ಬುಧವಾರ, ಜುಲೈ 6, 2022
22 °C

ಮೇಕೆದಾಟು ಪಾದಯಾತ್ರೆ: ಚಲನಚಿತ್ರ ಕಲಾವಿದರ ಬೆಂಬಲಕ್ಕೆ ಕಾಂಗ್ರೆಸ್ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಇದೇ 27ರಂದು ಕಾಂಗ್ರೆಸ್ ಪಕ್ಷ ರಾಮನಗರದಿಂದ ಆರಂಭಿಸಲಿರುವ ಪಾದಯಾತ್ರೆಯಲ್ಲಿ ಕನ್ನಡ ಚಲನಚಿತ್ರ ಕಲಾವಿದರು, ಕನ್ನಡ‌ಪರ ಸಂಘಟನೆಗಳು, ವಿವಿಧ ಕಾರ್ಮಿಕ ಸಂಘಟನೆಗಳು ಪಾಲ್ಗೊಳ್ಳಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.‌ಶಿವಕುಮಾರ್ ಮನವಿ ಮಾಡಿದರು.

ಇಲ್ಲಿನ ಕರ್ನಾಟಕ ಭವನದಲ್ಲಿ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ನಗರದ‌ ಶೇ 25ರಷ್ಟು ಜನತೆಗೆ ಕುಡಿಯುವ ನೀರು ಪೂರೈಸಲು ಮತ್ತು 400 ಮೆಗಾ ವಾಟ್ ವಿದ್ಯುತ್ ಉತ್ಪಾದನೆ ಮಾಡುವ ಉದ್ದೇಶ ಹೊಂದಿರುವ ಈ ಯೋಜನೆಗೆ ಪ್ರತಿಯೊಬ್ಬರೂ ಪಕ್ಷಾತೀತವಾಗಿ ಬೆಂಬಲ ನೀಡಬೇಕು ಎಂದು ಕೋರಿದರು.

ಮೇಕೆದಾಟು ಯೋಜನೆಯಿಂದ 67 ಟಿಎಂಸಿ ಅಡಿ ನೀರನ್ನು ಸಮಾನಾಂತರ ಜಲಾಶಯದಲ್ಲಿ ಸಂಗ್ರಹಿಸಲಾಗುವುದು. ಇದರಿಂದ ಬೇಸಿಗೆಯಲ್ಲಿ ಹೇಮಾವತಿ, ಹಾರಂಗಿ, ಕಬಿನಿ, ಕೆಆರ್‌ಎಸ್ ಜಲಾಶಯಗಳ ಮೇಲಿನ ಒತ್ತಡವೂ ಕಡಿಮೆಯಾಗಲಿದೆ ಎಂದು ಅವರು ಹೇಳಿದರು.

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವೇ ಆಡಳಿತದಲ್ಲಿ ಇದ್ದರೂ, ಮೇಕೆದಾಟು ಯೋಜನೆಗೆ ಅಗತ್ಯವಿರುವ ಪರಿಸರ ಅನುಮತಿ ದೊರೆಯುತ್ತಿಲ್ಲ. ಯೋಜನೆ ವಿರೋಧಿಸಿ ತಮಿಳುನಾಡು ಸಲ್ಲಿಸಿರುವ ಮೇಲ್ಮನವಿ ಕುರಿತು ಸುಪ್ರೀಂ ಕೋರ್ಟ್ ತಡೆ‌ ನೀಡಿಲ್ಲ. ಆದರೂ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಒತ್ತಡ ಹೇರಲು ವಿಫಲವಾಗಿದೆ ಎಂದು ಅವರು ದೂರಿದರು.

ಫೆಬ್ರುವರಿ 27ರಂದು ಬೆಳಿಗ್ಗೆ  9ಕ್ಕೆ ರಾಮನಗರದಿಂದ ಆರಂಭ ಆಗಲಿರುವ ಪಾದಯಾತ್ರೆ ಬಿಡದಿ, ಕೆಂಗೇರಿ ಮೂಲಕ ಬೆಂಗಳೂರು ತಲುಪಲಿದೆ. ನಂತರ ಮಾರ್ಚ್ 3ರಂದು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಮಾವೇಶ ನಡೆಸುವ ಮೂಲಕ ಅಂತ್ಯಗೊಳ್ಳಲಿದೆ ಎಂದು ಅವರು ತಿಳಿಸಿದರು.

ಪಕ್ಷದ ಕಾರ್ಯಾಧ್ಯಕ್ಷರಾದ ಆರ್.ಧ್ರುವನಾರಾಯಣ, ಸಲೀಂ ಅಹಮದ್, ಮುಖಂಡರಾದ ಅಶೋಕ ಪಟ್ಟಣ, ಪ್ರಕಾಶ್ ರಾಠೋಡ, ರಾಘವೇಂದ್ರ ಇಟ್ನಾಳ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು