ಗುರುವಾರ , ಅಕ್ಟೋಬರ್ 22, 2020
21 °C
ರಾಷ್ಟ್ರೀಯ ಭದ್ರತೆ

PV Web Exclusive | ಚೀನಿ ಸೈನಿಕ ನೆಲೆಗಳಿಂದ ಪಂಜಾಬಿ ಹಾಡು: ಇದೆಂಥಾ ಯುದ್ಧತಂತ್ರ

ಡಿ.ಎಂ.ಘನಶ್ಯಾಮ Updated:

ಅಕ್ಷರ ಗಾತ್ರ : | |

Prajavani

ಯುದ್ಧವೆನ್ನುವುದು ಕೇವಲ ಯುದ್ಧಭೂಮಿಯಲ್ಲಿ, ಬಂದೂಕುಗಳ ಮೊನೆಯಲ್ಲಿ ಮಾತ್ರವೇ ನಡೆಯುವುದಿಲ್ಲ. ಯುದ್ಧಗಳು ಮೊದಲು ನಡೆಯುವುದು ಕಮಾಂಡರ್‌ಗಳ ಮನಸ್ಸಿನಲ್ಲಿ, ಅವರ ಮನಸ್ಸಿನಲ್ಲಿ ರೂಪುಗೊಳ್ಳುವ ರಣತಂತ್ರಗಳ ಮುಂದುವರಿದ ಭಾಗವಷ್ಟೇ ಯುದ್ಧಭೂಮಿಯಲ್ಲಿ ಕಂಡುಬರುತ್ತದೆ, ಹೊರಜಗತ್ತಿಗೆ ತಿಳಿಯುತ್ತದೆ. ಸಂಖ್ಯೆ ಮತ್ತು ಸಾಮರ್ಥ್ಯದ ದೃಷ್ಟಿಯಿಂದ ಬಲಾಢ್ಯ ಎನಿಸಿದ್ದ ಶತ್ರು ಸೇನೆಗಳನ್ನು ಇಂಥ ಬುದ್ಧಿವಂತ ಕಮಾಂಡರ್‌ಗಳು ತಮ್ಮ ಚಾಕಚಕ್ಯತೆ, ಸಮಯಪ್ರಜ್ಞೆ ಮತ್ತು ಬುದ್ಧಿವಂತಿಕೆಯಿಂದ ಮಟ್ಟಹಾಕಿದ ನಿದರ್ಶನಗಳಿಗೆ ಕೊರತೆಯಿಲ್ಲ.

ತಮ್ಮ ಸೈನಿಕರ ಮಾನಸಿಕ ದಾರ್ಷ್ಟ್ಯ, ಯುದ್ಧೋತ್ಸಾಹ ಕಾಪಾಡಿಕೊಳ್ಳುವುದರ ಜೊತೆಗೆ ವೈರಿ ಸೇನೆಯನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡುವುದು ಸಹ ಸಾವಿರಾರು ವರ್ಷಗಳಿಂದ ಚಾಲ್ತಿಗೆ ಬಂದಿರುವ ಪ್ರಮುಖ ಯುದ್ಧತಂತ್ರ. ಇದೀಗ ಚೀನಾ ಗಡಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಈ ಯುದ್ಧತಂತ್ರವನ್ನು ಹೊಸ ರೀತಿಯಲ್ಲಿ ಬೆಳಕಿಗೆ ತಂದಿದೆ.

'ಲಡಾಖ್‌ನ ಚಳಿಯಲ್ಲಿಯೂ ನಮ್ಮ ಯೋಧರಿಗೆ ಬಿಸಿ ಊಟ ಕೊಡುತ್ತೇವೆ, ಬೆಚ್ಚನೆ ಬಟ್ಟೆ ಕೊಡುತ್ತೇವೆ' ಎಂದು ಚೀನಾ ಸೇನೆ ಭಾರತೀಯ ಠಾಣೆಗಳಿಗೆ ಮುಖ ಮಾಡಿದ ಧ್ವನಿವರ್ಧಕಗಳಲ್ಲಿ ಹೇಳುತ್ತದೆ. 'ಗಡಿ ಸಂಘರ್ಷ ನಮಗೆ ಬೇಕಿಲ್ಲ. ಲಡಾಖ್ ಚಳಿಗೆ ನಡುಗಬೇಕಾದ ನಿಮ್ಮ ದುಸ್ಥಿತಿಗೆ ನಿಮ್ಮ ಸರ್ಕಾರದ ತಪ್ಪು ನಿರ್ಧಾರಗಳೇ ಕಾರಣ' ಎಂದು ಘೋಷಿಸುತ್ತದೆ. ಇಷ್ಟೆಲ್ಲಾ ಹಿತೋಪದೇಶ ಮುಗಿದ ಮೇಲೆ ಜನಪ್ರಿಯ ಪಂಜಾಬಿ ಗೀತೆಗಳನ್ನು ಅದೇ ಧ್ವನಿವರ್ಧಕಗಳಲ್ಲಿ ಪ್ಲೇ ಮಾಡುತ್ತದೆ. ಇಂಥದ್ದೇ ಮಾಹಿತಿಯನ್ನು ಚೀನಾ ಸರ್ಕಾರದ ಮುಖವಾಣಿ 'ಗ್ಲೋಬಲ್ ಟೈಮ್ಸ್‌' ಸಹ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತಿದೆ. 

ಇದನ್ನು ಮಿಲಿಟರಿ ಸಂವಹನ ತಂತ್ರಗಳಲ್ಲಿ 'ಪ್ರಚಾರ ಯುದ್ಧ' (ಪ್ರೊಪಗಂಡಾ ವಾರ್‌ಫೇರ್) ಎಂದು ಕರೆಯುತ್ತಾರೆ. 1962ರಲ್ಲಿಯೂ ಯುದ್ಧ ತೀವ್ರಗೊಳ್ಳುವ ಮೊದಲು ಇಂಥದ್ದೇ ತಂತ್ರಗಳನ್ನು ಚೀನಾ ಅನುಸರಿಸಿತ್ತು ಎಂಬ ಬಗ್ಗೆ ಬ್ರಿಗೇಡಿಯರ್ ಜಾನ್ ಪಿ. ದಳವಿ ಅವರ 'ಹಿಮಾಲಯನ್ ಬ್ಲಂಡರ್' ಕೃತಿಯಲ್ಲಿ ಉಲ್ಲೇಖಗಳು ಇವೆ.

ಚೀನಾ ಸೇನೆಯ ಈ ನೆಚ್ಚಿನ ಯುದ್ಧತಂತ್ರದ ಹಿಂದೆ 2200 ವರ್ಷಗಳಷ್ಟು ಹಳೆಯದಾದ 'ಗೈಕ್ಸಿಯಾ' ಯುದ್ಧದ ಅನುಭವ ಮತ್ತು 120 ವರ್ಷಗಳ ಹಿಂದಿನ ಬಾಕ್ಸರ್ ಯುದ್ಧದಲ್ಲಿ ಬ್ರಿಟಿಷ್ ಆಧಿಪತ್ಯದಲ್ಲಿದ್ದ ಅಂದಿನ ಭಾರತೀಯ ಸೇನೆಯ ಪಂಜಾಬ್ ರೆಜಿಮೆಂಟ್‌ ಚೀನಾ ನೆಲೆದಲ್ಲಿ ತೋರಿದ್ದ ಪರಾಕ್ರಮದ ನೆರಳನ್ನೂ ಗುರುತಿಸಬಹುದು.

ಇದನ್ನೂ ಓದಿ: 

ಚುಶುಲ್‌ ಬ್ರಿಗೇಡ್ ಕಚೇರಿಯಲ್ಲಿ ನಗುವ ಬುದ್ಧ

ಲಡಾಖ್‌ ಪ್ರಾಂತ್ಯದ ಚುಶುಲ್ ಗ್ರಾಮದಲ್ಲಿ ಭಾರತೀಯ ಸೇನೆಯ ಬ್ರಿಗೇಡ್‌ ಕಚೇರಿಯಿದೆ. ಈಚೆಗಷ್ಟೇ ಚೀನಾ ಮತ್ತು ಭಾರತೀಯ ಸೇನೆಗಳು ಮುಖಾಮುಖಿಯಾಗಿದ್ದ ರೆಝಾಂಗ್‌ ಲಾ-ರೆಚಿನ್ ಲಾ ಕಣಿವೆಗಳ ಸಮೀಪವೇ ಇರುವ ಈ ಬ್ರಿಗೇಡ್‌ನ ಭೋಜನಶಾಲೆಯಲ್ಲಿ ಚಿನ್ನದಲ್ಲಿ ಎರಕಹೊಯ್ದ ನಗುವ ಬುದ್ಧನ ಪುರಾತನ ಪ್ರತಿಮೆಯೊಂದಿದೆ.

ಈ ಶಾಂತಿದೂತನ ಪ್ರತಿಮೆಗೂ, ಚೀನಾ ಸೇನೆಯು ಇದೀಗ ಲಡಾಖ್‌ ಗಡಿಯಲ್ಲಿ ಧ್ವನಿವರ್ಧಕಗಳ ಮೂಲಕ ಪಂಜಾಬಿ ಹಾಡುಗಳನ್ನು ಪ್ಲೇ ಮಾಡುತ್ತಿರುವುದಕ್ಕೂ ಬಾದರಾಯಣ ಸಂಬಂಧವಿದೆ. ಮಾತ್ರವಲ್ಲ, ಸರಿಯಾಗಿ ಒಂದು ಶತಮಾನದ ಹಿಂದೆ ಭಾರತೀಯ ಸೇನೆಯಿಂದ ಚೀನಾ ಅನುಭವಿಸಿದ ಸೋಲಿನ ಛಾಯೆಯ ನೆನಪೂ ಇಣುಕುತ್ತದೆ.

ಚೀನಾದ ಇತಿಹಾಸದ ಬಗ್ಗೆ ತಿಳಿದವರಿಗೆ 'ಬಾಕ್ಸರ್ ಕ್ರಾಂತಿ'ಯ (1899-1901) ಪ್ರಾಮುಖ್ಯತೆಯ ಬಗ್ಗೆ ಹೊಸದಾಗಿ ವಿವರಿಸಬೇಕಿಲ್ಲ. ಕ್ರಿಶ್ಚಿಯನ್ ಮಿಷನರಿಗಳು ಮತ್ತು ವಿದೇಶಿ ಗುಂಪುಗಾರಿಕೆಯ ವಿರುದ್ಧ ಚೀನಾದ ಯುವ ರೈತರು ಮತ್ತು ಕಾರ್ಮಿಕರು ಒಗ್ಗೂಡಿ ರೂಪಿಸಿದ ಈ ಬಂಡಾಯವನ್ನು ಹತ್ತಿಕ್ಕಲು ರಷ್ಯಾ, ಬ್ರಿಟನ್ (ಭಾರತ), ಜಪಾನ್ ಸೇರಿದಂತೆ ಹಲವು ದೇಶಗಳು ಮೈತ್ರಿಕೂಟ ರಚಿಸಿಕೊಂಡು ಸುಮಾರು 20,000 ಸೈನಿಕರನ್ನು ಕಳಿಸಿದ್ದವು. ಈ ಪೈಕಿ 8000 ಮಂದಿ ಬ್ರಿಟಿಷರ ಅಧೀನದಲ್ಲಿ ಭಾರತೀಯ ಸೇನೆಯ ಸಿಖ್ ಮತ್ತು ಪಂಜಾಬ್ ರೆಜಿಮೆಂಟ್‌ನ ಸೈನಿಕರು ಎಂಬುದು ಉಲ್ಲೇಖಾರ್ಹ.

ಅಂದು ಚೀನಾದ ಬಂಡಾಯಗಾರರು ಬೀಜಿಂಗ್‌ನ ಫಾರಿನ್ ಲಿಗೇಶನ್ ಕ್ವಾರ್ಟರ್‌ನಲ್ಲಿ 400 ವಿದೇಶಿಗರನ್ನು ಬಂಧಿಸಿಟ್ಟಿದ್ದರು. ಬಂಧನದ 55 ದಿನಕ್ಕೆ ಮೈತ್ರಿಕೂಟದ ಸೇನೆ ಬೀಜಿಂಗ್‌ ನಗರವನ್ನು ವಶಪಡಿಸಿಕೊಂಡು, ಬಂಧಿತರನ್ನು ಬಿಡುಗಡೆ ಮಾಡಿತು. ಅಂದು ಯುದ್ಧಗೆದ್ದಿದ್ದ ಬ್ರಿಟಿಷ್ ಸೈನ್ಯಾಧಿಕಾರಿಗಳು ಲೂಟಿ ಮಾಡಿದ ವಸ್ತುಗಳನ್ನು ಭಾರತಕ್ಕೆ ತಂದಾಗ ಅದರಲ್ಲಿದ್ದ ನಗುವ ಬುದ್ಧ ಚುಶುಲ್‌ನ ಮಿಲಿಟರಿ ಮೆಸ್‌ ಅನ್ನು ತನ್ನ ತಾಣವಾಗಿಸಿಕೊಂಡ. ಈ ಪೈಕಿ 13ನೇ ಶತಮಾನದ್ದು ಎನ್ನಲಾದ ಚಿನ್ನದ ಲೇಪವಿದ್ದ ಕಂಚಿನ ಗಂಟೆಯನ್ನು ಮಾತ್ರ ಭಾರತೀಯ ಸೇನೆಯು ಬೀಜಿಂಗ್‌ನ ಟೆಂಪಲ್ ಆಫ್ ಹೆವೆನ್‌ಗೆ 1995ರಲ್ಲಿ ಮರಳಿಸಿತು.

ಬಾಕ್ಸರ್‌ ಬಂಡಾಯದಲ್ಲಿ ಅನುಭವಿಸಿದ ಅವಮಾನ ಚೀನಾ ದೇಶವನ್ನು ಬಹುಕಾಲ ಕಾಡಿತ್ತು. 1962ರಲ್ಲಿ ಭಾರತದ ಮೇಲೆ ಚೀನಾ ಮುಗಿಬೀಳಲು ಇದ್ಧ ಹಲವು ಕಾರಣಗಳಲ್ಲಿ (ಬ್ರಿಟಿಷರ ಅಧೀನದಲ್ಲಿದ್ದ) ಭಾರತೀಯ ಸೇನೆಯಿಂದ ಅನುಭವಿಸಿದ್ದ ಸೋಲೂ ಸಹ ಸೇರಿತ್ತು ಎಂದು ಕೆಲವರು ವಿಶ್ಲೇಷಿಸುತ್ತಾರೆ. ಆಸ್ಟ್ರೇಲಿಯಾದ ಪತ್ರಕರ್ತ ನೆವಿಲ್ಲೆ ಮ್ಯಾಕ್ಸ್‌ವೆಲ್ ಬರೆದಿರುವ 'ಇಂಡಿಯಾಸ್ ಚೈನಾ ವಾರ್' ಪುಸ್ತಕದಲ್ಲಿಯೂ ಇಂಥ ವಿಶ್ಲೇಷಣೆಗಳ ಎಳೆಗಳನ್ನು ಗುರುತಿಸಬಹುದು.

ಭಾರತೀಯ ಸೇನೆಯ ಸಿಖ್ ಯೋಧರೇ ಇದೀಗ ತಮ್ಮ ಗಡಿಯ ಮುಂಚೂಣಿ ನೆಲಗಳಲ್ಲಿದ್ದಾರೆ ಎಂದು ಭಾವಿಸಿರುವ ಚೀನಾ ಅದೇ ಕಾರಣಕ್ಕೆ ಪಂಜಾಬಿ ಹಾಡುಗಳನ್ನು ಪ್ಲೇ ಮಾಡುತ್ತಿದೆ. 1967ರಲ್ಲಿ ನಥುಲಾ ಪಾಸ್‌ನಲ್ಲಿ ಚೀನಾ ಸೇನೆಯನ್ನು ಮಣ್ಣು ಮುಕ್ಕಿಸಿದ್ದು ಸಹ ಓರ್ವ ಸಿಖ್ ಕಮಾಂಡರ್ ಎಂಬುದನ್ನೂ ಚೀನಾ ಎಂದಿಗೂ ಮರೆಯಲಾರದು.

ಇದನ್ನೂ ಓದಿ: 

ಯುದ್ಧಗೆಲ್ಲಲು ಹಾಡಿನ ತಂತ್ರ ಬಳಸಿದ ಹಾನ್

ಗಡಿಯಲ್ಲಿ ತಾನು ಪಂಜಾಬಿ ಹಾಡುಗಳನ್ನು ಪ್ಲೇ ಮಾಡುತ್ತಿರುವುದನ್ನು ಹೆಮ್ಮೆಯಿಂದ ಬರೆದುಕೊಂಡಿರುವ ಚೀನಾ ಸರ್ಕಾರದ ಮುಖವಾಣಿ 'ಗ್ಲೋಬಲ್ ಟೈಮ್ಸ್‌' 'ಭಾರತೀಯ ಸೇನೆಗೆ ನಾಲ್ಕೂ ದಿಕ್ಕುಗಳಿಂದ ಚು ಸಾಂಗ್ಸ್‌ ಕೇಳುವ ದುಸ್ಥಿತಿ ಒದಗಿದೆ' ಎಂದು ಹೇಳಿಕೊಂಡಿದೆ. ಈ ವರದಿಯಲ್ಲಿದ್ದ 'ನಾಲ್ಕೂ ದಿಕ್ಕುಗಳಿಂದ ಚು ಸಾಂಗ್ಸ್' (Hearing Chu songs on four sides) ಎನ್ನುವುದು ಸಹ ಯುದ್ಧತಂತ್ರದ ಪಾರಿಭಾಷಿಕ ಪದ. ಈ ವರದಿಯನ್ನು ಸಾಲುಗಳ ನಡುವೆ ಓದಿಕೊಂಡಾಗ, 'ಭಾರತೀಯ ಸೇನೆಯನ್ನು ಚೀನಾ ಸೇನೆ ಎಲ್ಲ ದಿಕ್ಕುಗಳಿಂದ ಸುತ್ತುವರಿದಿದೆ' ಎಂಬ ಅರ್ಥವೂ ಬರುತ್ತದೆ.

ಆದರೆ ಧ್ವನಿವರ್ಧಕಗಳ ಮೂಲಕ ಪಂಜಾಬಿ ಜನಪ್ರಿಯ ಗೀತೆಗಳನ್ನು ಪ್ಲೇ ಮಾಡುವ ಚೀನಾ ಸೇನೆಯ ತಂತ್ರವು ಭಾರತೀಯ ಯೋಧರಲ್ಲಿ ಅಚ್ಚರಿ ಮೂಡಿಸಿದರೂ, ಚೀನಾದ ನಿರೀಕ್ಷೆಯಂತೆ ಅವರ ಮಾನಸಿಕತೆಯ ಮೇಲೆ ಯಾವುದೇ ಪರಿಣಾಮ ಉಂಟುಮಾಡಿಲ್ಲ ಎನ್ನುವುದು ನಿಜ.

ಗಡಿಯಲ್ಲಿ ಹೀಗೆ ಹಾಡು ಹಾಕುವ ಚೀನಾದ ಯುದ್ಧತಂತ್ರದ ಮೇಲೆ 2,200 ವರ್ಷಗಳ ಹಿಂದೆ ನಡೆದ 'ಗೈಕ್ಸಿಯಾ ಯುದ್ಧ'ದ ನೆರಳಿದೆ. ಅಂದಿನ ಯುದ್ಧದಲ್ಲಿ ಹಾನ್ ರಾಜಮನೆತನದ ದೊರೆ ಬಾಂಗ್ ಲಿಯು ಇಂಥದ್ದೇ ತಂತ್ರ ಅನುಸರಿಸಿ ಚು ರಾಜಮನೆತನದ ದೊರೆ ಕ್ಸಿಯಾಂಗ್ ಯು ಎಂಬಾತನನ್ನು ಸೋಲಿಸಿದ್ದ. ಚೀನಾದಲ್ಲಿ ಹಾನ್‌ ಮನೆತನದ ಆಧಿಪತ್ಯ ಸ್ಥಾಪಿಸಿದ್ದ.

ಆಗ, ಅಂದರೆ ಕ್ರಿ.ಪೂ. 206ರಿಂದ 202ರ ಅವಧಿಯಲ್ಲಿ ಚೀನಾದಲ್ಲಿ ಖ್ವಿನ್ ರಾಜಮನೆತನವು ಅಧಿಕಾರ ಕಳೆದುಕೊಂಡಿತ್ತು. ಹಾನ್ ಮತ್ತು ಚು ರಾಜ್ಯಗಳ ನಡುವೆ ಚೀನಾ ಸಾಮ್ರಾಜ್ಯ ನಿಯಂತ್ರಣಕ್ಕಾಗಿ ಯುದ್ಧಗಳು ಆರಂಭವಾಗಿದ್ದವು. ಕ್ರಿ.ಪೂ. 202ರಲ್ಲಿ ಗೈಕ್ಸಿಯಾ ಗಿರಿಶ್ರೇಣಿಗಳಲ್ಲಿ ಚು ದೊರೆ ಕ್ಸಿಯಾಂಗ್ ಯು ನೇತೃತ್ವದ ಸೇನೆಯನ್ನು ಬಾಂಗ್‌ ಲಿ ಯು ಸೇನೆ ಸುತ್ತುವರಿಯಿತು.

ಈ ಸಂದರ್ಭ ಚು ದೊರೆಗೆ ನಿಷ್ಠರಾಗಿದ್ದ ಸೈನಿಕರು ಮತ್ತು ಆ ಕಾಲದ ಸಾಟಿಯಿಲ್ಲದ ಹೋರಾಟಗಾರ ಕ್ಸಿಯಾಂಗ್ ದೊರೆಯ ಯುದ್ಧೋತ್ಸಾಹ ಕುಂದಿಸಲು ಗಿರಿಶ್ರೇಣಿಯ ಸುತ್ತಲಿಂದ ಹಾನ್ ಸೈನಿಕರು ಚು ಹಾಡುಗಳನ್ನು ಹಾಡಲು ಆರಂಭಿಸಿದರು. ಈ ಹಾಡುಗಳನ್ನು ಕೇಳಿಸಿಕೊಂಡ ಚು ಸೈನಿಕರಲ್ಲಿ ಚಿತ್ತವಿಕಲತೆ ತಲೆದೋರಿತು. 'ನಮ್ಮ ನೆಲವನ್ನು ಹಾನ್ ಪಡೆಗಳು ಅತಿಕ್ರಮಿಸಿಕೊಂಡಿವೆ, ನಮ್ಮ ಸಂಬಂಧಿಕರನ್ನು ಯುದ್ಧಭೂಮಿಗೆ ಕೈದಿಗಳಾಗಿ ಕರೆತಂದಿದ್ದಾರೆ' ಎಂದೆಲ್ಲಾ ಚಿತ್ರವಿಚಿತ್ರವಾಗಿ ಯೋಚಿಸಿಕೊಂಡ ಚು ಪಡೆಗಳು ಯುದ್ಧಭೂಮಿಯಿಂದ ಹಿಮ್ಮೆಟ್ಟಿದವು.

ಕೆಲವೇ ದಿನಗಳಲ್ಲಿ ಚು ಯೋಧರಿಗೆ ಮನೆಯತ್ತ ಸೆಳೆತ ಹೆಚ್ಚಾಗಿ ಯುದ್ಧಭೂಮಿಯಿಂದ ಹಿಂದೆ ಸರಿಯತೊಡಗಿದರು. ಎಲ್ಲಕ್ಕಿಂತ ಮುಖ್ಯವಾಗಿ ಚು ದೊರೆಯೂ ತನ್ನ ಆಪ್ತರನ್ನು ನೆನೆದು ಅತ್ತುಬಿಟ್ಟ ಎಂಬ ಸುದ್ದಿಯೊಂದು (ಪ್ರೊಪಗಂಡ) ಸೈನ್ಯದಲ್ಲಿ ಪ್ರಸಾರವಾಯಿತು. ಸರಿಸಾಟಿಯಿಲ್ಲದ ಹೋರಾಟಗಾರನೆನೆಸಿದ್ದ ಕ್ಸಿಯಾಂಗ್ ಯು ಆತ್ಮಹತ್ಯೆ ಮಾಡಿಕೊಂಡ. ಹಾನ್ ಸೇನೆ ಹೆಣೆದಿದ್ದ ಬಲೆಯಲ್ಲಿ ಚು ಸೇನೆ ಹೆಚ್ಚು ಪ್ರತಿರೋಧ ತೋರದೆ ನಿರ್ನಾಮವಾದ ಬಗೆಯಿದು.

ಇದನ್ನೂ ಓದಿ: ‘ಕೇಸರಿ’ ಸಿನಿಮಾ ವಿಮರ್ಶೆ: ಸಾರಾಗಡಿ ಯುದ್ಧದ ಭಾವುಕ ಸಿನಿಮಾ

'ಸಾರಾಗಡಿ' ನೆನಪಿಸಿಕೊಂಡ ಸಿಖ್ ರೆಜಿಮೆಂಟ್

ಸುಮಾರು 2200 ವರ್ಷಗಳಷ್ಟು ಹಳೆಯದಾದ ಈ 'ಹಾಡುವ' ಯುದ್ಧತಂತ್ರ ಈಗಲೂ ಉಪಯೋಗಕ್ಕೆ ಬಂದೀತೆ? ಚೀನಾ ಸೇನೆಯೇನೋ ಹಾಗೆ ಭಾವಿಸಿದಂತಿದೆ. ಆದರೆ ಕೇವಲ ಒಂದು ವಾರದ ಹಿಂದೆಯಷ್ಟೇ 'ಸಾರಾಗಡಿ ದಿನ'ದ 124ನೇ ವರ್ಷಾಚರಣೆಯನ್ನು ಹೆಮ್ಮೆಯಿಂದ ಆಚರಿಸಿಕೊಂಡಿರುವ ಸಿಖ್ ರೆಜಿಮೆಂಟ್‌ನ ಯೋಧರು 'ಏನಾಗುತ್ತೋ ಆಗಲಿ, ಒಂದು ಕೈ ನೋಡಿಯೇ ಬಿಡೋಣ' ಎಂದು ತೋಳು ತಟ್ಟುತ್ತಾರೆ.

12ನೇ ಸೆಪ್ಟೆಂಬರ್‌ನ 1897ರಂದು 22 ಸಿಖ್ ಯೋಧರು, ಸಾವಿರಾರು ಅಫ್ಗನ್ ಎದುರಾಳಿಗಳನ್ನು ಎದುರಿಸಿ ನಿಂತ 'ಸಾರಾಗಡಿ' ಯುದ್ಧ ಎಂದರೆ ಭಾರತೀಯ ಸೇನೆಗೆ ಇಂದಿಗೂ ಹೆಮ್ಮೆಯ ವಿಚಾರ. ವರ್ಷಕ್ಕೊಮ್ಮೆ ಈ ಯುದ್ಧವನ್ನು ನೆನಪಿಸಿಕೊಳ್ಳುವ ಸಿಖ್ ರೆಜಿಮೆಂಟ್ ದೇಶ ರಕ್ಷಣೆ ವಿಚಾರದಲ್ಲಿ ತನ್ನ ತೋಳು ಇಂದಿಗೂ ಅಷ್ಟೇ ಗಟ್ಟಿಮುಟ್ಟು ಎಂದು 'ಸಾರಾಗಡಿ'ಯನ್ನು ನೆನಪಿಸಿಕೊಳ್ಳುವ ಮೂಲಕವೇ ಎದುರಾಳಿಗಳಿಗೆ ನೆನಪಿಸಿಕೊಡುತ್ತದೆ.

ಪಂಜಾಬಿ ಹಾಡು ಪ್ಲೇ ಮಾಡುತ್ತಿರುವ ಚೀನಾ ಸೇನೆಗೆ ಇದು ಅರ್ಥವಾಗಬೇಕಷ್ಟೇ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು