ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ಪ್ರತಿಭಟನಕಾರರ ಬಂಧನ, ಬಿಡುಗಡೆ

ರಸ್ತೆಯಲ್ಲೇ ಅಡುಗೆ l ಕುಸಿದು ಬಿದ್ದ ರೈತ l ‘ಅನ್ನದಾತರಿಗೆ ಜಯವಾಗಲಿ’ ಎಂದ ಹಾಸನ ಎಸ್ಪಿ
Last Updated 6 ಫೆಬ್ರುವರಿ 2021, 19:52 IST
ಅಕ್ಷರ ಗಾತ್ರ

ಮೈಸೂರು: ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ರೈತರು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ, ಶನಿವಾರ ಪ್ರತಿಭಟನೆ ನಡೆಸಿದರು.

ಮೈಸೂರು– ಬೆಂಗಳೂರು, ಬೆಂಗಳೂರು – ನೀಲಗಿರಿ ಹಾಗೂ ಮೈಸೂರು– ಮಾನಂದವಾಡಿ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್‌ ಮಾಡಿ, ಪ್ರತಿಭಟನೆ ನಡೆಸುತ್ತಿದ್ದ 150ಕ್ಕೂ ಹೆಚ್ಚು ಮಂದಿ ರೈತರನ್ನು ಮೈಸೂರಿ
ನಲ್ಲಿ ವಶಕ್ಕೆ ಪಡೆದ ಪೊಲೀಸರು, ನಂತರ ಬಿಡುಗಡೆ ಮಾಡಿದರು.

ಪ್ರತಿಭಟನೆ ನಡೆಸುತ್ತಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ, ಎಂ.ಉಮಾದೇವಿ ರಸ್ತೆಯಿಂದ ಮೇಲೇಳಲು ನಿರಾಕರಿಸಿದಾಗ ಪೊಲೀಸರು ಅವರನ್ನು ಬಲವಂತವಾಗಿ ಎತ್ತಿಕೊಂಡು ಬಸ್‌ ಹತ್ತಿಸಿದರು.

ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ರೈತರು ಎಪಿಎಂಸಿ ಮುಂಭಾಗ ಕುರಿ, ಮೇಕೆಗಳನ್ನು ತಂದು ಪ್ರತಿಭಟನೆ ನಡೆಸಿದರು. ರಸ್ತೆಯಲ್ಲೇ ಅಡುಗೆ ಮಾಡಲು ಮುಂದಾದವರನ್ನು ಪೊಲೀಸರು ವಶಕ್ಕೆ ಪಡೆದರು.

ಈ ವೇಳೆ ನಂಜುಂಡಸ್ವಾಮಿ ಎಂಬ ರೈತ, ತಮ್ಮ ಕುತ್ತಿಗೆಗೆ ಹಸಿರು ಶಾಲು ಬಿಗಿದುಕೊಳ್ಳಲು ಮುಂದಾದರು. ಇದನ್ನು ಪೊಲೀಸರು ತಡೆಯುವ ವೇಳೆ, ಕುಸಿದು ಬಿದ್ದರು. ಇತರ ರೈತರು ಅವರನ್ನು ಉಪಚರಿಸಿ, ಕರೆದೊಯ್ದರು.

ಹಾಸನದ ಬುಸ್ತೆನಹಳ್ಳಿ ಕ್ರಾಸ್‌ ಹಾಗೂ ಚನ್ನರಾಯಪಟ್ಟಣ ತಾಲ್ಲೂಕಿನ ಶೆಟ್ಟಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ, ಒಂದು ತಾಸಿಗೂ ಹೆಚ್ಚು ಕಾಲ ವಾಹನಗಳು ರಸ್ತೆಯ ಎರಡೂ ಬದಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಬಳಿಕ ಬೂವನಹಳ್ಳಿ ಮಾರ್ಗವಾಗಿ ವಾಹನ ಸಂಚಾರಕ್ಕೆ ಪೊಲೀಸರು ವ್ಯವಸ್ಥೆ ಮಾಡಿದರು. ರೈತರು ಸ್ಥಳದಲ್ಲಿಯೇ ಮುದ್ದೆ, ಅನ್ನ ತಯಾರಿಸಿ ಊಟ ಮಾಡಿದರು. ಹಾಸನದಲ್ಲಿ, ಪ್ರತಿಭಟನೆ ನಿಲ್ಲಿಸುವಂತೆ ಮನವೊಲಿಸಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಶ್ರೀನಿವಾಸಗೌಡ, ರೈತರ ಬೇಡಿಕೆಯಂತೆ ‘ಅನ್ನದಾತರಿಗೆ ಜಯವಾಗಲಿ’ ಎಂದು ಹೇಳಿ, ಪ್ರತಿಭಟನಕಾರರನ್ನು ಅಲ್ಲಿಂದ ಕಳುಹಿಸಿದರು.

ಮಂಡ್ಯದ ವಿ.ಸಿ.ಫಾರಂ ಗೇಟ್‌ ಬೆಳಿ ಒಂದೂವರೆ ಗಂಟೆ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿದ್ದರು. ಚಾಮರಾಜನಗರದಲ್ಲಿ ರೈತರು ರಸ್ತೆ ತಡೆ ನಡೆಸಿದ್ದು, ರಾಷ್ಟ್ರೀಯ ಹೆದ್ದಾರಿ ( 209 ) ತಡೆದ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆ ಮಾಡಿದರು.

ಕಲ್ಯಾಣ ಕರ್ನಾಟಕದ ವಿವಿಧೆಡೆ ಪ್ರತಿಭಟನೆ (ಕಲಬುರ್ಗಿ ವರದಿ): ಕಲಬುರ್ಗಿ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳದಲ್ಲಿ ರೈತರು ಸೇರಿದಂತೆ ವಿವಿಧ ಸಂಘಟನೆಗಳವರು ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರು. ಕೊಪ್ಪಳ ತಾಲ್ಲೂಕಿನ ಹಿಟ್ನಾಳ ಕ್ರಾಸ್‌ನ ಹೆದ್ದಾರಿಯಲ್ಲಿ ಪ್ರತಿಭಟನಕಾರರನ್ನು ಬಂಧಿಸಿ, ನಂತರ ಬಿಡುಗಡೆ ಮಾಡಲಾಯಿತು.

ಮಾನವೀಯತೆ ಮೆರೆದ ಡಿವೈಎಸ್‌ಪಿ (ದಾವಣಗೆರೆ ವರದಿ): ಇಲ್ಲಿನ ಎಚ್.ಕಲಪನಹಳ್ಳಿಯಲ್ಲಿ ರೈತರು ಹೆದ್ದಾರಿ ತಡೆ ನಡೆಸುತ್ತಿದ್ದ ವೇಳೆ ಚಿಕಿತ್ಸೆಗಾಗಿ ಬಸ್‌ನಲ್ಲಿ ದಾವಣಗೆರೆಗೆ ಹೊರಟಿದ್ದ ಮಗುವಿಗೆ ಡಿವೈಎಸ್‌ಪಿ ನರಸಿಂಹ ತಾಮ್ರಧ್ವಜ ಅವರು ಪ್ರತ್ಯೇಕ ವಾಹನದ ವ್ಯವಸ್ಥೆ ಮಾಡಿ ಕಳುಹಿಸಿಕೊಡುವ ಮೂಲಕ ಮಾನವೀಯತೆ ಮೆರೆದರು.

ಭರಮಸಾಗರದ ಮಾನಸ ಅವರು ಒಂದು ವರ್ಷದ ಮಗುವಿನ ಚಿಕಿತ್ಸೆಗಾಗಿ ದಾವಣಗೆರೆಯ ಆಸ್ಪತ್ರೆಗೆ ಬರುತ್ತಿದ್ದರು. ಸಂಚಾರ ಸ್ಥಗಿತಕೊಂಡಿದ್ದರಿಂದ ಪರದಾಡುತ್ತಿದ್ದರು. ತಾಮ್ರಧ್ವಜ ಅವರು ವಾಹನದ ವ್ಯವಸ್ಥೆ ಮಾಡಿ ದಾವಣಗೆರೆಗೆ ಕಳುಹಿಸಿಕೊಟ್ಟರು. ಶಿವಮೊಗ್ಗ, ಚಿತ್ರದುರ್ಗದಲ್ಲೂ ಪ್ರತಿಭಟನೆ ನಡೆಯಿತು.

‘ರಿಯಾನಾ ಭತ್ತದ ಗದ್ದೆ ನೋಡಿದ್ದಾರಾ?’

‘ಪಾಪ್‌ ಗಾಯಕಿ ರಿಯಾನಾ ಎಂದಾದರೂ ಭತ್ತದ ಗದ್ದೆ ನೋಡಿದ್ದಾರಾ? ಗದ್ದೆ ಬಳಿ ನಿಂತು ಫೋಟೊ ತೆಗೆಸಿಕೊಂಡಿರಬಹುದೇ ಹೊರತು, ರೈತರ ಶ್ರಮವನ್ನು ಅರಿತಿದ್ದಾರಾ?‘ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತಿರುಗೇಟು ನೀಡಿದರು.

ಶನಿವಾರ ಇಲ್ಲಿ ಮಾತನಾಡಿದ ಅವರು, ‘ನಮ್ಮ ದೇಶದಲ್ಲಿ ಅಂತರಿಕ ಗೊಂದಲ ಉಂಟುಮಾಡಬೇಕು ಎಂಬ ಉದ್ದೇಶದಿಂದ ಕೆಲವರ ಕೈಗೊಂಬೆಗಳಾಗಿ ಅವರು ರೈತರ ಹೋರಾಟದ ಕುರಿತು ಟ್ವೀಟ್‌ ಮಾಡುತ್ತಿರುತ್ತಾರೆ’ ಎಂದು ಕಿಡಿಕಾರಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಆದರೆ ರೈತನಿಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ. ರೈತರು ಬೆಳೆದ ಬೆಳೆಯನ್ನು ಮುಕ್ತವಾಗಿ ಮಾರಾಟ ಮಾಡುವ ಸ್ವಾತಂತ್ರ್ಯವನ್ನು ನಾವು ನೀಡುತ್ತಿದ್ದೇವೆ’ ಎಂದರು.

ನಕಲಿ ಟ್ವಿಟರ್‌ ಖಾತೆ: ಸೈಬರ್‌ ಕ್ರೈಂ ವಿಭಾಗಕ್ಕೆ ಯದುವೀರ ದೂರು

ರೈತರ ಹೋರಾಟವನ್ನು ಬೆಂಬಲಿಸಿ, ತಮ್ಮ ಹೆಸರಿನ ನಕಲಿ ಖಾತೆಯಿಂದ ಟ್ವೀಟ್‌ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಟರ್‌ ಮೂಲಕವೇ ಸೈಬರ್‌ ಕ್ರೈಂ ವಿಭಾಗಕ್ಕೆ ದೂರು ದಾಖಲಿಸ ಲಾಗಿದೆ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಶನಿವಾರ ಇಲ್ಲಿ ತಿಳಿಸಿದರು.

ಎರಡು– ಮೂರು ವರ್ಷ ಗಳಿಂದ ಬೇರೆ ಬೇರೆ ಸಾಮಾಜಿಕ ಜಾಲತಾಣಗಳ ವೇದಿಕೆಯಲ್ಲಿ ತಮ್ಮ ಹೆಸರಿನ ಖಾತೆ ಹ್ಯಾಕ್‌ ಆಗುತ್ತಿರುವುದಾಗಿ ತಿಳಿಸಿದ ಅವರು, ಈ ಬಗ್ಗೆ ದೂರು ನೀಡಿದ್ದಾಗಿ ತಿಳಿಸಿದರು.

ರೈತರ ಪ್ರತಿಭಟನೆಗೆ ಸಂಬಂಧಿಸಿ ಮಾತನಾಡಿದ ಅವರು, ‘ ಈ ಬಗ್ಗೆ ಹೆಚ್ಚು ಪ್ರತಿಕ್ರಿಯಿಸುವುದು ಸರಿಯಾಗುವುದಿಲ್ಲ. ಆದರೆ, ದೇಶದ ಏಕತೆಯನ್ನು ನಾವೆಲ್ಲರೂ ಬೆಂಬಲಿಸಬೇಕು. ಸಮಸ್ಯೆಗೆ ಬೇಗ ಪರಿಹಾರ ಸಿಗಲಿ’ ಎಂದರು.

ಪೊಲೀಸರ ಜತೆ ರೈತರ ವಾಗ್ವಾದ

ಹುಬ್ಬಳ್ಳಿ: ಕೇಂದ್ರದ ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಉತ್ತರ ಕರ್ನಾಟಕದ ಹಲವೆಡೆ ಶನಿವಾರ ರೈತರು ರಸ್ತೆ ತಡೆ ನಡೆಸಿದರು.

ಹುಬ್ಬಳ್ಳಿ ತಾಲ್ಲೂಕಿನ ಕಿರೇಸೂರು ಗ್ರಾಮದ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳಸಾ ಬಂಡೂರಿ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು. ವಾಹನ ಸಂಚಾರ ತಡೆದು ಪ್ರತಿಭಟಿಸುತ್ತಿದ್ದ ರೈತರನ್ನು ಪೊಲೀಸರು ತೆರವು ಮಾಡಲು ಮುಂದಾದಾಗ ವಾಗ್ವಾದ ನಡೆಯಿತು. ಮುಕ್ಕಾಲು ಗಂಟೆ ಪ್ರತಿಭಟನೆ ನಡೆದ ಪರಿಣಾಮ ಹೆದ್ದಾರಿಯ ಎರಡೂ ಬದಿ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಬೆಳಗಾವಿ ತಾಲ್ಲೂಕಿನ ಹಿರೇಬಾಗೇವಾಡಿ ಟೋಲ್‌ಗೇಟ್‌ನಲ್ಲಿ ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಅಧ್ಯಕ್ಷ ಸಿದಗೌಡ ಮೋದಗಿ ನೇತೃತ್ವದಲ್ಲಿ ರೈತರು ಒಂದು ತಾಸು ಪುಣೆ– ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದರು. ಬಾಯಿ ಬಡಿದುಕೊಂಡು, ರಸ್ತೆಯಲ್ಲಿ ಉರುಳುಸೇವೆ ಮಾಡಿದರು. ಬೈಲಹೊಂಗಲ ತಾಲ್ಲೂಕಿನ ಚಿಕ್ಕಬಾಗೇವಾಡಿಯಲ್ಲಿ ಕೇಂದ್ರದ ಮಾಜಿ ಸಚಿವ ಹಾಗೂ ರೈತ ಮುಖಂಡ ಬಾಬಾಗೌಡ ಪಾಟೀಲ ನೇತೃತ್ವದಲ್ಲಿ ರೈತರು ಬೈಲಹೊಂಗಲ–ಬೆಳಗಾವಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿದರು. ಬಳ್ಳಾರಿ ಜಿಲ್ಲೆಯ ವಿವಿಧೆಡೆ ರೈತರೂ ಸೇರಿದಂತೆ ವಿವಿಧ ಸಂಘಟನೆಗಳ ನೂರಾರು ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ವಿಜಯಪುರದ ಸಿಂದಗಿ ಬೈಪಾಸ್ ಬಳಿ ಹುಬ್ಬಳ್ಳಿ- ಕಲಬುರ್ಗಿ ರಾಷ್ಟ್ರೀಯ ಹೆದ್ದಾರಿ 218 ಬಂದ್ ಮಾಡಿ ರೈತ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಮುಖಂ

ರಕ್ತದಲ್ಲಿ ಸಹಿ ಹಾಕಿದ ಪತ್ರ ಪ್ರಧಾನಿ ಕಚೇರಿಗೆ ರವಾನೆ

ಮಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಪ್ರತಿಭಟನೆ ನಡೆದವು. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಬಳಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಯಿತು. ಉಡುಪಿ ಜಿಲ್ಲೆಯಲ್ಲಿ ಯಾವುದೇ ಪ್ರತಿಭಟನೆ ನಡೆಯಲಿಲ್ಲ.

ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಕ್ತದಲ್ಲಿ ಸಹಿ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಪತ್ರವನ್ನು ಪ್ರಧಾನಿ ಕಚೇರಿಗೆ ಕಳುಹಿಸಲಾಯಿತು. ರೈತ ಸಂಘ–ಹಸಿರುಸೇನೆ, ಬಿಎಸ್‌ಪಿ ಕಾರ್ಯಕರ್ತರು ನಗರದಲ್ಲಿ ರಸ್ತೆ ತಡೆ ನಡೆಸಿದರು.

ಹಿರೇಮಗಳೂರಿನ ವೃತ್ತದಲ್ಲಿ ರೈತ ಸಂಘ–ಹಸಿರುಸೇನೆ, ಬಿಎಸ್‌ಪಿ ಕಾರ್ಯಕರ್ತರು ರಸ್ತೆ ತಡೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT