ಬುಧವಾರ, ಆಗಸ್ಟ್ 10, 2022
25 °C

ಐಎಎಸ್‌ ನಿಯೋಜನೆ: ತಿದ್ದುಪಡಿ ಅಸಮಂಜಸ- ನಿವೃತ್ತ ಅಧಿಕಾರಿಗಳ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಐಎಎಸ್, ಐಪಿಎಸ್ ಮತ್ತು ಐಎಫ್‌ಎಸ್ ಒಳಗೊಂಡಂತೆ ನಾಗರಿಕ ಸೇವೆಯ ಅಧಿಕಾರಿಗಳ ನಿಯೋಜನೆ ಕುರಿತ ನಿಯಮಗಳಿಗೆ ತಿದ್ದುಪಡಿ ತರುವ ಕೇಂದ್ರದ ಪ್ರಯತ್ನವು ‘ನಿರಂಕುಶ’, ‘ಅಸಮಂಜಸ’ ಮತ್ತು ‘ಅಸಾಂವಿಧಾನಿಕ’ ಎಂದು 100ಕ್ಕೂ ಅಧಿಕ ನಿವೃತ್ತ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಗುರುವಾರ 109 ನಿವೃತ್ತ ಅಧಿಕಾರಿಗಳು ಹೊರಡಿಸಿರುವ ಪತ್ರಿಕಾ ಪ್ರಕಟಣೆಯಲ್ಲಿ ಈ ಕುರಿತು ವಿವರ ನೀಡಿದ್ದು, ಇದು ಒಕ್ಕೂಟ ವ್ಯವಸ್ಥೆಯನ್ನೇ ಅಣಕಿಸುವ ಬೆಳವಣಿಗೆ ಎಂದು ಹೇಳಿದ್ದಾರೆ.

ಪ್ರಸ್ತಾವಿತ ತಿದ್ದುಪಡಿಯು ಭಾರತದ ಸಂವಿಧಾನದ ಮೂಲ ಉದ್ದೇಶಕ್ಕೇ ಧಕ್ಕೆ ತರುವಂತಹ ಹಸ್ತಕ್ಷೇಪ. ಅಷ್ಟು ಮಾತ್ರವಲ್ಲದೆ, ದೇಶದ ಏಕತೆಗೆ ಅತ್ಯಂತ ನಿರ್ಣಾಯಕ ಎಂದು ರಾಷ್ಟ್ರದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಕನಸಿನ ಒಕ್ಕೂಟ ವ್ಯವಸ್ಥೆಗೆ ಸಾಕಷ್ಟು ಹಾನಿ ಉಂಟುಮಾಡಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ನಿಮಗೆ ಸುರಕ್ಷತಾ ಭಾವ ಒದಗಿಸುವ ಉತ್ತಮ ಅಖಿಲ ಭಾರತ ಸೇವೆ ದೊರೆಯದಿದ್ದರೆ ನಿಮ್ಮ ಒಗ್ಗಟ್ಟು ದೂರವಾಗಲಿದೆ. ನೀವು ಅಖಂಡ ಭಾರತವನ್ನೂ ಹೊಂದಲಾಗದು’ ಎಂಬ ಸರ್ದಾರ್‌ ಪಟೇಲರ ಹೇಳಿಕೆಯನ್ನೂ ಅವರು ಪ್ರಸ್ತಾಪಿಸಿದ್ದಾರೆ.

‘ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸರ್ದಾರ್ ಪಟೇಲ್‌ ಅವರ ಕೊಡುಗೆಯನ್ನು ಹೆಚ್ಚು ಗೌರವಿಸುವ ಕೇಂದ್ರ ಸರ್ಕಾರ, ಅವರ ಆಶಯಗಳತ್ತ ಗಮನ ಹರಿಸುವ ಮೂಲಕ ಈ ತಿದ್ದುಪಡಿ ಪ್ರಸ್ತಾಪವನ್ನು ಕೈಬಿಡಲಿದೆಯೇ’ ಎಂದು ಹಿರಿಯರಾದ ಎ.ಎಸ್. ದುಲತ್, ಶಿವಶಂಕರ್ ಮೆನನ್, ಜಿ.ಕೆ. ಪಿಳ್ಳೈ, ಜೂಲಿಯೊ ರಿಬೇರೊ, ಮ್ಯಾಕ್ಸ್‌ವೆಲ್ ಪೆರೇರಾ, ಎಂ.ಜಿ. ದೇವಸಹಾಯಂ, ವಿ.ಬಾಲಚಂದ್ರನ್, ಮೀರನ್ ಬೋರ್ವಾಂಕರ್ ಹಾಗೂ ಸುಜಾತಾ ಸಿಂಗ್ ಸೇರಿದಂತೆ ಅನೇಕ ಮಾಜಿ ಅಧಿಕಾರಿಗಳು ಪ್ರಶ್ನಿಸಿದ್ದಾರೆ.

ಪ್ರಸ್ತಾವಿತ ತಿದ್ದುಪಡಿಯು ಕೇಡರ್ ನಿಯೋಜನೆಯ ವಿಷಯದಲ್ಲಿ ಕೇಂದ್ರದ ಪರವಾಗಿ ಇರಲಿದ್ದು, ಅಸಮತೋಲನಕ್ಕೆ ಕಾರಣವಾಗಲಿದೆ. ಅಲ್ಲದೆ, ಅಖಿಲ ಭಾರತ ಸೇವೆಗಳಾದ ಐಎಎಸ್‌, ಐಪಿಎಸ್‌ ಮತ್ತು ಐಎಫ್‌ಎಸ್‌ ಸೇವೆಗಳನ್ನು ಕೇವಲ ಕೇಂದ್ರೀಯ ಸೇವೆಗಳನ್ನಾಗಿ ಪರಿವರ್ತಿಸಲಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು