನೆ ಆರಂಭಿಸಿದರು ಎಂದು ಡಿಸಿಪಿ ಶ್ವೇತಾ ಚೌಹಾಣ್‌ ತಿಳಿಸಿದ್ದಾರೆ.

'ಎಐಎಂಐಎಂ ಅಥವಾ ಓವೈಸಿ ಅವರ ಜನರು ಪ್ರತಿಭಟನೆ ನಡೆಸುತ್ತಿರಬಹುದು. ಅವರು ಪ್ರತಿಭಟನೆ ನಡೆಸುವುದಾದರೆ ನಡೆಸಲಿ, ನಾವು ಅದಕ್ಕೆ ಬೆಂಬಲ ನೀಡುವುದಿಲ್ಲ' ಎಂದು ದೆಹಲಿ ಜಾಮಾ ಮಸೀದಿ ಶಾಹಿ ಇಮಾಮ್‌ ಹೇಳಿದ್ದಾರೆ.

ಆಕ್ಷೇಪಾರ್ಹ ಹೇಳಿಕೆಗಳಿಗೆ ಸಂಬಂಧಿಸಿದಂತೆ ಬಿಜೆಪಿಯು ನಾಯಕರನ್ನು ಅಮಾನತು ಮಾಡಿದ್ದು, ನೂಪುರ್‌ ಶರ್ಮಾ ಈಗಾಗಲೇ ಕ್ಷಮಾಪಣೆಯನ್ನು ಕೋರಿದ್ದಾರೆ. ಆದರೆ. ಅವರನ್ನು ಬಂಧಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಬಿಹಾರದಲ್ಲೂ ಪ್ರಕರಣ (ಮುಜಾಫ್ಫರಪುರ ವರದಿ): ನೂಪುರ್ ಶರ್ಮಾ ಹಾಗೂ ನವೀನ್ ಜಿಂದಾಲ್ ಅವರ ವಿರುದ್ಧ ಶುಕ್ರವಾರ ಇಲ್ಲಿನ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ಎಂ. ರಾಜು ನಾಯರ್ ಅವರು, ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಿದ ದೂರಿನಲ್ಲಿಸಂತ ಸ್ವಾಮಿ ಯತಿ ನರಸಿಂಗಾನಂದ ಅವರನ್ನೂ ಸಹ ಸಹ ಆರೋಪಿಯೆಂದು ಉಲ್ಲೇಖಿಸಲಾಗಿದ್ದು, ಶರ್ಮಾ, ನವೀನ್ ಜಿಂದಾಲ್ ಮತ್ತು ನರಸಿಂಗಾನಂದ ಅವರ ಹೇಳಿಕೆಗಳು ಕೋಮು ಗಲಭೆಗಳಿಗೆ ಪ್ರಚೋದನೆ ನೀಡಲಿವೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

30 ಮಂದಿ ಬಂಧನ:ಸಾರ್ವಜನಿಕ ಸ್ಥಳಗಳು ಮತ್ತು ಸಾಮಾಜಿಕ ಜಾಲತಾಣಗಳ ವೇದಿಕೆಯಲ್ಲಿ ಕೋಮು ಭಾವನೆ ಕೆರಳಿಸಿದ ಆರೋಪದ ಮೇರೆಗೆ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ವಿರೋಧಿಸಿ, ಪಕ್ಷದ ಕಾರ್ಯಕರ್ತರು ಗುರುವಾರ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಅಧಿಕಾರಿಗಳ ಆದೇಶವನ್ನು ಧಿಕ್ಕರಿಸಿದ ಆರೋಪದ ಮೇರೆಗೆ ಮಹಿಳೆಯರು ಸೇರಿದಂತೆ 33 ಪ್ರತಿಭಟನಕಾರರನ್ನು ವಶಕ್ಕೆ ಪಡೆಯಲಾಗಿತ್ತು. ಅವರ ವಿರುದ್ಧ ಪ್ರಕರಣವನ್ನೂ ದಾಖಲಿಸಲಾಗಿತ್ತು. ಇದರಲ್ಲಿ ವಿವಿಧ ಪ್ರಕರಣಗಳಲ್ಲಿ 30 ಮಂದಿಯನ್ನು ಬಂಧಿಸಲಾಗಿದೆ ಎಂದು ದೆಹಲಿಯ ಪೊಲೀಸ್ ಉಪ ಆಯುಕ್ತರು ಶುಕ್ರವಾರ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT